ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಪೊಲೀಸರಿಗೆ ಮಾತ್ರವಲ್ಲ ಇದು ರಾಜಕಾರಣಗಳಿಗೂ ಸಂಕಷ್ಟ ತಂದೊಡ್ಡಿದೆ. ಹೀಗಿರುವಾಗ ಬಿಕ್ಲ ಶಿವ ಕೊಲೆ ಆರೋಪಿಗೆ ಸಿನಿಮಾ ನಂಟಿರುವುದು ಗೊತ್ತಾಗಿದೆ. ಬಿಕ್ಲ ಶಿವನ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಸ್ಫೋಟಕ ಮಾಹಿತಿ ಗೊತ್ತಾಗಿದೆ. ಅದೇನೆಂದರೆ, ಬಿಕ್ಲ ಶಿವನ ಕೊಲೆ ಆರೋಪಿ ಆಗಿರುವ ಜಗ್ಗ ಅಲಿಯಾಸ್ ಜಗದೀಶ್ ಸಾಮಾನ್ಯ ವ್ಯಕ್ತಿಯಲ್ಲ. ರಾಜಕಾರಣಿ ಅಷ್ಟೆ ಅಲ್ಲದೆ ಸಿನಿಮಾ ನಂಟು ಇದೆ. ಜಗ್ಗ ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಬಹಳ ಬಲಿಷ್ಠ ವ್ಯಕ್ತಿ ಅನ್ನೋದು ಗೊತ್ತಾಗಿದೆ.
ಕೊಲೆ ಆರೋಪಿ ಜಗ್ಗನ ಬೆನ್ನಿಗೆ ಬಿಜೆಪಿ ಶಾಸಕ ಬೈರತಿ ಬಸವರಾಜ್ ಇದ್ದರು ಅನ್ನೋ ಆರೋಪ ಕೂಡ ಇದೆ. ರಿಯಲ್ ಎಸ್ಟೇಟ್‌ಗಳಿಂದ ಹಣ ಮಾಡುತ್ತಿದ್ದ ಜಗ್ಗ, ರಾಜಕೀಯವಾಗಿ ಗುರುತಿಸಿಕೊಂಡಿದ್ದ. ಮಾಜಿ ರೌಡಿ ಶೀಟರ್ ಆಗಿರೋ ಜಗ್ಗನಿಗೆ ಸಿನಿಮಾ ನಂಟು ಕೂಡ ಇದೆ.
ರವಿಚಂದ್ರನ್ ನಟನೆಯ ರವಿ ಬೋಪಣ್ಣ ಸಿನಿಮಾದ ಶೂಟಿಂಗ್ ವೇಳೆ ಜಗ್ಗ ನಟಿ ರಚಿತಾ ರಾಮ್ ಗೆ ರೇಷ್ಮೆ ಸೀರೆ, ಚಿನ್ನದ ಹಾರ, ಓಲೆಯನ್ನು ಗಿಫ್ಟ್ ಮಾಡಿದ್ದ. ಗಿಪ್ಟ್ ಕೊಟ್ಟಿರೋ ಫೋಟೋಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಚಿತಾ ರಾಮ್ ಜೊತೆಗೆ ರವಿಚಂದ್ರನ್, ಸುದೀಪ್ ಜೊತೆಗೆ ಜಗ್ಗ ಆಪ್ತನಾಗಿದ್ದ ಎನ್ನಲಾಗಿದೆ. ಆ ಫೋಟೋಗಳು ಕೂಡ ಈಗ ಹೊರಬಂದಿವೆ.
ಇಷ್ಟೇ ಅಲ್ಲದೆ ಜಗ್ಗ ಕೆಲವು ಸಿನಿಮಾಗಳಿಗೆ ಹೂಡಿಕೆ ಮಾಡಿದ್ದಾರೆ ಎಂದು ಮಾಹಿತಿ ಇದೆ. ಪ್ರಕರಣಕ್ಕೂ ಈ ಫೋಟೋಗಳಿಗೆ ಸಂಬಂಧ ಇಲ್ಲದೇ ಇದ್ದರೂ, ತಲೆ ಮರೆಸಿಕೊಂಡಿರೋ ಜಗ್ಗನ ನೆಟ್ ವರ್ಕ್ ಗೆ ಇದು ಸಾಕ್ಷಿ ಎನ್ನುವಂತಿದೆ. ರವಿ ಬೋಪಣ್ಣ ಸಿನಿಮಾದಲ್ಲಿ ಜಗ್ಗನ ಹೂಡಿಕೆಯಿತ್ತಾ? ಆತನಿಗೂ ಸ್ಯಾಂಡಲ್‌ವುಡ್ ತಾರೆಯರಿಗೂ ಇರುವ ನಂಟೇನು ಎನ್ನುವ ಬಗ್ಗೆಯೂ ಪೊಲೀಸರು ತನಿಖೆ ಮಾಡುವ ಸಾಧ್ಯತೆ ಇದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ