ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ದಿಲ್ಲಿ ವಾಸ್ತವ್ಯ ಮುಂದುವರಿದಿದೆ. ಇದರ ಹಿಂದೆ ಇರುವ ರಾಜಕೀಯ ಉದ್ದೇಶಗಳ ಬಗ್ಗೆ ರಾಜ್ಯ ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಾಗಿದೆ. ಕುತೂಹಲಕ್ಕೂ ಉತ್ತರವಿಲ್ಲದೆ ದಂತಾಗಿದೆ. ಆದರೆ ಈ ಕುರಿತು ಇನ್ನೂ ಸ್ಪಷ್ಟ ಉತ್ತರ ಲಭ್ಯವಾಗಿಲ್ಲ.
ಶುಕ್ರವಾರವೇ ದಿಲ್ಲಿಗೆ ತೆರಳಿದ್ದ ಡಿ.ಕೆ. ಶಿವಕುಮಾರ್, ಶನಿವಾರದಂದು ನಿಧನರಾದ ಸಚಿವ ಭೀಮಣ್ಣ ಖಂಡ್ರೆ ಅವರ ಅಂತ್ಯಕ್ರಿಯೆಗೆ ರಾಜ್ಯಕ್ಕೆ ಆಗಮಿಸಿ ಬಳಿಕ ಮತ್ತೆ ರಾಷ್ಟ್ರ ರಾಜಧಾನಿಗೆ ವಾಪಸಾಗಿದ್ದರು. ಭಾನುವಾರ ಮನರೇಗಾ ಯೋಜನೆಯ ಹೆಸರನ್ನು ಬದಲಿಸುವ ಕೇಂದ್ರ ಸರ್ಕಾರದ ಕ್ರಮಕ್ಕೆ ವಿರೋಧವಾಗಿ ಕೈಗೊಳ್ಳಬೇಕಾದ ಹೋರಾಟದ ಸಿದ್ಧತೆ ಕುರಿತ ಸಭೆಯಲ್ಲಿ ಅವರು ದಿಲ್ಲಿಯಲ್ಲಿ ಭಾಗವಹಿಸಿದರು.
ಪಕ್ಷದ ವರಿಷ್ಠ ನಾಯಕ ರಾಹುಲ್ ಗಾಂಧಿ ಅವರನ್ನು ಡಿ.ಕೆ. ಶಿವಕುಮಾರ್ ಈಗಾಗಲೇ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದ್ದು, ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ತಮ್ಮ ಅಭಿಪ್ರಾಯ ಮತ್ತು ಹಕ್ಕು ಮಂಡಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಅವರು ದಿಲ್ಲಿಯಲ್ಲೇ ಉಳಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದಿಲ್ಲಿಯ ಕರ್ನಾಟಕ ಭವನದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಾಲವೇ ಎಲ್ಲದಕ್ಕೂ ಉತ್ತರ ನೀಡುತ್ತದೆ. ಒಂದೇ ವಾಕ್ಯದಲ್ಲಿ ಹೇಳಬೇಕಾದರೆ ಸಮಯವೇ ಪ್ರತಿಯೊಂದು ಪ್ರಶ್ನೆಗೆ ಉತ್ತರ ಕೊಡುತ್ತದೆ ಎಂದು ಅರ್ಥಗರ್ಭಿತವಾಗಿ ಹೇಳಿದರು.
ಹೈಕಮಾಂಡ್ ನಾಯಕರನ್ನು ಭೇಟಿಯಾಗಿರುವ ಕುರಿತು ಕೇಳಿದಾಗ,
ಅದನ್ನು ಏಕೆ ಬಹಿರಂಗಗೊಳಿಸಬೇಕು? ನಾವು ಇಲ್ಲಿಗೆ ಬರುವುದೇ ಸರ್ಕಾರದ ಕೆಲಸಕ್ಕೆ, ಪಕ್ಷದ ಕೆಲಸಕ್ಕೆ ಮತ್ತು ನಮ್ಮ ರಾಜಕೀಯಕ್ಕೆ. ನಾವು ರಾಜಕಾರಣಿಗಳು. ರಾಜಕಾರಣಿಗಳು ರಾಜಕಾರಣ ಮಾಡಲೇಬೇಕು. ಇದರಲ್ಲಿ ತಪ್ಪೇನಿಲ್ಲ. ನಮಗೆ ಅಗತ್ಯವಿರುವವರನ್ನು ಭೇಟಿಯಾಗುತ್ತೇವೆ. ಇದನ್ನು ನೀವು ಏಕೆ ದೊಡ್ಡ ವಿಷಯ ಮಾಡುತ್ತೀರಿ? ಎಂದು ಪ್ರಶ್ನಿಸಿದರು.
ವರದಿ : ಲಾವಣ್ಯ ಅನಿಗೋಳ




