ಧರ್ಮಸ್ಥಳ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ನಡೆಯುತ್ತಿದ್ದಾಗ, ಕೆಲವು ನಿಗೂಢ ಸಾವುಗಳ ಬಗ್ಗೆಯೂ ತನಿಖೆಯಾಗಲು ಜಯಂತ್ ಆಗ್ರಹಿಸಿದ್ರು. ಇದೇ ವಿಚಾರವಾಗಿ ಅಧಿಕಾರಿಗಳಿಗೆ ದೂರನ್ನು ಕೊಟ್ಟಿದ್ರು. ಆದ್ರೀಗ ಸಾಮಾಜಿಕ ಹೋರಾಟಗಾರ ಜಯಂತ್ ಸುತ್ತಾ ಧರ್ಮಸ್ಥಳದ ಕೇಸ್ ಸುತ್ತಿಕೊಂಡಿದೆ.
ಕೋರ್ಟ್, ಪೊಲೀಸರ ಎದುರು ಚಿನ್ನಯ್ಯ ಬುರುಡೆಯೊಂದನ್ನ ತಂದಿಟ್ಟಿದ್ದ. ಈ ಬುರುಡೆಯನ್ನು ನನಗೆ ಕೊಟ್ಟಿದ್ದು ಜಯಂತ್ ಎಂಬುದಾಗಿ, ವಿಚಾರಣೆ ವೇಳೆ ಹೇಳಿದ್ದಾನೆ. ಹೀಗಾಗಿ ಬೆಂಗಳೂರಿಗೆ ಎಸ್‌ಐಟಿ ಅಧಿಕಾರಿಗಳು ಎಂಟ್ರಿ ಕೊಟ್ಟಿದ್ದು, ಜಯಂತ್ ಮನೆಯಲ್ಲಿ ಮಹಜರು ಮಾಡ್ತಿದ್ದಾರೆ. ಈ ಬಗ್ಗೆ ಮಾಧ್ಯಮವೊಂದರ ಪ್ರತಿನಿಧಿ ಜೊತೆ ಮಾತನಾಡಿರುವ ಜಯಂತ್, ನಾನು ಬುರುಡೆಯನ್ನು ತಂದಿಲ್ಲ. ತನಿಖೆ ಆಗಲಿ, ಸತ್ಯ ಹೊರಗೆ ಬರಲಿ ಅಂತಾ ಹೇಳಿದ್ದಾರೆ.
ಚಿನ್ನಯ್ಯನನ್ನ ನಾನು ಬೆಂಗಳೂರಿನಲ್ಲಿ ಮೂರ್ನಾಲ್ಕು ಬಾರಿ ಭೇಟಿಯಾಗಿದ್ದೇನೆ. ಏಪ್ರಿಲ್‌ನಲ್ಲಿ ಮೊದಲ ಬಾರಿಗೆ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಕರೆದುಕೊಂಡು ಬಂದು, ಕಾಮಾಕ್ಷಿಪಾಳ್ಯದಲ್ಲಿರುವ ವಕೀಲರ ಆಫೀಸ್‌ಗೆ ಬಿಟ್ಟೆ. ವಕೀಲ ಧನಂಜಯ್ ಅವರ ಕಚೇರಿಗೆ ಹೋಗಿದ್ವಿ. ಸಾಯಂಕಾಲ ಆಗಿದ್ರಿಂದ, ಅವನ ಸೇಫ್ಟಿಗಾಗಿ ಮನೆಗೆ ಕರೆದುಕೊಂಡು ಬಂದೆ.
2 ದಿನ ಊಟ ಕೊಟ್ಟೆ. ಬಳಿಕ ಕೆಲಸ ಮುಗಿಸಿಕೊಂಡು ಹೋದ. ಮತ್ತೆ ಎರಡ್ಮೂರು ಬಾರಿ ಬಂದ. 3ನೇ ಬಾರಿ ಬಂದಾಗ ಏನೋ ವಸ್ತು ಹಿಡಿದುಕೊಂಡು ಬಂದ. ಆ ಫೋಟೋವನ್ನು ಕಳಿಸಿ, ಸುಪ್ರೀಂಗೆ ಕೊಡಬೇಕು ಅಂತಾ ಹೇಳಿದ್ರು. ಹೀಗಾಗಿ ಫೋಟೋ ಕಳಿಸಿದ್ದೆ. ಇಷ್ಟೆಲ್ಲಾ ವಿಷ್ಯ ಇದೆ ಅಂತಾ ನನಗೆ ಗೊತ್ತಿರಲಿಲ್ಲ. ನಾನಾಗೆ ಚಿನ್ನಯ್ಯನನ್ನ ಕರೆದುಕೊಂಡು ಬಂದಿಲ್ಲ. ಮಟ್ಟಣ್ಣವರ್ ಹೇಳಿದಂತೆ ಕೇಳಿದ್ದೇನೆ ಅಷ್ಟೆ.
ಸುಪ್ರೀಂಕೋರ್ಟಿಗೆ ಬುರುಡೆ ಸಹಿತ ತೆಗೆದುಕೊಂಡು ಹೋಗಿದ್ವಿ. ಸುಜಾತಾ ಭಟ್, ಚಿನ್ನಯ್ಯ ಸೇರಿ ಮೂರ್ನಾಲ್ಕು ಮಂದಿ ಇದ್ವಿ. ಬುರುಡೆ ಕೇಸಲ್ಲಿ ನನ್ನ ಷಡ್ಯಂತ್ರವಿಲ್ಲ. ಬುರುಡೆ ಎಲ್ಲಿಂದ ತಂದಿದ್ದು ಅಂತಾ ಅವನನ್ನೇ ಕೇಳ್ಬೇಕು. ತನಿಖೆ ಆಗಲಿ. ನನ್ನ ಕಡೆಯಿಂದ ಏನು ತಪ್ಪಾಗಿದೆ ಅಂತಾ ಹೇಳಿದ್ರೆ ಒಪ್ಪಿಕೊಳ್ತೀನಿ. ಆತ ಏಕೆ ತನ್ನ ಹೇಳಿಕೆಯನ್ನು ಚೇಂಜ್ ಮಾಡ್ತಿದ್ದಾನೋ ಗೊತ್ತಿಲ್ಲ.
ಮಟ್ಟಣ್ಣವರ್ ಮನೆಗೆ ನಾನು ಕರೆದುಕೊಂಡು ಹೋಗಿಲ್ಲ. ಅವರೇ ವಕೀಲರ ಆಫೀಸ್‌ನಿಂದ ಕರೆದುಕೊಂಡು ಹೋಗಿರ್ತಾರೆ. ಚಿನ್ನಯ್ಯನಿಗೆ ಇರಲು ಮನೆ ನೀಡಿ, ಊಟ ಕೊಟ್ಟಿದ್ದೇನೆ. ನಾನೇನು ಅತ್ಯಾಚಾರ ಮಾಡಿಲ್ಲ.. ಕೊಲೆ ಮಾಡಿಲ್ಲ.. ಸತ್ಯದ ಪರವಾಗಿದ್ದೇನೆ. ಮನೆಯಲ್ಲಿ ಪತ್ನಿ, ಮಗ, ಮಗಳು ಇದ್ದಾರೆ. ತನಿಖೆ ಮಾಡಿಸಲಿ ಅಂತಾ, ಟಿ. ಜಯಂತ್ ಹೇಳಿದ್ದಾರೆ.
ಬೆಂಗಳೂರಿನಲ್ಲೇ ಗಿರೀಶ್ ಮಟ್ಟಣ್ಣವರ್ ನಿವಾಸ ಇದೆ. ಜಯಂತ್ ಮನೆ ಮಹಜರು ಬಳಿಕ, ಮಟ್ಟಣ್ಣವರ್ ಮನೆಯಲ್ಲೂ ಮಹಜರು ಸಾಧ್ಯತೆ ಇದೆ.