ರಾಜ್ಯದಲ್ಲಿ ಸೆಪ್ಟೆಂಬರ್ 22ರಿಂದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಶುರುವಾಗಿತ್ತು. ಇದೇ ಅಕ್ಟೋಬರ್ 7ರೊಳಗೆ ಜಾತಿಗಣತಿ ಮುಗಿಸಲು, ರಾಜ್ಯ ಸರ್ಕಾರ ಡೆಡ್‌ಲೈನ್ ಕೊಟ್ಟಿದೆ. ಆದ್ರಿನ್ನೂ ಸಮೀಕ್ಷೆ ಪೂರ್ಣಗೊಂಡಿಲ್ಲ. ಪ್ರಾರಂಭದಲ್ಲೇ ತಾಂತ್ರಿಕ ಸಮಸ್ಯೆ, ಸರ್ವರ್ ಪ್ರಾಬ್ಲಂ, ಸ್ಥಳ ಗೊಂದಲ ಸೇರಿದಂತೆ ಹಲವು ಕಾರಣಗಳಿಂದಾಗಿ, ಸಮೀಕ್ಷೆ ವಿಳಂಬವಾಗಿತ್ತು.
ಜೊತೆಗೆ ಒಂದು ಕುಟುಂಬದ ಸಮೀಕ್ಷೆ ಮಾಡೋಕೆ ಕನಿಷ್ಠ ಅಂದ್ರೂ ಒಂದೂವರೆ ಗಂಟೆ ಸಮಯ ಆಗ್ತಿದೆ. ಡಿಸಿಎಂ ಡಿಕೆಶಿ ಮನೆಯಲ್ಲೇ 1 ಗಂಟೆ 20 ನಿಮಿಷವಾಗಿತ್ತು. ಗಣತಿ ಪಟ್ಟಿಯಲ್ಲಿರುವ ಸಾಲು, ಸಾಲು ಪ್ರಶ್ನೆಗಳಿಗೆ ಉತ್ತರಿಸುವಷ್ಟರಲ್ಲಿ ಸಾಕು ಸಾಕಾಗಿದ್ರು.
ಇದೀಗ ಸರ್ಕಾರ ನೀಡಿರುವ ಡೆಡ್‌ಲೈನ್‌ಗೆ ಇನ್ನೊಂದು ದಿನ ಬಾಕಿ ಉಳಿದಿದೆ. ಇನ್ನೂ 20ರಿಂದ 30ರಷ್ಟು ಸಮೀಕ್ಷೆ ಬಾಕಿ ಇದೆ. ಈ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿರುವ ಗೃಹ ಸಚಿವ ಜಿ. ಪರಮೇಶ್ವರ್, ಡೆಡ್‌ಲೈನ್ ವಿಸ್ತರಿಸುವ ಸುಳಿವು ಕೊಟ್ಟಿದ್ದಾರೆ.
ಮುಖ್ಯಮಂತ್ರಿಗಳು ಕೊಪ್ಪಳಕ್ಕೆ ಹೋಗಿದ್ದಾರೆ. ಬಂದ ಬಳಿಕ ಅಧಿಕಾರಿಗಳ ಜೊತೆ ಮಾತನಾಡಲಿದ್ದಾರೆ. ಎಲ್ಲಾ ಜಿಲ್ಲೆಗಳ ಮಾಹಿತಿ ಪಡೆದು, ನಿರ್ಧಾರ ಕೈಗೊಳ್ಳಲಿದ್ದಾರೆ ಅಂತಾ ಹೇಳಿದ್ದಾರೆ.
ಒಂದೊಂದು ಜಿಲ್ಲೆಯಲ್ಲಿ ಒಂದೊಂದು ಪರ್ಸೆಂಟ್ ಆಗಿದೆ. 50, 70, 80 ಪರ್ಸೆಂಟ್ ಜಾತಿಗಣತಿ ಆಗಿದೆ. ಇಡೀ ರಾಜ್ಯದಲ್ಲಿ 25 ಪರ್ಸೆಂಟ್ ಕಡಿಮೆ ಆಗಿದೆ. ಕೆಲವೆಡೆ ತಾಂತ್ರಿಕ ಸಮಸ್ಯೆ, ಗೊಂದಲವಾಗಿದೆ. ಅಕ್ಟೋಬರ್ 7ರಂದು ಲಾಸ್ಟ್ ಡೇಟ್ ಕೊಡಲಾಗಿತ್ತು. ಆದ್ರೆ, ಅವಧಿ ವಿಸ್ತರಣೆ ಮಾಡೋ ಬಗ್ಗೆ ಮುಖ್ಯಮಂತ್ರಿಗಳು ತೀರ್ಮಾನ ತೆಗೆದುಕೊಳ್ಳಬೇಕು. ಡಿ.ಕೆ. ಶಿವಕುಮಾರ್, ಸೋಮಣ್ಣ ಮಾತ್ರವಲ್ಲ. ಎಲ್ಲರಿಗೂ ಒಂದೊಂದು ಅಭಿಪ್ರಾಯವಿರುತ್ತದೆ. ಸಮೀಕ್ಷೆ ಮಾಡುವಾಗ ಸಣ್ಣಪುಟ್ಟ ಗೊಂದಲಗಳು ಆಗೇ ಆಗುತ್ತದೆ. ಎಲ್ಲರೂ ಸಹಕರಿಸಿದ್ರೆ ಸಮೀಕ್ಷೆ ಆಗುತ್ತದೆ ಅಂತಾ ಪರಮೇಶ್ವರ್ ಹೇಳಿದ್ರು.
ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಶಿವರಾಜ್ ತಂಗಡಗಿ ಈ ಬಗ್ಗೆ ಕೊಪ್ಪಳದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸಮೀಕ್ಷೆಯ ದಿನಾಂಕ ವಿಸ್ತರಣೆ ಬಗ್ಗೆ ಸಿಎಂ ಜೊತೆ ಚರ್ಚಿಸಲಾಗುವುದು. ನಾಳೆ ಅಂದ್ರೆ ಮಂಗಳವಾರವೇ ಮಹತ್ವದ ನಿರ್ಧಾರ ಮಾಡುವುದಾಗಿ ತಿಳಿಸಿದ್ದಾರೆ.