ಬೆಂಗಳೂರು : ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ದಾಳಿಯ ಕುರಿತು ಹೇಳಿಕೆಗಳನ್ನು ನೀಡಲು ಹೋಗಿ ಅನೇಕ ನಾಯಕರು ವಿವಾದಗಳನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ಭಾರತದಲ್ಲಿ ಹಿಂದೂಗಳ ಮಾರಣ ಹೋಮಕ್ಕೆ ಕಾರಣವಾಗಿರುವ ಪಾಕಿಸ್ತಾನದ ವಿರುದ್ಧ ಪ್ರತೀಕಾರಕ್ಕೆ ಕೂಗು ಜೋರಾಗಿದೆ. ಈ ವೇಳೆಯಲ್ಲಿ ಯುದ್ಧದ ಅಗತ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ನೀಡಿದ್ದ ಹೇಳಿಕೆಯು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಆದರೆ ಇನ್ನೋರ್ವ ನಾಯಕ ಕೈ ನಾಯಕ ಪಾಕ್ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಬಾಂಬ್ ಕಟ್ಕೊಂಡು ಪಾಕ್‌ಗೆ ಹೋಗ್ತೀನಿ..
ಭಾರತ ಹಾಗೂ ಪಾಕಿಸ್ತಾನದ ನಡುವಿನ ಪ್ರತೀಕಾರದ ಯುದ್ಧದ ಕುರಿತು ವಿಜಯನಗರದಲ್ಲಿ ಮಾತನಾಡಿರುವ ವಸತಿ ಹಾಗೂ ಅಲ್ಪಸಂಖ್ಯಾತರ ಇಲಾಖೆಯ ಸಚಿವ ಜಮೀರ್ ಅಹ್ಮದ್ ಖಾನ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ನಾವು ಭಾರತೀಯರು, ಹಿಂದೂಸ್ತಾನಿಗಳು. ಪಾಕಿಸ್ತಾನಕ್ಕೂ ನಮಗೂ ಎಂದಿಗೂ ಸಂಬಂಧವಿಲ್ಲ, ಅದು ಯಾವತ್ತೂ ನಮ್ಮ ಶತ್ರು. ಪ್ರಧಾನಮಂತ್ರಿ ನರೇಂದ್ರ, ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ಸರ್ಕಾರ ಅವಕಾಶ ಕೊಟ್ಟಿದ್ದೇ ಆದರೆ, ಪಾಕಿಸ್ತಾನದ ವಿರುದ್ಧ ಬಾಂಬ್ ಕಟ್ಟಿಕೊಂಡು ಯುದ್ಧಕ್ಕೆ ಹೋಗಲು ಸಿದ್ಧನಿದ್ದೇನೆಂದು ಅವರು ಹೇಳಿದ್ದಾರೆ.
ಜೋಶ್ನಲ್ಲಿ ಹೇಳುತ್ತಿಲ್ಲ..
ಕೇಂದ್ರ ಸರ್ಕಾರ ಪಾಕಿಸ್ತಾನದ ಮೇಲೆ ಕೂಡಲೇ ಯುದ್ಧ ಸಾರಲಿ. ಗಡಿಯಲ್ಲಿ ನಿಂತು ಭಾರತಕ್ಕಾಗಿ ಹೋರಾಟ ಮಾಡುತ್ತೇವೆ. ಭಾರತ ಯಾವತ್ತಿದ್ದರೂ ಹಿಂದೂಸ್ಥಾನ. ಈ ದೇಶಕ್ಕೋಸ್ಕರ ನಾನು ಯುದ್ಧಕ್ಕೆ ಹೋಗುತ್ತೇನೆ. ನಾನು ತಮಾಷೆಗೆ, ಜೋಶ್ನಲ್ಲಿ ಹೇಳುತ್ತಿಲ್ಲ. ಈ ದೇಶಕ್ಕೋಸ್ಕರ ಹೋಗುತ್ತೇನೆ, ಮೋದಿ, ಅಮಿತ್ ಶಾ ಅವ್ರು ಶಸ್ತ್ರಾಸ್ತ್ರವನ್ನು ನನ್ನ ಕೈಗೆ ಕೊಡಲಿ. ಅಲ್ಲಾ ಮೇಲೆ ಆಣೆ, ಶಸ್ತ್ರಾಸ್ತ್ರವನ್ನು ಬೆನ್ನಲ್ಲಿ ಕಟ್ಟಿಕೊಂಡು ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಲು ಹೋಗುತ್ತೇನೆಂದು ಸಚಿವ ಜಮೀರ್ ಎದೆ ತಟ್ಟಿ ರೋಷದಲ್ಲಿ ಪಾಕ್ ವಿರುದ್ಧ ಯುದ್ಧದ ಮಾತುಗಳನ್ನಾಡಿದ್ದಾರೆ.
ಮಂತ್ರಿಯಾಗಿ ನಾನು ರೆಡಿ..!
ನಾವು ಭಾರತೀಯರು, ನಾವು ಹಿಂದೂಸ್ತಾನಿಗಳು. ಯುದ್ಧ ಮಾಡಬೇಕು ಎಂದರೆ ನಾನು ರೆಡಿ. ಮಂತ್ರಿಯಾಗಿ ನನ್ನನ್ನು ಕಳುಹಿಸುತ್ತಾರೆ ಎಂದರೆ ನಾನು ಸಿದ್ಧ. ಯುದ್ಧಕ್ಕೆ ನಾನು ಹೋಗುತ್ತೇನೆ. ದೇಶಕ್ಕಾಗಿ ಯುದ್ಧ ಮಾಡಲು ನಾನು ರೆಡಿ.. ನಡೀರಿ ಹೋಗಿ ಬಿಡೋಣ ಎಂದು ಅವರು ಹೇಳಿದ್ದಾರೆ. ಸದ್ಯ ಜಮೀರ್ ಅವರು ಹೇಳಿರುವ ಈ ವಿಡಿಯೋ ಎಲ್ಲೆಡೆ ಫುಲ್ ವೈರಲ್ ಆಗುತ್ತಿದೆ.
ಶಿವಾನಂದ್ ಪಾಟೀಲ್ ದಮ್ಮು ತಾಕತ್ತು ತೋರಿಸಿದ್ದಾರೆ
ಇನ್ನೂ ಸಚಿವ ಶಿವಾನಂದ ಪಾಟೀಲ್ ರಾಜೀನಾಮೆ ವಿಚಾರವಾಗಿ ಮಾತನಾಡಿರುವ ಸಚಿವ ಜಮೀರ್, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಯಾವಾಗಲೂ ದಮ್ಮು, ತಾಕತ್ತು ಅಂತ ಮಾತನಾಡುತ್ತಾರೆ. ಪದೇ, ಪದೆ ಎಲ್ಲರನ್ನೂ ಕೆಣಕುತ್ತಾರೆ. ಸಚಿವ ಶಿವಾನಂದ ಪಾಟೀಲ್ ರಾಜೀನಾಮೆ ಕೊಟ್ಟು ದಮ್ಮು ತಾಕತ್ತು ತೋರಿಸಿದ್ದಾರೆ. ಅವರಪ್ಪಗೆ ಹುಟ್ಟಿದವರಾದರೆ, ರಾಜೀನಾಮೆ ಕೊಟ್ಟು ಬರಲಿ ಅಂತಲೂ ಯತ್ನಾಳ್ ಹೇಳಿದ್ದರು. ಶಿವಾನಂದ್ ಪಾಟೀಲ್ ರಾಜೀನಾಮೆ ಕೊಟ್ಟು ಅವರಪ್ಪಗೆ ಹುಟ್ಟಿದ್ದಾರೆ ಅಂತ ತೋರಿಸಿದ್ದಾರೆ. ಅದೇ ರೀತಿ, ಯತ್ನಾಳ್ ರಾಜೀನಾಮೆ ನೀಡಿ, ಅವರಪ್ಪಗೆ ಹುಟ್ಟಿದ್ದಾರೆಂದು ತೋರಿಸಲಿ ಎಂದು ಯತ್ನಾಳ್ಗೆ ಜಮೀರ್ ಅಹಮ್ಮದ್ ಖಾನ್ ಸವಾಲು ಹಾಕಿದ್ದಾರೆ.
ಜಮೀರ್ ಸುಮ್ಮನಿರುವುದೇ ದೇಶಕ್ಕೆ ದೊಡ್ಡ ಸೇವೆ..
ಅಲ್ಲದೆ ಪಾಕಿಸ್ತಾನಕ್ಕೆ ಹೋಗಿ ಯುದ್ಧ ಮಾಡ್ತೀನಿ ಎಂದು ಹೇಳಿರುವ ಜಮೀರ್ ಮಾತಿಗೆ ವಿಜಯಪುರದಲ್ಲಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಮೀರ್ ನೀವೇನೂ ಮಾಡೋದು ಬೇಡ ಸುಮ್ಮನಿದ್ದರೆ ಸಾಕು. ಜಮೀರ್ ಭಾಷಣ ಬೇಡ, ಮಿಲಿಟರಿಯನ್ನು ನಂಬಿ ಸುಮ್ಮನಿರಿ, ಶಾಂತವಾಗಿರಿ ಸಾಕು. ಅದೇ ದೊಡ್ಡ ಸೇವೆಯಾಗಿದೆ ಎಂದು ಕೌಂಟರ್ ನೀಡಿದ್ದಾರೆ.
ನಮ್ಮ ದೇಶದ ಸೇನೆ ಬಲವಾಗಿದೆ, ಸೈನ್ಯದ ಶಕ್ತಿ, ಸೈನಿಕರು, ಇಂಟೆಲಿಜೆನ್ಸ್ ಮೇಲೆ ವಿಶ್ವಾಸವಿಡಿ. ತೋಚಿದಂತೆ ಹೇಳಿಕೆ ಕೊಡದೆ ಬಾಯಿಮುಚ್ಚಿಕೊಂಡಿದ್ದರೆ ಸಾಕು. ಜಮೀರ್ ಯಾವುದೇ ಹೇಳಿಕೆ ಕೊಡದೇ ಶಾಂತವಾಗಿರೋದೇ ದೇಶಕ್ಕೆ ಮಾಡುವ ದೊಡ್ಡ ಸೇವೆ. ಜಮೀರ್ ದೊಡ್ಡ ತ್ಯಾಗಕ್ಕೆ ಹೊರಟಿದ್ದಾರೆ. ಅವರಂಥ ದೊಡ್ಡ ತ್ಯಾಗದವರು ಯಾರೂ ಇಲ್ಲ. ನೀವು ನಿಮ್ಮ ಪಕ್ಷದವರು ಮೊದಲು ಶಾಂತವಾಗಿರಿ. ಜಮೀರ್, ಸಂತೋಷ ಲಾಡ್, ಖರ್ಗೆ, ಸಿದ್ದರಾಮಯ್ಯ ಸುಮ್ಮನಿದ್ದರೆ, ಡಿಕೆ ಶಿವಕುಮಾರ ಟೆರರಿಸ್ಟ್‌ಗಳನ್ನು ಬ್ರದರ್ಸ್ ಅನ್ನದಿದ್ರೆ ಸಾಕು, ಭಾರತೀಯ ಸೇನೆ ಎಲ್ಲವನ್ನೂ ನಿಭಾಯಿಸುತ್ತೆ ಎನ್ನುವ ಮೂಲಕ ಜೋಶಿ ಕೈ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.