ರಾಜ್ಯದ ಕಬ್ಬು ಬೆಳೆಗಾರರು ಬೀದಿಗೆ ಇಳಿದು ಕ್ರಾಂತಿಗೆ ಮುಂದಾಗಿದ್ದಾರೆ. ಪ್ರತಿ ಟನ್ ಕಬ್ಬಿಗೆ ಕನಿಷ್ಠ ₹3,500 ದರ ನೀಡಬೇಕು ಎಂದು ಆಗ್ರಹಿಸಿ, ಹೋರಾಟ ಮಾಡ್ತಿದ್ದಾರೆ. ಬೆಳಗಾವಿಯಲ್ಲಿ 1 ವಾರದಿಂದ ಅಹೋರಾತ್ರಿ ಪ್ರತಿಭಟನೆ ಕೈಗೊಳ್ಳಲಾಗಿದೆ. ಪ್ರತಿಭಟನೆನಿರತ ರೈತರೊಬ್ಬರು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದಾರೆ. ರಾಜ್ಯದ ಕಬ್ಬು ಬೆಳೆಗಾರರು, ಸರ್ಕಾರ, ಸಕ್ಕರೆ ಕಾರ್ಖಾನೆಗಳ ನಡುವಿನ ಸಂಘರ್ಷಕ್ಕೆ ದೊಡ್ಡ ಇತಿಹಾಸವೇ ಇದೆ. ಪ್ರತಿ ವರ್ಷ ಕಬ್ಬು ಅರೆಯುವಿಕೆ ಹಂಗಾಮು ಆರಂಭವಾಗುತ್ತಿದ್ದಂತೆಯೇ, ಈ ಸಂಘರ್ಷ ಆರಂಭವಾಗುತ್ತದೆ. ಉತ್ತಮ ದರಕ್ಕಾಗಿ ಆಗ್ರಹಿಸಿ ರೈತರು ಹೋರಾಟ ನಡೆಸುತ್ತಾರೆ. ಈ ಬಾರಿ ಅದು ತೀವ್ರ ಸ್ವರೂಪ ಪಡೆದುಕೊಂಡಿದೆ.
ರಾಜ್ಯದ ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆಗಳು ಹಾಗೂ ಸರ್ಕಾರದ ನಡುವಿನ ತ್ರಿಕೋನ ಸಂಘರ್ಷಕ್ಕೆ ದಶಕಗಳ ಇತಿಹಾಸವಿದೆ. ಬೆಳಗಾವಿಯಲ್ಲಿ ರೈತರು ಪ್ರಾಣ ಪಣಕ್ಕಿಟ್ಟು ‘ನ್ಯಾಯ ಸಮ್ಮತ’ ಬೆಲೆಗಾಗಿ ಹೋರಾಡುವ ದಿನಗಳು ಮತ್ತೆ ಮರುಕಳಿಸಿದಂತೆ ಕಾಣುತ್ತಿದೆ. 2013-14ನೇ ಸಾಲಿನಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮೊದಲ ಚಳಿಗಾಲದ ಅಧಿವೇಶ ನಡೆದಿತ್ತು. ಆಗಲೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿದ್ರು. ಕಬ್ಬು ದರ ಹೆಚ್ಚಿಸಲು ರೈತರು ಸುವರ್ಣ ಸೌಧದ ಮುಂದೆ, ಬೃಹತ್ ಹೋರಾಟ ಆರಂಭಿಸಿದ್ದರು. ರಾಯಬಾಗ ತಾಲ್ಲೂಕಿನ ಕಂಕಣವಾಡಿ ಗ್ರಾಮದ ರೈತ ವಿಠಲ ಭೀಮಪ್ಪ ಅರಭಾವಿ, ಕೀಟನಾಶಕ ಕುಡಿದು ಪ್ರಾಣ ಬಿಟ್ಟಿದ್ದರು. ಬಳಿಕ ಅನ್ನದಾತರು ಉಗ್ರಸ್ವರೂಪ ತಾಳಿದರು. ಆಕ್ರೋಶಕ್ಕೆ ಬೆಚ್ಚಿಬಿದ್ದ ಸರ್ಕಾರ ಪ್ರತಿ ಟನ್ ಕಬ್ಬಿಗೆ ₹165 ಪ್ರೋತ್ಸಾಹ ಧನ ಘೋಷಣೆ ಮಾಡಿತ್ತು. ಆಗ ಸಕ್ಕರೆ ಸಚಿವರಾಗಿದ್ದ ಪ್ರಕಾಶ್ ಹುಕ್ಕೇರಿ, ತಕ್ಷಣವೇ ₹300 ಕೋಟಿ ನೆರವು ನಿಧಿ ಬಿಡುಗಡೆ ಮಾಡಿದ್ದರು.
10 ವರ್ಷಗಳ ಬಳಿಕ ಸಿದ್ದರಾಮಯ್ಯ ಅವರೇ ಮತ್ತೆ ಮುಖ್ಯಮಂತ್ರಿ ಆಗಿದ್ದಾರೆ. ಅದೇ ಕಬ್ಬಿಗಾಗಿ ಅದೇ ರೈತರು ಆಂದೋಲನ ಶುರು ಮಾಡಿದ್ದಾರೆ. ದಶಕ ಕಳೆದರೂ ಕಬ್ಬು ಬೆಳೆಗಾರರ ಬದುಕು ‘ಸಿಹಿ’ ಆಗಲೇ ಇಲ್ಲ. ಆಗ ಒಂದು ಕಾರ್ಖಾನೆ ಹೊಂದಿದ್ದ ಮಾಲೀಕರು ಈಗ ಎರಡು- ಮೂರು ಕಾರ್ಖಾನೆ ಕಟ್ಟಿಕೊಂಡಿದ್ದಾರೆ.
ಅಂದಿನ ದಿನಗಳು ಈಗಲೂ ಮರುಕಳಿಸಿವೆ. ಅದೇ ರಾಯಬಾಗ ತಾಲ್ಲೂಕಿನ ಆಲಕನೂರ ಗ್ರಾಮದ 30 ವರ್ಷದ ಲಕ್ಕಪ್ಪ ಗುಣದಾಳ ಎಂಬ ರೈತ, ಹೋರಾಟದ ಸ್ಥಳದಲ್ಲೇ ವಿಷ ಕುಡಿದಿದ್ದಾರೆ. ಸಾವು- ಬದುಕಿನ ಮಧ್ಯೆ ಹೋರಾಡುತ್ತಿರುವ ರೈತನನ್ನ, ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂದಿನಿಂದ ರೈತರ ಹೋರಾಟ ತೀವ್ರ ಸ್ವರೂಪ ಪಡೆದಿದೆ. ಬೆಳಗಾವಿ, ಹುಕ್ಕೇರಿ, ರಾಯಬಾಗ ಮುಂತಾದ ಕಡೆಗಳಲ್ಲಿ ಜನ ಸ್ವಯಂ ಪ್ರೇರಣೆಯಿಂದ ಬಂದ್ ಆಚರಿಸಿದ್ದಾರೆ. ಮೂಡಲಗಿ ತಾಲ್ಲೂಕಿನ ಗುರ್ಲಾಪುರದಲ್ಲಿ ರಾಜ್ಯ ಹೆದ್ದಾರಿ ಬಂದ್ ಮಾಡಿರುವ ರೈತರ ಹೋರಾಟ ಏಳು ದಿನ ಪೂರೈಸಿದೆ. ಅರೆ ಬೆತ್ತಲೆ ಧರಣಿಗಳನ್ನೂ ಶುರು ಮಾಡಿದ್ದಾರೆ. ಜಿಲ್ಲೆಯ ಎಲ್ಲ ರಾಜ್ಯ ಹೆದ್ದಾರಿಗಳಲ್ಲೂ ರೈತರು ತಡೆ ನಡೆಸಿದ್ದಾರೆ.
ಕೇಂದ್ರ ಸರ್ಕಾರ ವರ್ಷದಿಂದ ವರ್ಷಕ್ಕೆ ನ್ಯಾಯಸಮ್ಮತ ಹಾಗೂ ಲಾಭದಾಯಕ ಬೆಲೆ ಹೆಚ್ಚಿಸುತ್ತದೆ. ಪರೋಕ್ಷವಾಗಿ ಸಕ್ಕರೆ ಕಾರ್ಖಾನೆಗಳು ಇಳುವರಿ ಪ್ರಮಾಣದ ಮಿತಿಯನ್ನೂ ಏರಿಸುವ ಮೂಲಕ ರೈತರಿಗೆ ಲಾಭವೇ ಸಿಗದಂತೆ ಮಾಡುತ್ತಿವೆ. ಹೀಗಾಗಿ, ಈ ಬಾರಿ ರೈತರು ನಿರ್ಣಾಯಕ ಹೋರಾಟಕ್ಕೆ ನಿಂತಿದ್ದಾರೆ. ಪ್ರತಿ ಟನ್‌ಗೆ ₹3,500 ದರ ನೀಡಬೇಕು, ಇಳುವರಿ ಪ್ರಮಾಣದ ಮಿತಿಯನ್ನೂ ಶೇಕಡ 9.5ಕ್ಕೆ ಇಳಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.’ಕಬ್ಬು ಅರೆಯುವ ಕಾರ್ಖಾನೆಗಳು ಸಕ್ಕರೆಯನ್ನಷ್ಟೇ ಉತ್ಪಾದಿಸುವುದಿಲ್ಲ. ಮೊಲಾಸಿಸ್, ಎಥೆನಾಲ್, ವಿದ್ಯುತ್ ಅನ್ನು ಉತ್ಪಾದಿಸುತ್ತವೆ. ಇವುಗಳಿಂದಲೂ ಕಾರ್ಖಾನೆಗಳ ಮಾಲೀಕರು ಲಾಭ ಗಳಿಸುತ್ತಾರೆ. ಹೆಚ್ಚು ಲಾಭ ಬರುವಾಗ ನಮಗೆ ಉತ್ತಮ ದರ ನೀಡಲು ಅವರಿಗೆ ಯಾಕೆ ಸಾಧ್ಯವಿಲ್ಲ ಎಂಬುದು ಬೆಳೆಗಾರರ ಪ್ರಶ್ನೆಯಾಗಿದೆ.
ವಾರದಿಂದ ರಸ್ತೆ ತಡೆ, ಬಂದ್, ಉರುಳುಸೇವೆ, ಅರೆಬೆತ್ತಲೆ ಮರವಣಿಗೆ ಮಾಡಿದ ರೈತರು, ಇಂದು ಬೇಡಿಕೆ ಈಡೇರದಿದ್ದರೆ ಸಾಮೂಹಿಕ ಆಮರಣ ಉಪವಾಸ ಕೈಗೊಳ್ಳಲು ನಿರ್ಧರಿಸಿದ್ದಾರೆ. 2012-13ರಲ್ಲಿ ಟನ್ ಕಬ್ಬಿಗೆ ₹1,700 ದರವಿತ್ತು. ಆಗಿದ್ದ ಇಳುವರಿ ಪ್ರಮಾಣ ಶೇಕಡ 9 ಮಾತ್ರ. 2013-14ರಲ್ಲಿ ₹3,000 ಕೇಳಿ ರೈತರು ಹೋರಾಡಿದರು. ಾಗ ₹2,100ಕ್ಕೆ ಏರಿಸಲಾಯಿತು. ಸಕ್ಕರೆ ಇಳುವರಿ ಪ್ರಮಾಣವನ್ನೂ ಶೇಕಡ 9.5ಕ್ಕೆ ಏರಿಸಲಾಯಿತು. 2018ರಲ್ಲಿ ರೈತರು ಕಬ್ಬು ತುಂಬಿದ 18 ಲಾರಿಗಳನ್ನು ಸುವರ್ಣ ವಿಧಾನಸೌಧದ ಆವರಣಕ್ಕೆ ನುಗ್ಗಿಸಿ ಪ್ರತಿಭಟನೆ ಮಾಡಿದರು. ಅದಕ್ಕೆ ಮಣಿದ ಸರ್ಕಾರ ಎಫ್‌ಆರ್‌ಪಿಯನ್ನು ₹2,750ಕ್ಕೆ ಏರಿಸಿತು. ಆದರೆ, ಕಾರ್ಖಾನೆಗಳು ಒತ್ತಡ ಹೇರಿ, ಇಳುವರಿ ಪ್ರಮಾಣದ ಮಿತಿಯನ್ನೂ ಶೇಕಡ 10ಕ್ಕೆ ಏರಿಸಿದವು. 2023-24ರಲ್ಲಿ 1 ಟನ್ ಕಬ್ಬಿಗೆ ₹3,005 ದರ ನೀಡಲಾಯಿತು.
ಕೇಂದ್ರ ಸರ್ಕಾರ ಎಫ್‌ಆರ್‌ಪಿಯನ್ನು ₹3,150ಕ್ಕೆ ಏರಿಸಿತು. ರಂಗೋಲಿ ಕೆಳಗೆ ನುಸುಳಿದ ಕಾರ್ಖಾನೆಗಳ ಮಾಲೀಕರು, ಇಳುವರಿ ಮಿತಿಯನ್ನು ಶೇ. 10.25ಕ್ಕೆ ನಿಗದಿಯಾಗುವಂತೆ ನೋಡಿಕೊಂಡರು. ಈ ವರ್ಷವೂ ಎಫ್‌ಆರ್‌ಪಿ ₹3,550ಕ್ಕೆ ನಿಗದಿಯಾಗಿದೆ. ಆದರೆ, ಇಳುವರಿ ಪ್ರಮಾಣವನ್ನು ಶೇ 10.25ಕ್ಕೆ ಮಿತಿಗೊಳಿಸಲಾಗಿದೆ. ಕಾರ್ಖಾನೆಗಳು ₹3,010ಕ್ಕೆ ಬಂದು ನಿಂತಿವೆ. ಶೇಕಡ 9.5 ಇಳುವರಿ ಆಧರಿಸಿಯೇ ₹3,500 ದರ ನೀಡಬೇಕೆಂಬ ರೈತರ ಆಗ್ರಹ, ಉಗ್ರ ಸ್ವರೂಪ ತಾಳಿದೆ.
ಇನ್ನು, ಇಳುವರಿ ಎಂದರೇನು ಅನ್ನೋದನ್ನ ನೋಡೋದಾದ್ರೆ, ನಿರ್ದಿಷ್ಟ ತೂಕದ ಕಬ್ಬಿನ ಅರೆಯುವಿಕೆಯಿಂದ,ಉತ್ಪಾದನೆಯಾದ ಸಕ್ಕರೆಯ ಶೇಕಡವಾರು ಪ್ರಮಾಣವೇ ಇಳುವರಿ ಗಿದೆ. ಉದಾಹರಣೆಗೆ, ಒಂದು ವೇಳೆ 100 ಕೆಜಿ ಕಬ್ಬು ಅರೆದಾಗ 10 ಕೆಜಿ ಸಕ್ಕರೆ ಸಿಕ್ಕಿದರೆ, ಆಗ ಕಬ್ಬಿನ ಇಳುವರಿ ಪ್ರಮಾಣ ಶೇಕಡ 10 ಆಗುತ್ತದೆ. ಕೇಂದ್ರ ಸರ್ಕಾರವು 2025-26ನೇ ಸಾಲಿಗೆ ಟನ್ ಕಬ್ಬಿಗೆ ಎಫ್‌ಆರ್‌ಪಿ ₹3,550 ನಿಗದಿ ಪಡಿಸುವಾಗ, ಇಳುವರಿ ಪ್ರಮಾಣದ ಮಿತಿ ಶೇಕಡ 10.25 ಇರಬೇಕು ಎಂದು ಹೇಳಿದೆ. ಅಂದರೆ, 100 ಕೆಜಿ ಕಬ್ಬು ಅರೆದರೆ 102.5 ಕೆಜಿ ಸಕ್ಕರೆ ಉತ್ಪಾದನೆಯಾಗಬೇಕು. ಅದಕ್ಕಿಂತ ಕಡಿಮೆ ಸಕ್ಕರೆ ಉತ್ಪಾದನೆಯಾದರೆ ಟನ್ ಕಬ್ಬಿಗೆ ₹3,555 ಸಿಗುವುದಿಲ್ಲ.
ಹೀಗಾಗಿ ಕಬ್ಬಿನ ಬೆಲೆ ಏರಿಸಿದರೆ, ಇಳುವರಿ ಪ್ರಮಾಣವನ್ನೂ ಕಾರ್ಖಾನೆಗಳು ಏರಿಕೊಳ್ಳುತ್ತಿರುವುದು, ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಸ್ತುತ ಸಕ್ಕರೆ ಕಾರ್ಖಾನೆಯವರು ಟನ್ ಕಬ್ಬಿಗೆ ₹2,630 ನೀಡಿ ಖರೀದಿಸುತ್ತಿದ್ದಾರಂತೆ.
ಕಬ್ಬು ಬೆಳೆಯುವ ದಕ್ಷಿಣದ ಜಿಲ್ಲೆಗಳಾದ ಮಂಡ್ಯ, ಮೈಸೂರು, ಚಾಮರಾಜನಗರ ವ್ಯಾಪ್ತಿಯ ಬೆಳೆಗಾರರಲ್ಲೂ ಅಸಂತೃಪ್ತಿ ಮಡುಗಟ್ಟಿದೆ. ಎಫ್‌ಆರ್‌ಪಿ ದರಕ್ಕಾಗಿ ಪ್ರತಿ ವರ್ಷ ಪ್ರತಿಭಟನೆಗಳನ್ನು ನಡೆಸುತ್ತಲೇ ಬಂದಿದ್ದಾರೆ. ಹಾಗಿದ್ದರೂ, ಅವರ ಬೇಡಿಕೆ ಈಡೇರಿಲ್ಲ.
ಮಂಡ್ಯ ಜಿಲ್ಲೆಯಲ್ಲಿ ಈಗಾಗಲೇ ಮೈಷುಗರ್, ಚಾಂಷುಗರ್ ಸಕ್ಕರೆ ಕಾರ್ಖಾನೆ ವ್ಯಾಪ್ತಿಯ ರೈತರು, ವಿವಿಧ ಬೇಡಿಕೆ ಈಡೇರಿಕೆಗಾಗಿ ಹಲವು ಹೋರಾಟಗಳನ್ನು ನಡೆಸಿದ್ದಾರೆ. ಕಾರ್ಖಾನೆಗಳು ಉಳಿಸಿಕೊಂಡಿರುವ ಬಾಕಿಯನ್ನೂ ಪಾವತಿ ಮಾಡಿಲ್ಲ.
2022-23ರ ಹಂಗಾಮಿನಲ್ಲಿ ಕಬ್ಬು ಪೂರೈಸಿದ್ದವರಿಗೆ, ರಾಜ್ಯ ಸರ್ಕಾರ ಟನ್ ಕಬ್ಬಿಗೆ 150 ರೂ. ಪ್ರೋತ್ಸಾಹ ಧನ ಪಾವತಿಸುವುದಾಗಿ ಘೋಷಿಸಿತ್ತು. ಕೂಡಲೇ ಅದನ್ನು ನೀಡಬೇಕೆಂದು ರೈತ ಸಂಘ ಆಗ್ರಹಿಸಿದೆ. ಪ್ರತಿ ಟನ್ ಕಬ್ಬಿಗೆ ಕನಿಷ್ಠ ₹14 ಸಾವಿರದಿಂದ ₹15 ಸಾವಿರದಷ್ಟು ಆದಾಯ ಪಡೆಯುತ್ತಿರುವ ಸಕ್ಕರೆ ಕಾರ್ಖಾನೆ ಮಾಲೀಕರು, ಬೆಳೆಗಾರರನ್ನು ಶೋಷಿಸುತ್ತಿದ್ದಾರೆ. ಕಬ್ಬು ಪೂರೈಸಿದವರಿಗೆ 14 ದಿನಗಳೊಳಗೆ ಹಣ ಪಾವತಿಸಬೇಕೆಂಬ ನಿಯಮವಿದ್ದರೂ, ಒಂದೂವರೆ ತಿಂಗಳಿಗೂ ಹೆಚ್ಚು ಸಮಯವಾದರೂ ಪಾವತಿಸುತ್ತಿಲ್ಲ. ನಿರೀಕ್ಷಿತ ಬೆಲೆ ಸಿಗದೆ ಬೆಳೆಗಾರರು ಕಬ್ಬಿನಿಂದ ವಿಮುಖರಾಗುತ್ತಿದ್ದಾರೆ. ಶೇಕಡ 9.5ರಷ್ಟು ಇಳುವರಿಗೆ ಕನಿಷ್ಠ ₹5,500 ಎಫ್‌ಆರ್‌ಪಿ ನಿಗದಿ ಪಡಿಸಬೇಕೆಂದು ಸಂಘ ಒತ್ತಾಯಿಸುತ್ತಿದೆ. ಆದರೆ, ರಾಜಕೀಯ ಪ್ರಭಾವವುಳ್ಳ ಕಾರ್ಖಾನೆ ಮಾಲೀಕರು, ದರ ನಿಗದಿ ಮಾಡಲು ಬಿಡುತ್ತಿಲ್ಲ ಎಂಬುದು, ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಆರೋಪವಾಗಿದೆ.

