ಭಾರತ ಟಿ-20 ಕ್ರಿಕೆಟ್ ನಲ್ಲಿ 2ನೇ ಬಾರಿಗೆ ವಿಶ್ವ ಕಿರೀಟವನ್ನು ಮುಡಿಗೇರಿಸಿಕೊಂಡ ನಂತರ ಮುಂಬರುವ ಚಾಂಪಿಯನ್ಸ್ ಟ್ರೋಫಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಗಳ ದೊಡ್ಡ ಸವಾಲನ್ನು ಎದುರಿಸಲು ಸಜ್ಜಾಗಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟಿ-20 ಅಂತರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾದ ಬೆನ್ನಲ್ಲೆ ಉಳಿದ ಫಾರ್ಮೆಟ್ ಗಳಿಗೂ ವಿದಾಯ ಹೇಳ್ತಾರಾ ಅನ್ನೋ ಪ್ರಶ್ನೆ ಶುರುವಾಗಿದೆ.
ಚಾಂಪಿಯನ್ಸ್ ಟ್ರೋಫಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಬಳಿಕ ವಿರಾಟ್-ರೋಹಿತ್ ದೂರವಾಗ್ತಾರೆ ಎಂದು ಹೇಳಲಾಗ್ತಿದ್ರೂ , ಈ ವಿಚಾರ ರೋಹಿತ್ ಬಗ್ಗೆ ಅಷ್ಟೇ ಸತ್ಯವಾಗೋ ಲಕ್ಷಣಗಳು ಕಾಣಿಸ್ತಿದೆ. 30 ಎಪ್ರಿಲ್ 1987ರಲ್ಲಿ ಜನಿಸಿದ ರೋಹಿತ್ ಶರ್ಮಾ ಅವರ ಪ್ರಸ್ತುತ ವಯಸ್ಸು 37 ವರ್ಷ ಆದ್ದರಿಂದ ಅವರು ಮುಂಬರುವ ಎರಡು ಪ್ರಮುಖ ಟೂರ್ನಿಗಳ ನಂತರ ಇನ್ನೊಂದು ವರ್ಷದ ಅವಧಿಯಲ್ಲಿ ನಿವೃತ್ತಿಯಾಗೋ ಸಾಧ್ಯತೆಗಳೇ ಹೆಚ್ಚು. ಅಲ್ಲಿಯವರೆಗೂ ರೋಹಿತ್ ಭಾರತ ತಂಡಕ್ಕೆ ಏಕದಿನ ಹಾಗೂ ಟೆಸ್ಟ್ ನಾಯಕನಾಗಿ ಮುಂದುವರೆಯೋದು ಬಹುತೇಕ ಖಚಿತವಾಗಿದೆ.
ಆದರೆ 5 ನವೆಂಬರ್ 1988ರಲ್ಲಿ ಜನಿಸಿದ ವಿರಾಟ್ ಕೊಹ್ಲಿ ಪ್ರಸ್ತುತ ವಯಸ್ಸು 35 ವರ್ಷ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ನಂತರವೂ ವಿರಾಟ್ ಟೆಸ್ಟ್ ಹಾಗೂ ಏಕದಿನ ಮಾದರಿಯ ಕ್ರಿಕೆಟ್ ನಲ್ಲಿ ಮುಂದುವರೆಯುವ ಸಾಧ್ಯತೆ ಇದೆ. ಮುಂದಿನ ಏಕದಿನ ವಿಶ್ವಕಪ್ ಆಡುವ ಕನಸನ್ನು ಕೂಡ ವಿರಾಟ್ ಹೊಂದಿದ್ದಾರೆ ಎನ್ನಲಾಗುತ್ತಿದೆ. ಏಕದಿನ ಪಾರ್ಮೆಟ್ ನಲ್ಲಿ ಕಿಂಗ್ ಕೊಹ್ಲಿ ಮೀರಿಸುವ ಆಟಗಾರ ಪ್ರಸ್ತುತ ವಿಶ್ವಕ್ರಿಕೆಟ್ ನಲ್ಲಿ ಯಾರೂ ಇಲ್ಲ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಕಳೆದ ಒಡಿಐ ವಿಶ್ವಕಪ್ ನಲ್ಲಿ ಅವರು ಸರಣಿ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾಗಿದ್ದು. ಮಾತ್ರವಲ್ಲ, ಒಬ್ಬ ಬ್ಯಾಟ್ಸ್ ಮನ್ ಒಂದು ವಿಶ್ವಕಪ್ ನಲ್ಲಿ ಗಳಿಸಿದ ಅತ್ಯಧಿಕ ಮೊತ್ತದ ದಾಖಲೆ ಕೂಡ ಕಿಂಗ್ ಕೊಹ್ಲಿ ತಮ್ಮ ಹೆಸರಿಗೆ ಬರೆದುಕೊಂಡ್ರು. 11 ಇನ್ನಿಂಗ್ಸ್ ಆಡಿದ ವಿರಾಟ್ 95.62ರ ಸರಾಸರಿಯಲ್ಲಿ 765 ರನ್ ಗಳನ್ನು ಗಳಿಸಿದ್ದರು. 3 ಅಮೋಘ ಶತಕಗಳು ಹಾಗೂ 6ಅರ್ಧಶತಕಗಳು ಅವರ ಬ್ಯಾಟ್ ನಿಂದ ಮೂಡಿಬಂದಿತ್ತು.
ಮುಂದಿನ ಏಕದಿನ ವಿಶ್ವಕಪ್ ವರೆಗೂ ವಿರಾಟ್ ಆಡ್ತಾರೆ ಎನ್ನುವ ಮಾತು ಸತ್ಯವಾದರೂ ಕೂಡ ವಿರಾಟ್ ಕೊಹ್ಲಿಯ ಆ ಸಮಯದ ಫಾರ್ಮ್ ಕೂಡ ಬಹುಮುಖ್ಯ ಪಾತ್ರವಹಿಸುತ್ತೆ. ಕೊಹ್ಲಿ ಆ ಸಂದರ್ಭದಲ್ಲಿ ಉತ್ತಮ ಫಾರ್ಮನಲ್ಲಿ ಇಲ್ಲವಾದಲ್ಲಿ ಖಂಡಿತವಾಗಿಯೂ ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಟ್ಟು, ತೆರೆಮರೆಗೆ ಸರಿಯುವ ಸಾಧ್ಯತೆಗಳಿದೆ. ಒಟ್ಟಾರೆ ವಿರಾಟ್ ಮತ್ತು ರೋಹಿತ್ ಜೋಡಿ ಟಿ-20 ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ವಿದಾಯ ಘೋಷಿಸಿದ ಬಳಿಕ ಈ ದಿಗ್ಗಜರ ಬಗ್ಗೆ ಮತ್ತಷ್ಟು ಚರ್ಚೆಗಳು ಶುರುವಾಗಿವೆ.