www.karnatakatv.net : ತುಮಕೂರು: ಕೋವಿಡ್ ಸೋಂಕು ಕಡಿಮೆಯಾದ ನಂತರ ಮೊದಲ ಬಾರಿಗೆ ಶಾಲೆಗಳು ಆರಂಭಗೊಂಡಿದ್ದು, ಚಿಕ್ಕನಾಯಕನಹಳ್ಳಿ ತಾಲೂಕಿನ ಕೆಲ ಶಾಲೆಗಳಲ್ಲಿ ವಿಭಿನ್ನವಾಗಿ ವಿದ್ಯಾರ್ಥಿಗಳನ್ನು ಶಿಕ್ಷಕರು ಸ್ವಾಗತಿಸಿದ್ರು. ಬಾಳೆ ಕಂದು ಹಾಗೂ ಮಾವಿನ ಸೊಪ್ಪುಗಳಿಂದ ಶಾಲೆಯನ್ನು ಅಲಂಕರಿಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕೋರಿದ ರೀತಿಯೇ ವಿಭಿನ್ನವಾಗಿತ್ತು.
ಕೋವಿಡ್ ನಿಂದಾಗಿ ಸುಮಾರು ಒಂದೂವರೆ ವರ್ಷಗಳ ಕಾಲ ಶಾಲೆಯ ಮುಖವನ್ನೆ ನೋಡದೇ ಮನೆಯಲ್ಲಿದ್ದ ವಿದ್ಯಾರ್ಥೀಗಳಿಗೆ ಇದೀಗ ಸಂತಸದ ಸಮಯ. ಕೋವಿಡ್ ಹತೋಟಿಗೆ ಬಂದ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳನ್ನ ಪ್ರಾರಂಭಿಸಲಾಗಿದೆ. ವಿದ್ಯಾರ್ಥಿಗಳು ಖುಷಿ ಖುಷಿಯಾಗಿ ಶಾಲೆಗಳಿಗೆ ಆಗಮಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗಾಗಿ ಶಿಕ್ಷಕರು ಶಾಲೆಯನ್ನ ಅಲಂಕರಿಸಿ ಸ್ವಾಗತ ಕೋರಿದ್ದಾರೆ.
ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಕೆಲ ದಿನಗಳ ಹಿಂದೆ 9 ಹಾಗೂ 10ನೇ ತರಗತಿ ಗಳನ್ನು ಆರಂಭಿಸಲಾಗಿತ್ತು. ಬಹುತೇಕ ವಿದ್ಯಾರ್ಥಿಗಳು ಸಹ ಭೌತಿಕ ತರಗತಿಗಳಿಗೆ ಆಗಮಿಸುತ್ತಿದ್ದು, ಸರ್ಕಾರದ ಸೂಚನೆಯಂತೆ ಸೋಮವಾರದಿಂದ 6ರಿಂದ 8ನೇ ತರಗತಿಗಳು ಆರಂಭಗೊಂಡಿವೆ. ತಾಲೂಕಿನಲ್ಲಿ 6ನೇ ತರಗತಿಯ 2049 ವಿದ್ಯಾರ್ಥಿಗಳು, 7ನೇ ತರಗತಿಯ 1446 ಹಾಗೂ 8ನೇ ತರಗತಿಯ 69 ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಿದ್ದರು.
ತಾಲೂಕಿನ ಶೆಟ್ಟಿಕೆರೆ ಜನತಾ ಪ್ರೌಢಶಾಲೆಯಲ್ಲಿ 8ನೇ ತರಗತಿಯ ಭೌತಿಕ ಶಾಲೆಯ ಆರಂಭಗೊಂಡಿದ್ದು ಮೊದಲ ದಿನ ವಿದ್ಯಾರ್ಥಿಗಳ ಕೈಯಲ್ಲಿ ಟೇಪ್ ಕತ್ತರಿಸಿ ವಿಭಿನ್ನ ರೀತಿಯಲ್ಲಿ ಶಾಲೆಯನ್ನು ಆರಂಭಿಸಲಾಯಿತು. ಈ ಸಂದರ್ಭದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ತರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ಹಾಗೂ ಮಾಸ್ಕ್ ಕಡ್ಡಾಯಗೊಳಿಸಿ ತರಗತಿಗಳಿಗೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ದಯಾಶಂಕರ್ ದೈಹಿಕ ಶಿಕ್ಷಕ ಚಂದ್ರಮೌಳಿ ಬಿಜೆಪಿ ಸಾಮಾಜಿಕ ಜಾಲತಾಣದ ಜಿಲ್ಲಾ ಸಮಿತಿ ಸದಸ್ಯ ವಿನಯ್ ಹಾಗೂ ಸಹ ಶಿಕ್ಷಕರು ಉಪಸ್ಥಿತರಿದ್ದರು.
ದರ್ಶನ್ ಕೆ.ಡಿ.ಆರ್, ಕರ್ನಾಟಕ ಟಿವಿ- ತುಮಕೂರು




