Thursday, October 30, 2025

Latest Posts

ಟನಲ್ ಬೇಡ ಅನ್ನೋಕೆ ತೇಜಸ್ವಿ ಯಾರು? ಅವನೊಬ್ಬ ಎಳಸು ಎಂದು ಡಿಕೆಶಿ ಗರಂ!

- Advertisement -

ಬೆಂಗಳೂರು ನಗರಾಭಿವೃದ್ಧಿ ಯೋಜನೆ ಹಾಗೂ ಟನಲ್‌ ರಸ್ತೆ ನಿರ್ಮಾಣ ವಿಚಾರದ ನಡುವೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಬಿಜೆಪಿ ಯುವ ಸಂಸದ ತೇಜಸ್ವಿ ಸೂರ್ಯ ನಡುವಿನ ಮಾತಿನ ಸಮರ ತಾರಕಕ್ಕೇರಿದೆ. ಟನಲ್ ರೋಡ್ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ತೇಜಸ್ವಿ ಸೂರ್ಯ ವಿರುದ್ಧ ಡಿಕೆ ಶಿವಕುಮಾರ್ ತೀವ್ರ ಟೀಕೆ ಮಾಡಿದ್ದಾರೆ.

ಮೊನ್ನೆಯಷ್ಟೇ ಸದಾಶಿವನಗರದಲ್ಲಿರುವ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಸಂಸದ ತೇಜಸ್ವಿ ಸೂರ್ಯ ಭೇಟಿ ನೀಡಿ, ಬೆಂಗಳೂರಿನ ಟನಲ್‌ ರೋಡ್ ಯೋಜನೆ ಸೇರಿದಂತೆ ನಗರಾಭಿವೃದ್ಧಿ ವಿಷಯವಾಗಿ ಸಲಹೆ ನೀಡಿದ್ದರು. ಆದರೆ ಇದೀಗ ಅದೇ ವಿಚಾರದಲ್ಲಿ ಡಿಕೆ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿ, ಯುವ ಸಂಸದನ ವಿರುದ್ಧ ತೀಕ್ಷ್ಣ ಶಬ್ದಗಳನ್ನು ಬಳಸಿ ಪ್ರತಿಕ್ರಿಯೆ ನೀಡಿದ್ದಾರೆ.

ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡುತ್ತಾ, ಟನಲ್ ಬೇಡ ಅನ್ನೋಕೆ ಅವನಾರು? Who is he? ಅವನೊಬ್ಬ ಎಳಸು. ಮಾತನಾಡಲು ಅವಕಾಶ ಕೊಟ್ಟರೆ ಏನೇನೋ ಹೇಳ್ತಾನೆ. ಎಲ್ಲ ಶಾಸಕರು, ಸಚಿವರು ಆಟೋ ರಿಕ್ಷಾದಲ್ಲಿ ಓಡಾಡಲಿ ಅಂತಾ ಹೇಳ್ತಾನಾ? ಬೆಂಗಳೂರಿನಲ್ಲಿ ಒಂದು ಕೋಟಿ ಮೂವತ್ತು ಲಕ್ಷ ವಾಹನಗಳಿವೆ. ಇವನೊಬ್ಬ ಎಳಸು, ಖಾಲಿ ಟ್ರಂಕ್ – ಕೇಂದ್ರದಿಂದ ಹತ್ತು ರೂಪಾಯಿ ತರಲು ಆಗಿಲ್ಲ. ಅವನ ಬಗ್ಗೆ ನನ್ನ ಬಳಿ ಪ್ರಶ್ನೆ ಕೇಳಬೇಡಿ ಎಂದು ಕಿಡಿಕಾರಿದ್ದಾರೆ.

ಮಕ್ಕಳನ್ನ ಶಾಲೆಗೆ ಮೆಟ್ರೋದಲ್ಲಿ ಕಳುಹಿಸಲು ಆಗುತ್ತಾ ಕೇಂದ್ರದಿಂದ ಇವನೇನು ಏನು ಹಣ ತಂದಿದ್ದಾನಾ? ಅವನ ಬಗ್ಗೆ ನನ್ನ ಬಳಿ ಪ್ರಶ್ನೆ ಕೇಳಬೇಡಿ ಎಂದು ಡಿಕೆಶಿ ಗರಂ ಆಗಿದ್ದಾರೆ. ಜಗದೀಶ್ ಶೆಟ್ಟರ್, ಅಶೋಕ್, ಅಶ್ವಥ್ ನಾರಾಯಣ್, ಬೊಮ್ಮಾಯಿ ಇವರೆಲ್ಲರಿಗೆ ನಗರ ಸಮಸ್ಯೆಗಳ ಅರಿವು ಇದೆ. ಆದರೆ ಇವನಿಗೆ ಯಾವುದೂ ಗೊತ್ತಿಲ್ಲ. ಇವನೊಬ್ಬ ಎಳಸು ಎಂದು ಪದೇಪದೇ ಏಕವಚನದಲ್ಲೇ ವ್ಯಂಗ್ಯವಾಡಿದ್ದಾರೆ.

ಡಿಕೆ ಶಿವಕುಮಾರ್ ಅವರ ಈ ನೇರ ಮತ್ತು ಕಟುವಾದ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಡಿಕೆಶಿ ಮಾತಿಗೆ ಯುವ ಸಂಸದ ಯಾವ ರೀತಿ ತಿರುಗೇಟು ನೀಡ್ತಾರೆ ಕಾದು ನೋಡಬೇಕಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss