ಅಜಿತ್ ಪವಾರ್ ನಂತರ NCP ಮುಂದೇನು?

ಮಹಾರಾಷ್ಟ್ರ ರಾಜಕೀಯದಲ್ಲಿ ಅಜಿತ್ ಪವಾರ್ ಎಂಬ ಹೆಸರು ಕೇವಲ ನಾಯಕನಲ್ಲ — ಒಂದು ಶಕ್ತಿ ಕೇಂದ್ರವೇ ಆಗಿತ್ತು. ಹಳೆಯ ತಲೆಮಾರಾಗಲಿ, ಹೊಸ ತಲೆಮಾರಾಗಲಿ, ಅಜಿತ್ ಪವಾರ್ ಇಲ್ಲದ ರಾಜಕೀಯ ಸನ್ನಿವೇಶವನ್ನು ಊಹಿಸಿಕೊಳ್ಳುವುದೇ ಕಷ್ಟ.

ಜನವರಿ 28 ಬಾರಾಮತಿಯಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಉಪಮುಖ್ಯಮಂತ್ರಿ ಹಾಗೂ ಎನ್‌ಸಿಪಿ ನಾಯಕ ಅಜಿತ್ ಪವಾರ್ ನಿಧನರಾಗಿರುವುದು ಮಹಾರಾಷ್ಟ್ರ ರಾಜಕೀಯವನ್ನು, ವಿಶೇಷವಾಗಿ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ ಎರಡೂ ಬಣಗಳನ್ನು ಅನಿಶ್ಚಿತತೆಯ ಅಂಚಿಗೆ ತಳ್ಳಿದೆ. ಅವರ ನಿಧನ ಫಡ್ನವೀಸ್ ಸರ್ಕಾರಕ್ಕೆ ದೊಡ್ಡ ಹಿನ್ನಡೆ ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಇತ್ತೀಚೆಗೆ ಚಿಕ್ಕಪ್ಪ ಶರದ್ ಪವಾರ್ ಜೊತೆ ಹೊಂದಾಣಿಕೆಯ ಸೂಚನೆಗಳು ಕಾಣಿಸಿಕೊಂಡಿದ್ದವು. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಿಂಪ್ರಿ–ಚಿಂಚ್‌ವಾಡ್‌ನಲ್ಲಿ ಎರಡೂ ಬಣಗಳು ಒಟ್ಟಾಗಿ ಸ್ಪರ್ಧಿಸಿದ್ದು ರಾಜಕೀಯ ವಲಯದಲ್ಲಿ ಹೊಸ ನಿರೀಕ್ಷೆ ಮೂಡಿಸಿತ್ತು. ಇಂತಹ ಸಂದರ್ಭದಲ್ಲಿ ಅಜಿತ್ ಪವಾರ್ ನಿಧನವು ಎಲ್ಲ ಲೆಕ್ಕಾಚಾರಗಳನ್ನೇ ತಲೆಕೆಳಗಾಗಿಸಿದೆ.

ಈಗ ಉದ್ಭವಿಸಿರುವ ಪ್ರಮುಖ ಪ್ರಶ್ನೆಗಳು ಹಲವು NCP ಯಿಂದ ಮುಂದಿನ ಉಪಮುಖ್ಯಮಂತ್ರಿ ಯಾರು? ಎರಡೂ NCP ಬಣಗಳು ಒಂದಾಗುವವೆಯೇ? ಅಜಿತ್ ಪವಾರ್ ಬಣ ಏಕತೆ ಕಾಪಾಡಿಕೊಳ್ಳಬಹುದೇ? ಶರದ್ ಪವಾರ್ ರಾಜ್ಯಸಭಾ ಅವಧಿ ಮುಗಿದ ಬಳಿಕ ರಾಜಕೀಯ ನಿವೃತ್ತಿ ಘೋಷಿಸಿರುವ ಹಿನ್ನೆಲೆಯಲ್ಲಿ, NCP ಯಲ್ಲಿ ಅಜಿತ್ ಪವಾರ್ ಮತ್ತು ಸುಪ್ರಿಯಾ ಸುಳೆ ಎಂಬ ಎರಡು ಪ್ರಮುಖ ಮುಖಗಳೇ ಉಳಿದಿದ್ದವು. ಸುಪ್ರಿಯಾ ಸುಳೆ ರಾಷ್ಟ್ರಮಟ್ಟದಲ್ಲಿ ನಾಯಕಿಯಾಗಿದ್ದರೆ, ಅಜಿತ್ ಪವಾರ್ ಜನಸಾಮಾನ್ಯರೊಂದಿಗೆ ನೇರ ಸಂಪರ್ಕ ಹೊಂದಿದ ತೀಕ್ಷ್ಣ ತಂತ್ರಜ್ಞನಾಗಿ ಗುರುತಿಸಿಕೊಂಡಿದ್ದರು.

ಅಜಿತ್ ಪವಾರ್ ಸೋದರಳಿಯ ರೋಹಿತ್ ಪವಾರ್ ಇನ್ನೂ ರಾಜಕೀಯವಾಗಿ ಸಂಪೂರ್ಣವಾಗಿ ಬೆಳೆದು ಬಂದಿಲ್ಲ. ಪತ್ನಿ ಸುನೇತ್ರಾ ಪವಾರ್ ರಾಜ್ಯಸಭಾ ಸದಸ್ಯೆಯಾಗಿದ್ದು, ಬಾರಾಮತಿ ಜವಳಿ ಕಂಪನಿಯ ಅಧ್ಯಕ್ಷೆಯೂ ಹೌದು. ಅಜಿತ್ ಪವಾರ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು,
ಅಜಿತ್ ಪವಾರ್ ಜನ ನಾಯಕರಾಗಿದ್ದರು. ತಳಮಟ್ಟದ ಸಂಪರ್ಕ ಹೊಂದಿದ್ದ ಅವರು ಮಹಾರಾಷ್ಟ್ರದ ಜನರ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿದ್ದರು ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

83 ವರ್ಷದ ಶರದ್ ಪವಾರ್ ಅವರಿಗೆ ಇದು ಭಾರೀ ವೈಯಕ್ತಿಕ ಆಘಾತ. ಬಾರಾಮತಿಯ ರಾಜಕೀಯ ಹೊಣೆಗಾರಿಕೆ ಈಗ ಯಾರ ಕೈಗೆ ಹೋಗಲಿದೆ ಎಂಬ ಪ್ರಶ್ನೆಯೂ ಎದುರಾಗಿದೆ. ಒಟ್ಟಿನಲ್ಲಿ, ಪವಾರ್ ಕುಟುಂಬದ ಈ ನಷ್ಟ ಕೇವಲ ವೈಯಕ್ತಿಕವಲ್ಲ — ಇದು ಎನ್‌ಸಿಪಿ ಮಾತ್ರವಲ್ಲ, ಸಂಪೂರ್ಣ ಮಹಾರಾಷ್ಟ್ರ ರಾಜಕೀಯದ ದಿಕ್ಕನ್ನೇ ಬದಲಾಯಿಸಬಹುದಾದ ಮಹತ್ವದ ತಿರುವಾಗಿದೆ.

ವರದಿ : ಲಾವಣ್ಯ ಅನಿಗೋಳ

About The Author