Hubli News: ಹುಬ್ಬಳ್ಳಿ: ಜಾತಿ ಗಣತಿ ಹೊರಬಿದ್ದ ಮೇಲೆ ಏನು ನಮೂದಿಸಬೇಕೆಂದು ಈಗಾಗಲೇ ಸಭೆ ನಡೆಸಲಾಗಿದೆ. ಧರ್ಮದ ಕಾಲಂನಲ್ಲಿ ಏನು ಇದೆ ಎಂದು ತಿಳಿದುಕೊಂಡು ಅಧಿಕೃತವಾಗಿ ಘೋಷಣೆ ಮಾಡಲಾಗುತ್ತದೆ. ವೀರಶೈವದಲ್ಲಿನ ಎಲ್ಲಾ ಒಳಪಂಗಡಗಳಿಗೆ ಒಂದೇ ಮೀಸಲಾತಿ ಸಿಗಬೇಕು. ಅಂದಾಗ ಮಾತ್ರ ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಗುತ್ತದೆ ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿದರು.
ಹುಬ್ಬಳ್ಳಿಯಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜ್ಯದ ಜಾತಿ ಕಾಲಂನಲ್ಲಿ ಪಂಚಮಸಾಲಿ ಎಂಬುದೇ ಇರಲಿಲ್ಲ. 2009 ರಲ್ಲಿ ಹೋರಾಟ ಮಾಡಿದ ಫಲವಾಗಿ ಜಾತಿ ಕಾಲಂನಲ್ಲಿ ಪಂಚಮಸಾಲಿ ಬಂದಿದೆ. ಎಲ್ಲಾ ವೀರಶೈವರಿಗೆ ಓಬಿಸಿ ಮೀಸಲಾತಿ ಸಿಗಬೇಕು. ಮೀಸಲಾತಿ ಸಿಕ್ಕಾಗ ನಾವೆಲ್ಲರೂ ಒಂದೇ ಎಂಬ ಭಾವನೆ ಬರುತ್ತದೆ ಎಂದರು.
ಹಿಂದಿನ ಸರ್ಕಾರ 2ಡಿ, 2ಸಿ ಘೋಷಣೆ ಮಾಡಿದಾಗ ನಾವು ಒಪ್ಪಿಕೊಂಡಿಲ್ಲ. 2ಡಿ, 2ಸಿ ಕೊಟ್ಟಾಗ ಕೆಲವರು ಕೋರ್ಟ್‌ಗೆ ಹೋಗಿದ್ದಾರೆ. ಈಗಾಗಲೇ ಅದು ಕೋರ್ಟ್ ಅಂಗಳದಲ್ಲಿ ಇದೆ. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡಬೇಕೆಂಬುದು ನಮ್ಮದು ಆಗ್ರಹ ಎಂದು ಅವರು ಹೇಳಿದರು.
ಮೀಸಲಾತಿಗಾಗಿ ಹೋರಾಟ ನಿರಂತರವಾಗಿ ಮುಂದುವರೆಯುತ್ತದೆ. ಕಾನೂನಾತ್ಮಕ ಹೋರಾಟದಿಂದ ಮೀಸಲಾತಿ ಪಡೆಯುತ್ತೆವೆ. ರಾಜ್ಯದಲ್ಲಿ ಈಗಾಗಲೇ ನಾಲ್ಕು ಸಾವಿರ ಮಠಗಳಿವೆ. ಆ ಎಲ್ಲ ಮಠಗಳನ್ನು ಸಲಹುತ್ತಿರುವುದು ನಮ್ಮ ಪಂಚಮಸಾಲಿ ಸಮುದಾಯ. ಇನ್ನೂ ನೂರು ಪಂಚಮಸಾಲಿ ಪೀಠಗಳಾದ್ರೂ ಏನೂ ತಪ್ಪಿಲ್ಲ ಎಂದು ಅವರು ಮಾಹಿತಿ ನೀಡಿದರು.
ಜಯ ಮೃತ್ಯುಂಜಯ ಸ್ವಾಮೀಜಿ ಸಮಾಜಕ್ಕಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಕೂಡಲಸಂಗಮದಲ್ಲಿನ ಪೀಠದ ಸಮಸ್ಯೆಗಳನ್ನ ನಮ್ಮ ಸಮುದಾಯದ ಹಿರಿಯರು ಬಗೆಹರಿಸುತ್ತಾರೆ ಎಂದರು..




