Spiritual: ಕಾರ್ತಿಕ ಮಾಸದ ದ್ವಾದಶಿಯಂದು ತುಳಸಿ ಪೂಜೆ ಮಾಡಲಾಗುತ್ತದೆ. ದೀಪಾವಳಿಯ ದಿನ ಲಕ್ಷ್ಮೀ ಪೂಜೆ ಮಾಡುವುದು ಎಷ್ಟು ಮುಖ್ಯವೋ.. ಅದೇ ರೀತಿ ಕಾರ್ತಿಕ ಮಾಸದ ದ್ವಾದಶಿಯಂದು ತುಳಸಿ ಪೂಜೆ ಮಾಡುವುದು ಕೂಡ ಅಷ್ಟೇ ಮುಖ್ಯ. ಆದರೆ ತುಳಸಿ ಮತ್ತು ಸಾಲಿಗ್ರಾಮ ವಿವಾಹ ಏಕೆ ಆಯಿತು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.
ಪುರಾಣ ಕಥೆಗಳ ಪ್ರಕಾರ, ಜಲಂಧರನೆಂಬ ರಾಕ್ಷಸನಿದ್ದ. ಅವನಿಂದ ದೇವತೆಗಳಿಗೆ ದಿನದಿಂದ ದಿನಕ್ಕೆ ಉಪಟಳ ಹೆಚ್ಚಾಗುತ್ತಿತ್ತು. ಆದರೆ ಯಾರೇ ಪ್ರಯತ್ನಿಸಿದರೂ, ಅವನ ಸಂಹಾರ ಮಾಡಲಾಗುತ್ತಿರಲಿಲ್ಲ. ಏಕೆಂದರೆ, ಅವನ ಪತ್ನಿ ವೃಂದಾ ಪರಮ ಪತಿವೃತೆಯಾಗಿದ್ದಳು. ಅಲ್ಲದೇ, ಶ್ರೀವಿಷ್ಣುವಿನ ಪರಮ ಭಕ್ತೆಯಾಗಿದ್ದಳು. ಹಾಗಾಗಿ ಜಲಂಧನ ಸಂಹಾರ ಅಷ್ಟು ಸುಲಭವಾಗಿರಲಿಲ್ಲ.
ಆದರೆ ಜಲಂಧರನನ್ನು ಸಂಹರಿಸದಿದ್ದಲ್ಲಿ, ಲೋಕ ವಿನಾಶವಾಗುವುದು ನಿಶ್ಚಿತವಾಗಿತ್ತು. ಹಾಗಾಗಿ ಶ್ರೀವಿಷ್ಣು ಜಲಂಧರನ ರೂಪದಲ್ಲಿ ಬಂದು, ವೃಂದಾಳನ್ನು ಸ್ಪರ್ಶಿಸಿ, ಪತಿವೃತಾ ಭಂಗ ಮಾಡಿಬಿಟ್ಟ. ಬಳಿಕ ಜಲಂಧರನ ಸಂಹಾರವಾಯಿತು. ಆದರೆ ವೃಂದಾಳಿಗೆ, ತಾನು ಪೂಜಿಸುತ್ತಿದ್ದ ಶ್ರೀವಿಷ್ಣುವೇ ತನ್ನ ಮಾನಭಂಗ ಮಾಡಿ, ತನ್ನನ್ನು ವಿಧವೆಯನ್ನಾಗಿ ಮಾಡಿದನೆಂದು ಬೇಸರವಾಯಿತು.
ಹಾಗಾಗಿ ವೃಂದಾ ಶ್ರೀವಿಷ್ಣುವಿಗೆ, ನಿನ್ನ ಪತ್ನಿಯ ಪಾತಿವೃತ್ಯವು ಭಂಗವಾಗಲಿ ಎಂದು ಶಾಪ ನೀಡುತ್ತಾಳೆ. ತಕ್ಷಣ ಬೂದಿಯಾಗುತ್ತಾಳೆ. ಆಗ ಶ್ರೀವಿಷ್ಣು, ಈ ಬೂದಿಯಿಂದ ತುಳಸಿ ಎಂಬ ಗಿಡ ಬೆಳೆದು, ಹಿಂದೂ ಧರ್ಮದಲ್ಲಿ ಪರಮ ಪೂಜ್ಯ ಸ್ಥಾನ ಪಡೆಯುತ್ತದೆ. ಭೂಲೋಕದಲ್ಲಿ ತುಳಸಿಯನ್ನು ಪೂಜಿಸುವಂತಾಗಲಿ. ನನ್ನ ಪೂಜೆಗೆ ತುಳಸಿಯ ಉಪಯೋಗ ಸದಾ ಆಗಲಿ ಎಂದು ವರ ನೀಡುತ್ತಾನೆ. ಅಲ್ಲದೇ ಕಾರ್ತಿಕ ಮಾಸದ ದ್ವಾದಶಿಯಂದು ಯಾರು ತುಳಸಿ ಮತ್ತು ಸಾಲಿಗ್ರಾಮದ ವಿವಾಹ ಮಾಡುತ್ತಾರೋ, ಅವರಿಗೆ ಸಕಲ ಸನ್ಮಂಗಳವಾಗಲಿ ಎಂದು ಆಶೀರ್ವದಿಸುತ್ತಾನೆ. ಹಾಗಾಗಿ ವಿಷ್ಣು, ಕೃಷ್ಣನ ಪೂಜೆಯಲ್ಲಿ ಸದಾ ತುಳಸಿಯ ಉಪಯೋಗ ಮಾಡಲೇಬೇಕು.