ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಎಲ್ಲದರಲ್ಲೂ ತಿಕ್ಕಾಟ, ಗೊಂದಲ ಹಾಗೂ ಬಣಗಳು ಸೃಷ್ಟಿಯಾಗಿವೆ. ಕಾಂಗ್ರೆಸ್ ಪಾಳಯದಲ್ಲಂತೂ ನಾಯಕತ್ವ ಬದಲಾವಣೆಯ ಕುರಿತು ಚರ್ಚೆಗಳು ತಾರಕಕ್ಕೇರಿವೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವಿನ ಕುರ್ಚಿ ಕದನ ಜೋರಾಗಿದ್ದು, ನಾಯಕತ್ವದ ಬಗ್ಗೆ ಸಿದ್ದು ನೀಡಿರುವ ಹೇಳಿಕೆ ಅಲ್ಲೋಲ ಕಲ್ಲೋಲಕ್ಕೆ ಕಾರಣವಾಗಿದೆ.
ಇದು ಆಡಳಿತ ಪಕ್ಷದ ಕಥೆಯಾದರೆ, ಇನ್ನೂ ವಿಪಕ್ಷ ಬಿಜೆಪಿಯಲ್ಲೂ ಅದೇ ರಾಗ ಮುಂದುವರೆದಿದೆ. ಹಾಲಿ ಅಧ್ಯಕ್ಷರಾಗಿರುವ ಬಿ.ವೈ, ವಿಜಯೇಂದ್ರ ಬದಲಾವಣೆಗೆ ಹಲವು ದಿನಗಳಿಂದ ಪಕ್ಷದಲ್ಲಿ ಕೆಲವರು ಒತ್ತಾಯಿಸುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಇರುವಂತೆಯೇ ಇಲ್ಲೂ ಬಣ ರಾಜಕೀಯ ನಡೆಯುತ್ತಿದೆ. ವಿಜಯೇಂದ್ರ ಹಾಗೂ ರೆಬಲ್ ನಾಯಕರ ಬಣಗಳು ಸದ್ದಿಲ್ಲದೇ ತಂತ್ರ- ಪ್ರತಿತಂತ್ರಗಳನ್ನು ಹೆಣೆಯುತ್ತಿವೆ. ಈ ಮೂಲಕ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಸಂದೇಶ ನೀಡುತ್ತಿವೆ.
ಇನ್ನೂ ಪ್ರಮುಖವಾಗಿ ರಾಜ್ಯ ಬಿಜೆಪಿಗೆ ರಾಜ್ಯಾಧ್ಯಕ್ಷರ ಆಯ್ಕೆ ಕಗ್ಗಂಟಾಗಿ ಉಳಿದಿದೆ. ಬಣ ರಾಜಕೀಯದಿಂದ ಎಲ್ಲಿ ಏನು ಮಾಡಬೇಕು? ಯಾವ ನಿರ್ಧಾರ ಪಡೆಯಬೇಕು ಎಂಬ ಗೊಂದಲ ಹೈಕಮಾಂಡ್ ನಾಯಕರಲ್ಲಿದೆ. ಅಲ್ಲದೆ ಪ್ರಸ್ತುತ ರಾಜ್ಯಾಧ್ಯಕ್ಷರಾಗಿರುವ ವಿಜಯೇಂದ್ರ ಅವರನ್ನು ಮುಂದಿನ ಅವಧಿಗೆ ಆಯ್ಕೆ ಮಾಡುವುದಕ್ಕೆ ಪಕ್ಷದಲ್ಲೇ ಅಪಸ್ವರಗಳು ಜೋರಾಗಿವೆ. ಹೀಗಾಗಿಯೇ ಕೆಲ ತಿಂಗಳ ಹಿಂದಷ್ಟೇ ಘೋಷಣೆಯಾಗಬೇಕಿದ್ದ ರಾಜ್ಯಾಧ್ಯಕ್ಷರ ಆಯ್ಕೆಗೆ ಕೇಸರಿ ನಾಯಕರು ಹಿಂದೇಟು ಹಾಕುತ್ತಿದ್ದಾರೆ.
ಅಲ್ಲದೆ ಈಗಾಗಲೇ ಪಕ್ಷದಲ್ಲಿ ವಿಜಯೇಂದ್ರ ಅವರಿಗೆ ಇರುವ ವಿರೋಧದ ಬಗ್ಗೆಯೂ ಹೈಕಮಾಂಡ್ ನಾಯಕರು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಈ ಹಂತದಲ್ಲಿ ಅವರನ್ನೇ ಮುಂದುವರೆಸುವ ಮನಸ್ಥಿತಿಯಲ್ಲಿದ್ದರೂ ಕೂಡ ಅವರ ವಿರುದ್ಧ ಎದ್ದಿರುವ ಅಸಮಾಧಾನದ ಹೊಗೆಯನ್ನು ತಿಳಿಗೊಳಿಸುವ ಗೋಜಿಗೆ ದಿಲ್ಲಿಯ ಬಿಜೆಪಿ ನಾಯಕರು ಹೋಗದಿರುವುದು ತೀವ್ರ ಕುತೂಹಲ ಮೂಡಿಸಿದೆ. ಪ್ರಮುಖವಾಗಿ ವಿಜಯೇಂದ್ರ ಅವರ ಬಗ್ಗೆ ಪಕ್ಷದ ನಾಯಕರಲ್ಲಿ ಇರುವ ಅಸಮಾಧಾನವನ್ನು ಗಮನಿಸಿದಾಗ ಇದುವರೆಗೂ ರಾಜ್ಯಾಧ್ಯಕ್ಷರ ನೇಮಕವಾಗದಿದ್ದಕ್ಕೆ ಸ್ಪಷ್ಟ ಕಾರಣ ತಿಳಿದು ಬರುತ್ತದೆ.
ಬಿ.ವೈ. ವಿಜಯೇಂದ್ರ ಬಗ್ಗೆ ಇರುವ ಅಸಮಾಧಾನಗಳೇನು?
ಹಿರಿಯರ ಬಗ್ಗೆ ನಿರ್ಲಕ್ಷ್ಯ, ವಿಶ್ವಾಸಕ್ಕೆ ಪಡೆಯದಿರುವುದು
ಕೌಟುಂಬಿಕ ಹಿನ್ನೆಲೆಯ ರಾಜಕಾರಣದ ಅಸಮಾಧಾನ
ಸಂಘದ ನಾಯಕರ ವಿಶ್ವಾಸ ಗಳಿಸುವಲ್ಲಿ ವಿಫಲತೆ
ಅಡ್ಜಸ್ಟ್‌ಮೆಂಟ್ ರಾಜಕೀಯದ ಆರೋಪ
ಹಿರಿತನವಿಲ್ಲದಿರುವುದು, ಅನುಭವದ ಕೊರತೆ
ಇನ್ನೂ ಪ್ರಮುಖವಾಗಿ ವಿಜಯೇಂದ್ರ ನಾಯಕತ್ವದ ವಿರುದ್ಧ ಪಕ್ಷದಲ್ಲಿಯೇ ಅಸಮಾಧಾನದ ಕಿಚ್ಚು ಹೊತ್ತಿಕೊಂಡಿದೆ. ಹಾಲಿ ಬಿಜೆಪಿ ರಾಜ್ಯಾಧ್ಯಕ್ಷರು ಪಕ್ಷದಲ್ಲಿನ ಹಿರಿಯರ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ. ಅವರನ್ನೆಲ್ಲ ವಿಶ್ವಾಸಕ್ಕೆ ಪಡೆಯದೇ ಏಕ ಚಕ್ರಾಧಿಪತ್ಯದಂತೆ ಪಕ್ಷದಲ್ಲಿ ವರ್ತಿಸುತ್ತಿದ್ದಾರೆ.
ಮೂಲತಃ ಕುಟುಂಬ ರಾಜಕಾರಣದಿಂದ ಬಂದಿರುವ ವಿಜಯೇಂದ್ರ ಅವರಿಗೆ ಇದೇ ದೊಡ್ಡ ಹಿನ್ನಡೆಗೆ ಕಾರಣವಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪಕ್ಷದ ನಾಯಕತ್ವವನ್ನು ಹೊತ್ತು ಬಿಜೆಪಿಯನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತಂದಿದ್ದರು. ಅಲ್ಲದೆ ರಾಜ್ಯದ ಸಿಎಂ ಆಗಿಯೂ ಅವರು ಸೇವೆ ಸಲ್ಲಿಸಿದ್ದರು. ಆದರೆ ಕುಟುಂಬ ರಾಜಕೀಯವನ್ನು ವಿರೋಧಿಸುವ ಪಕ್ಷದಲ್ಲಿಯೇ ಈ ರೀತಿಯ ಕುಟುಂಬ ರಾಜಕಾರಣ ನಡೆಯುತ್ತಿರುವುದು ಪಕ್ಷದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಅಲ್ಲದೆ ಒಂದು ಪಕ್ಷದ ರಾಜ್ಯಾಧ್ಯಕ್ಷರಾಗಿ ಪಕ್ಷದ ಸಂಘಟನೆಯಲ್ಲಿ ಎಲ್ಲರನ್ನೂ ಜೊತೆಯಾಗಿಸಿಕೊಂಡು ಸಾಗಬೇಕಾಗಿರುತ್ತದೆ. ಆದರೆ ವಿಜಯೇಂದ್ರ ಕೆಲವರನ್ನು ಮಾತ್ರ ಸೇರಿಸಿಕೊಂಡು ಕಾರ್ಯಭಾರ ನಡೆಸುತ್ತಿದ್ದಾರೆ. ಸಂಘದ ಪ್ರಮುಖರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳದೆ ಇರುವುದು ಅವರಿಗೆ ದೊಡ್ಡ ಹಿನ್ನಡೆಯಾದಂತಾಗಿದೆ. ಬಹುತೇಕ ಸಂದರ್ಭಗಳಲ್ಲಿ ವಿಜಯೇಂದ್ರ ಏಕ ಪಕ್ಷೀಯವಾಗಿ ನಿರ್ಧಾರ ಪಡೆಯುತ್ತಾರೆ. ಇದರಿಂದ ಪಕ್ಷಕ್ಕೆ ಹಿನ್ನಡೆಯಾಗುತ್ತಿದೆ ಎಂಬುವುದು ಕೆಲವರ ವಾದವಾಗಿದೆ.
ಮುಖ್ಯವಾಗಿ ಬಿಜೆಪಿಯಲ್ಲಿನ ಕೆಲ ಶಾಸಕರು ಆರೋಪಿಸುವಂತೆ ವಿಜಯೇಂದ್ರ ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಎಂಬ ಮಾತುಗಳು ಇವೆ. ಈ ಬಗ್ಗೆ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಹಿರಂಗವಾಗಿಯೇ ವಾಗ್ದಾಳಿ ನಡೆಸುತ್ತಿದ್ದಾರೆ. ವಿಜಯೇಂದ್ರ ಈ ಎಲ್ಲವುಗಳನ್ನು ಒಪ್ಪಿಕೊಳ್ಳದಿದ್ದರೂ, ಬಿಜೆಪಿಯಲ್ಲಿ ಮೂರನೇಯದಾಗಿ ರೂಪುತಾಳಿರುವ ಅತೃಪ್ತ ಬಣದಲ್ಲೂ ಇದೇ ಅಸಮಾಧಾನ ಕೇಳಿ ಬರುತ್ತಿದೆ.
ಅಷ್ಟೇ ಅಲ್ಲದೆ ಪಕ್ಷದಲ್ಲಿನ ಹಿರಿಯರ ಸಲಹೆ, ಮಾರ್ಗದರ್ಶನ ಪಡೆಯದೇ ವಿಜಯೇಂದ್ರ ತಾವೇ ನಿರ್ಧಾರಗಳನ್ನು ಪಡೆಯುತ್ತಾರೆ. ಪಕ್ಷಕ್ಕೆ ಮೈಲೇಜ್ ತಂದುಕೊಡುವ ಹೋರಾಟಗಳನ್ನು ಕೈಗೊಳ್ಳುವ ಮುನ್ನವೂ, ಹಿರಿಯರ ಮಾತುಗಳಿಗೆ ಕಿವಿಗೊಡದೆ ಅವರು ತಮ್ಮದೇ ಆದ ತೀರ್ಮಾನ ಮಾಡುತ್ತಾರೆ ಎಂಬೆಲ್ಲ ಅಸಮಾಧಾನಗಳು, ದೂರುಗಳು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಆಂತರಿಕವಾಗಿಯೇ ಜೋರಾಗಿವೆ. ಹೀಗಾಗಿ ಈ ಸಮಯದಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆಯ ಜೇಣುಗೂಡಿಗೆ ಕೈ ಹಾಕುವ ಮುನ್ನ ಬಿಜೆಪಿ ಹೈಕಮಾಂಡ್ ಎಚ್ಚರಿಕೆಯ ನಡೆಯನ್ನು ಅನುಸರಿಸಲು ಮುಂದಾಗಿದೆ.