ಬೆಂಗಳೂರು ಚಿನ್ನಯ್ಯನ ಪಾಳ್ಯದಲ್ಲಿ ನಡೆದಿರುವ , ಹಲವು ಅನುಮಾನಗಳಿಗೆ ಕಾರಣವಾಗಿದೆ. ಘಟನಾ ಸ್ಥಳಕ್ಕೆ ಎಂಟ್ರಿ ಕೊಟ್ಟಿರುವ ಭಯೋತ್ಪಾದಕ ನಿಗ್ರಹ ದಳದ ಟೀಂ, ಇದು ಸಿಲಿಂಡರ್ ಬ್ಲಾಸ್ಟ್ ಅಲ್ಲ ಅನ್ನೋ ಅನುಮಾನ ವ್ಯಕ್ತಪಡಿಸಿದೆ. ಬೇರೆ ವಸ್ತುವಿನಿಂದ ಸ್ಫೋಟ ಸಂಭವಿಸಿದೆ ಎಂದೇ ಹೇಳಲಾಗ್ತಿದೆ. ಬಾಂಬ್ ನಿಷ್ಕ್ರಿಯ ದಳ ಕೂಡ ಪರಿಶೀಲನೆ ಮಾಡ್ತಿದೆ.
ಘಟನಾ ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಕೂಡ ಭೇಟಿ ಕೊಟ್ಟಿದ್ದಾರೆ. ಪೊಲೀಸ್ ಕಮಿಷನರ್, ಸ್ಥಳೀಯ ಪೊಲೀಸರು, ಸ್ಥಳೀಯರಿಂದಲೂ ಮಾಹಿತಿ ಪಡೆದ್ರು.
ಬಳಿಕ ಪ್ರತಿಕ್ರಿಯಿಸಿರೋ ಸಿದ್ದರಾಮಯ್ಯ, ಮೇಲ್ನೂಟಕ್ಕೆ ಸಿಲಿಂಡರ್ ಬ್ಲಾಸ್ಟ್ ಅಂತಾ ಕಾಣಿಸುತ್ತಿದೆ. ಈ ಬಗ್ಗೆ ಪರಿಶೀಲನೆ ಮಾಡಲಾಗ್ತಿದೆ. ಇದೊಂದು ವರಾಂಡ. ಸಣ್ಣ ಸಣ್ಣ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ. ಮೃತ ಬಾಲಕನ ಕುಟುಂಬಕ್ಕೆ, ಸರ್ಕಾರದಿಂದ 5 ಲಕ್ಷ ರೂಪಾಯಿ ಪರಿಹಾರ ಕೊಡ್ತೀವಿ. 9 ಮಂದಿಗೆ ಗಾಯಗಳಾಗಿದ್ದು, ಹಲವು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಹೀಗಂತ ಸಿಎಂ ಹೇಳಿದ್ರು. ಜೊತೆಗೆ ಮನೆಗಳನ್ನು ರಿಪೇರಿ ಮಾಡಿಸಿಕೊಡಲು, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
35 ವರ್ಷದ ಕಸ್ತೂರಮ್ಮ ಎಂಬುವರ ಮನೆಯಲ್ಲಿ ಸ್ಫೋಟ ಸಂಭವಿಸಿದೆ. ಹೆಚ್ಚಿನ ಪ್ರಮಾಣದ ಸುಟ್ಟ ಗಾಯಗಳಾಗಿದ್ದು, ಕಸ್ತೂರಮ್ಮನನ್ನು ವಿಕ್ಟೋರಿಯಾಗೆ ದಾಖಲಿಸಲಾಗಿದೆ. ದುರ್ದೈವದ ಸಂಗತಿ ಏನಂದ್ರೆ 10 ವರ್ಷದ ಮೃತ ಬಾಲಕ ಮುಬಾರಕ್, ಪಕ್ಕದ ಮನೆಯವನು. ಸ್ಫೋಟದ ಬಳಿಕ ಗೋಡೆ, ಮೇಲ್ಛಾವಣಿ ಕುಸಿದು ಬಿದ್ದಿದ್ದು, ಬಾಲಕ ಸಾವನ್ನಪ್ಪಿದ್ದಾನೆ.
ಸಿಎಂ ಬಂದು ಹೋದ ಬಳಿಕ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕೂಡ, ಘಟನಾ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಒಟ್ನಲ್ಲಿ, ಇಡೀ ಬೆಂಗಳೂರು 79ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿದ್ದ ವೇಳೆ, ವಿಲ್ಸನ್ ಗಾರ್ಡನ್‌ನಲ್ಲಿ ಘೋರ ದುರಂತ ಸಂಭವಿಸಿದೆ.