ಜಗಳೂರು ಕ್ಷೇತ್ರದ ಶಾಸಕ ಬಿ. ದೇವೇಂದ್ರಪ್ಪ ಹೇಳಿಕೆ, ಕಾಂಗ್ರೆಸ್ ಪಕ್ಷಕ್ಕೆ ಭಾರೀ ಚರ್ಚೆಗೆ ಕಾರಣವಾಗಿದೆ. ವಿಧಾನಸಭಾ ಚುನಾವಣೆ ನಂತರ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಆ್ಕಯಾದಾಗ, ಡಿಕೆ ಶಿವಕುಮಾರ್ ಅವರಿಗೆ ಡಿಸಿಎಂ ಸ್ಥಾನವನ್ನು ನೀಡಲಾಯಿತು. ಆಗಿನಿಂದಲೇ ಪಕ್ಷದ ಒಳಗಡೆ, ಅಧಿಕಾರ ಹಂಚಿಕೆಯ ಕುರಿತು ಊಹಾಪೋಹಗಳು ಎದ್ದಿದ್ದವು.
ಕರ್ನಾಟಕ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಕುರಿತು, ನಾಯಕತ್ವ ಬದಲಾವಣೆ ಇಲ್ಲವೆಂದು ಹೈಕಮಾಂಡ್ ಈಗಾಗಲೇ ಹೇಳಿದೆ. ಈ ಮಧ್ಯೆ ಸಿಎಂ ಮತ್ತು ಡಿಸಿಎಂ ನಡುವೆ ಒಪ್ಪಂದ ಆಗಿದ್ದರೇ ಅಧಿಕಾರ ಹಂಚಿಕೆ ಆಗಲಿ ಎಂದು ಜಗಳೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ದೇವೇಂದ್ರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.
ಅಧಿಕಾರ ಹಂಚಿಕೆ ಆಗಲಿ ಎಂಬುವುದು ನನ್ನ ವೈಯಕ್ತಿಕ ಅಭಿಪ್ರಾಯ, ಆದರೆ ಸದ್ಯಕ್ಕೆ ಮುಖ್ಯಮಂತ್ರಿ ಕುರ್ಚಿ ಇಲ್ಲ. ಸಿಎಂ ಸ್ಥಾನ ಖಾಲಿ ಇಲ್ಲ ಅಂದ್ಮೇಲೆ ಅದರ ಬಗ್ಗೆ ಚರ್ಚೆ ಅನಗತ್ಯ ಎಂದು ಹೇಳಿದ್ದಾರೆ.
ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ನನ್ನನ್ನು ಕರೆದು ಮಾತನಾಡಿಸಿದ್ದಾರೆ. ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಕೂಡ, ನನ್ನ ಜೊತೆ ಮಾತನಾಡಿದ್ದಾರೆ. ಆದರೆ ನಾನು ಯಾರ ವಿರುದ್ಧವೂ ಆರೋಪ ಮಾಡಲ್ಲ. ನನ್ನ ಜಗಳೂರು ವಿಧಾನಸಭಾ ಕ್ಷೇತ್ರ ಅಭಿವೃದ್ಧಿ ಆಗಬೇಕು ಅಷ್ಟೇ ಎಂದಿದ್ದಾರೆ.
ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಪ್ರಾದೇಶಿಕ, ಜಾತಿವಾರು ಲೆಕ್ಕಾಚಾರ ನಡೆದರೆ ನಾನು ಪ್ರಯತ್ನ ಮಾಡುವೆ. ನಾನೇನು ಸನ್ಯಾಸಿ ಅಲ್ಲ. ಸಚಿವ ಸ್ಥಾನಕ್ಕಾಗಿ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದ್ದಾರೆ.
ವರದಿ : ಲಾವಣ್ಯ ಅನಿಗೋಳ