www.karnatakatv.net :ಬೆಳಗಾವಿ: ಕೆಲವು ದಿನಗಳ ಹಿಂದೆ ನೆರೆ ಹಾವಳಿಯಿಂದ ನೆಲೆ ಕಳೆದುಕೊಂಡು ಸಂತ್ರಸ್ತರ ಸ್ಥಳಗಳಿಗೆ ಭೇಟಿ ನೀಡಲು ಕೇಂದ್ರದಿಂದ ನೆರೆ ಪರಿಹಾರ ವೀಕ್ಷಣೆಗೆ ತಂಡ ಆಗಮಿಸಿದ್ದು ಇವತ್ತು ಕೇಂದ್ರ ನೆರೆ ಅಧ್ಯಯನ ತಂಡ ಅರ್ಧ ಗಂಟೆಯಲ್ಲಿ ಮೂರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟು ವಾಪಸ್ ಆಗುವ ಮೂಲಕ ಕಾಟಾಚಾರದ ಭೇಟಿ ನೀಡಿ ವಾಪಸ್ ಬೆಳಗಾವಿಗೆ ತೆರಳಿದ್ದಾರೆ.
ಬೆಳಗಾವಿ ಜಿಲ್ಲೆಗೆ ಆಗಮಿಸಿರುವ ಸುಶೀಲ್ ಪಾಲ್ ನೇತೃತ್ವದ 7 ಜನರ ಕೇಂದ್ರ ನೆರೆ ಅಧ್ಯಯನ ತಂಡ ನಗರದ ಸರ್ಕೀಟ್ ಹೌಸ್ ನಲ್ಲಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿಪಂ ಸಿಇಓ ದರ್ಶನ್ ಎಚ್.ವಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿದರು. ಬಳಿಕ ಅಲ್ಲಿಂದ ಖಾನಾಪೂರಕ್ಕೆ ತೆರಳಿ ಖಾನಾಪೂರ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು.
ಈ ವೇಳೆ ಮಲಪ್ರಭಾ ನದಿ ಬ್ರಿಡ್ಜ್, ಖಾನಾಪುರ ಪೊಲೀಸ್ ತರಬೇತಿ ಶಾಲೆ, ಸೇರಿದಂತೆ ಪ್ರವಾಹ ಪೀಡಿತ ಪ್ರದೇಶಗಳಿಂದ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೇಂದ್ರ ಅಧ್ಯಯನ ತಂಡಕ್ಕೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು, ಮಲಪ್ರಭಾ ನದಿಯಿಂದ ಪ್ರವಾಹ ಉಂಟಾಗಿ ಹಾನಿ ಮತ್ತು ಖಾನಾಪೂರದಲ್ಲಿ ಆಗಿರುವ ಹಾನಿ ಕುರಿತು ಮಾಹಿತಿ ನೀಡಿದರು. ಕೇಂದ್ರ ಅಧ್ಯಯನ ತಂಡಕ್ಕೆ ಜಿಪಂ ಸಿಇಓ ದರ್ಶನ್ ಎಚ್.ವಿ., ಖಾನಾಪುರ ತಹಸಿಲ್ದಾರ್ ರೇಷ್ಮಾ ತಾಳಿಕೋಟಿ ಸಾಥ್ ನೀಡಿದರು.
ಬೆಳಗಾವಿಗೆ ಆಗಮಿಸಿರುವ ಕೇಂದ್ರ ಅಧ್ಯಯನ ತಂಡವೂ ಅರ್ಧ ಗಂಟೆಯಲ್ಲಿ ಮೂರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು. ಖಾನಾಪುರ ತಾಲೂಕಿನ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿರುವ ಕೇಂದ್ರದ ಅಧ್ಯಯನ ತಂಡ ತರಾತುರಿಯಲ್ಲಿ ಭೇಟಿ ನೀಡಿ ಅರ್ಧಗಂಟೆಯಲ್ಲಿ ಮೂರು ಸ್ಥಳಗಳನ್ನು ವೀಕ್ಷಣೆ ನಡೆಸಿ ಬೆಳಗಾವಿಯತ್ತ ಹೊರಟರು. ಈ ವೇಳೆ ನೆರೆ ಸಂತ್ರಸ್ತರನ್ನೂ ಭೇಟಿ ಮಾಡದೇ ಅಧಿಕಾರಿಗಳು ಹೇಳಿದ್ದನ್ನು ಕೇಳಿ ಖಾನಾಪುರದಲ್ಲಿ ಅಧ್ಯಯನ ಮುಗಿಸಿರುವ ಆರೋಪ ಕೇಳಿಬಂದಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಮಾರುತಿ ನಗರದ ಬಳಿ ಮಲಪ್ರಭಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆ ನೆರೆಯಿಂದ ಕೊಚ್ಚಿ ಹೋಗಿತ್ತು.ಅದನ್ನು ವೀಕ್ಷಣೆ ಮಾಡಿದ ಬಳಿಕ ಖಾನಾಪುರದ ಪೊಲೀಸ್ ತರಬೇತಿ ಶಾಲೆ ಹಾಗೂ ಖಾನಾಪುರದಲ್ಲೇ ಕೋಳಿ ಫಾರಂಗೂ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಬಳಿಕ ಕಾಟಾಚಾರಕ್ಕೆ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿರುವ ಕೇಂದ್ರ ನೆರೆ ಅಧ್ಯಯನ ತಂಡ ಬೆಳಗಾವಿ ಜಿಲ್ಲೆಯಲ್ಲಿ ಸಾವಿರಾರು ಎಕರೆ ಬೆಳೆ ನಾಶವಾದರೂ ಒಬ್ಬ ರೈತನ ಸಂಕಷ್ಟ ಆಲಿಸದೇ ಮಾಧ್ಯಮಗಳಿಗೂ ಯಾವುದೇ ಪ್ರತಿಕ್ರಿಯೆ ನೀಡದೆ ವಾಪಾಸ್ ಆಗಿದ್ದು, ಪ್ರವಾಹದಿಂದ ನೆಲೆ ಕಳೆದುಕೊಂಡ ಸಂತ್ರಸ್ತರ ಆಕ್ರೋಶಕ್ಕೆ ಕಾರಣವಾಗಿದೆ.
ನಾಗೇಶ್ ಕುಂಬಳಿ, ಕರ್ನಾಟಕ ಟಿವಿ – ಬೆಳಗಾವಿ