2023ರ ವಿಧಾನಸಭಾ ಚುನಾವಣೆ ವೇಳೆ ನಡೆದಿದೆ ಎನ್ನಲಾದ ಮತ ಗಳ್ಳತನದ ಗಂಭೀರ ತನಿಖೆಗಾಗಿ SIT ಅಧಿಕಾರಿಗಳು ಬುಧವಾರ ಕಲಬುರಗಿ ನಗರದ ಐದು ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಮಹತ್ವದ ದಾಖಲೆಗಳನ್ನ ವಶಪಡಿಸಿಕೊಂಡಿದ್ದಾರೆ.
ದಾಳಿಯ ವೇಳೆ ರಾಶಿ ರಾಶಿ ವೋಟರ್ ಐಡಿಗಳು, 15 ಮೊಬೈಲ್ ಫೋನ್‌ಗಳು ಮತ್ತು 7 ಲ್ಯಾಪ್‌ಟಾಪ್‌ಗಳು ಸೇರಿದಂತೆ ಹಲವಾರು ಇಲೆಕ್ಟ್ರಾನಿಕ್ ಸಾಧನಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಈ ಘಟನೆಯು ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಚುನಾವಣಾ ಅವ್ಯವಹಾರದ ಮೇಲೆ ಮತ್ತಷ್ಟು ಬೆಳಕು ಚೆಲ್ಲುವಂತಾಗಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಕಲಬುರಗಿಯ ಆಳಂದ ಕ್ಷೇತ್ರದಲ್ಲಿ 6038 ಮತಗಳನ್ನು ಅನಧಿಕೃತವಾಗಿ ಡಿಲೀಟ್ ಮಾಡಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು. ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುವ ಉದ್ದೇಶದಿಂದ ಈ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಸ್‌ಐಟಿ ರಚಿಸಿ ತನಿಖೆಗೆ ಆದೇಶಿಸಿತ್ತು.
ಕಳೆದೊಂದು ತಿಂಗಳಿಂದ ಸಾಕಷ್ಟು ಜನರನ್ನ ವಶಕ್ಕೆ ಪಡೆದು ವಿಚಾರಣೆ ಮಾಡಿದ್ದ ಎಸ್ಐಟಿ ಅಧಿಕಾರಿಗಳು ಕೊನೆಗೂ ಬುಧವಾರ ನಗರದ ಐದು ಕಡೆಗಳಲ್ಲಿ ದಾಳಿ ನಡೆಸಿ ಪರೀಶಿಲನೆ ಮಾಡಿದ್ದಾರೆ. ಕಲಬುರಗಿ ನಗರದ ರೋಜಾ ಬಡಾವಣೆ ಅಷ್ಪಾಕ್, ಜುಂಜುಂ ಕಾಲೋನಿಯ ನದೀಂ ಹಾಗೂ ಅಕ್ರಂ, ರಾಮನಗರ ಬಡಾವಣೆಯ ಅಸ್ಲಂ ಹಾಗೂ ಯಾದುಲ್ ಕಾಲೋನಿಯ ಮೊಹಮ್ಮದ ಜುನೈದ ಮನೆ ಮೇಲೆ ದಾಳಿ ಮಾಡಿ ಪರಿಶೀಲಿಸಿದ್ದಾರೆ.
ದಾಳಿ ವೇಳೆ ಲ್ಯಾಪ್ ಟಾಪ್ ಸೇರಿದಂತೆ ಕೆಲ ಕಡತಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಸಹ ಎಸ್ಐಟಿ ಅಧಿಕಾರಿಗಳಿಂದ ಶೋಧ ಕಾರ್ಯ ಮುಂದುವರೆಯಲಿದೆ. ಈ ಪ್ರಕರಣವು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ರಾಜಕೀಯ ಟಾಕ್‌ಫೈಟ್‌ಗೆ ಕಾರಣವಾಗಿದ್ದು, ತನಿಖೆಯ ಪ್ರಗತಿಗೆ ಎರಡು ಪಕ್ಷಗಳೂ ಕಣ್ಣಿಡುತ್ತಿವೆ. ನಿಖರ ದಾಖಲೆಗಳು ಹೊರಬಿದ್ದ ನಂತರ ಎಫ್‌ಐಆರ್ ವಿಸ್ತರಣೆ ಹಾಗೂ ಹೆಚ್ಚಿನ ಬಂಧನಗಳ ಸಾಧ್ಯತೆಗಳನ್ನ ನಿರೀಕ್ಷಿಸಲಾಗಿದೆ.
ವರದಿ : ಲಾವಣ್ಯ ಅನಿಗೋಳ