ಪ್ರತಾಪ್ ಸಿಂಹ ಅವರಿಗೆ ಅವರ ಪಕ್ಷದಲ್ಲಿ ಟಿಕೆಟ್ ಕೊಟ್ಟಿಲ್ಲ. ಹಾಗಾಗಿ ಬಿಜೆಪಿ ರಾಜಕೀಯವಾಗಿ ತಮ್ಮನ್ನು ಜೀವಂತವಾಗಿ ತೋರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಾಪ್ ಸಿಂಹರಿಗೆ ಈ ಬಾರಿ ಟಿಕೆಟ್ ಸಿಗಲಿಲ್ಲ. ಅವರು ಈಗ ತಮ್ಮ ರಾಜಕೀಯ ಪ್ರಸ್ತಿತಿಯನ್ನು ಪೋಷಿಸಲು ಈ ರೀತಿ ಕ್ರಮಕೈಗೊಂಡಿದ್ದಾರೆ ಎಂದು ಟೀಕಿಸಿದರು.
ದಸರಾ ನಾಡಹಬ್ಬದ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಅವರಿಗೆ ರಾಜ್ಯ ಸರ್ಕಾರ ಆಹ್ವಾನ ನೀಡಿದೆ. ಅದನ್ನ ಪ್ರಶ್ನಿಸಿ ಪ್ರತಾಪ್ ಸಿಂಹ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಆದ್ರೆ ಸದ್ಯ ಆ ಅರ್ಜಿಯನ್ನ ಹೈಕೋರ್ಟ್ ವಜಾಗೊಳಿಸಿದೆ. ಈ ಹಿನ್ನೆಲೆಯಲ್ಲಿ ಡಿಸಿಎಂ ಈ ಪ್ರತಿಕ್ರಿಯೆ ನೀಡಿದರು.
ನಮ್ಮ ನ್ಯಾಯಾಂಗ ವ್ಯವಸ್ಥೆಗೆ ನಾವು ತಲೆಬಾಗುತ್ತೇವೆ. ನಮ್ಮದು ಪ್ರಜಾಪ್ರಭುತ್ವದ ರಾಷ್ಟ್ರ. ಜನರ ಮತವೇ ಅತ್ಯಂತ ಶಕ್ತಿಯುತವಾದ ಆಯುಧ. ಬ್ಯಾಲೆಟ್ ಮದ್ದುಗುಂಡಿಗಿಂತ ಶಕ್ತಿಶಾಲಿ. ಇಂದಿನ ದಿನ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸುತ್ತಿದ್ದೇವೆ. ನಮ್ಮ ಸರ್ಕಾರ ಜನರ ಬಹುಮತದಿಂದ ಆಯ್ಕೆಯಾದದ್ದು. ಆ ಚುನಾವಣಾ ಪ್ರಕ್ರಿಯೆಯ ಮಹತ್ವವನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದು ಡಿಕೆ ಶಿವಕುಮಾರ್ ಹೇಳಿದರು.
ಸಾಹಿತಿ ಬಾನು ಮುಷ್ತಾಕ್ ಅವರ ವಿರುದ್ಧ ಧಾರ್ಮಿಕ ಆಧಾರದ ಮೇಲೆ ವಿರೋಧ ವ್ಯಕ್ತಪಡಿಸಿರುವ ವಿಚಾರಕ್ಕೂ ಡಿಸಿಎಂ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ಸಂವಿಧಾನ ಎಲ್ಲ ಧರ್ಮಗಳಿಗೂ ಸಮಾನ ಹಕ್ಕು ನೀಡಿದೆ. ಚಾಮುಂಡೇಶ್ವರಿ ದೇವಿಗೆ ಪ್ರಾರ್ಥಿಸಬೇಡಿ, ಚಾಮುಂಡಿ ಬೆಟ್ಟಕ್ಕೆ ಬರಬೇಡಿ ಅಂದ್ರೆ ಹೇಗೆ? ಪ್ರತಿಯೊಬ್ಬರಿಗೂ ಧರ್ಮದ ಪಾಲನೆ ಮಾಡುವ ಹಕ್ಕು ಇದೆ. ಎಂದು ಸ್ಪಷ್ಟಪಡಿಸಿದರು.
ಬಿಜೆಪಿಯವರಿಗೆ ಸಂವಿಧಾನದ ಮೇಲೆ ಗೌರವವಿಲ್ಲ. ಸಂವಿಧಾನದ ತತ್ವಗಳನ್ನು ಸರಿಯಾಗಿ ಓದಿಲ್ಲ. ಪ್ರತಾಪ್ ಸಿಂಹರು ಮತ್ತು ಅವರ ಪಕ್ಷದ ನಾಯಕರು ಮೊದಲು ಸಂವಿಧಾನ ಓದಬೇಕು. ಆಗ ತಮ್ಮ ಹಕ್ಕುಗಳು ಮತ್ತು ಬಾಧ್ಯತೆಗಳು ಏನೆಂಬುದು ಗೊತ್ತಾಗುತ್ತದೆ. ನಾವು ಸಂವಿಧಾನದ ರಕ್ಷಣೆ ಮಾಡುತ್ತಿದ್ದೇವೆ ಎಂದು ಶಿವಕುಮಾರ್ ಹೇಳಿದರು.
ವರದಿ : ಲಾವಣ್ಯ ಅನಿಗೋಳ