Wednesday, July 2, 2025

Latest Posts

ಕಮಲ ಪಕ್ಷಕ್ಕೆ ಗುಡ್‌ಬೈ ಹೇಳಿದ್ದೇಕೆ ರಾಜಾಸಿಂಗ್?

- Advertisement -

ಬಿಜೆಪಿಯ ಫೈರ್ ಬ್ರ್ಯಾಂಡ್ ಶಾಸಕ ರಾಜಾ ಸಿಂಗ್, ದಿಢೀರ್ ಬೆಳವಣಿಗೆಯಿಂದ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಬಹು ನಿರೀಕ್ಷಿತವಾಗಿದ್ದ ಬಿಜೆಪಿಯ ರಾಜ್ಯಾಧ್ಯಕ್ಷರ ನೇಮಕದ ವಿಚಾರದಲ್ಲಿ ಬಿಜೆಪಿ ನಾಯಕರ ವಿರುದ್ಧ ಮುನಿಸಿಕೊಂಡಿರುವ ಅವರು ಕೇಸರಿ ಪಾಳಯಕ್ಕೆ ಗುಡ್ ಬೈ ಹೇಳಿದ್ದಾರೆ.

ಶಾಸಕ ರಾಜಾ ಸಿಂಗ್ ಅವರು ಹೈದ್ರಾಬಾದ್‌​ನ ಗೋಶಮಹಲ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಮಾಜಿ ವಿಧಾನಪರಿಷತ್ ಸದಸ್ಯ ಎನ್ ರಾಮಚಂದರ್ ರಾವ್ ಅವರಿಗೆ ತೆಲಂಗಾಣದ ಬಿಜೆಪಿಯ ಸಾರಥ್ಯ ವಹಿಸಿರುವುದಕ್ಕೆ ಅಸಮಾಧಾನ ಹೊರಹಾಕಿದ್ದಾರೆ. ರಾಜ್ಯಾಧ್ಯಕ್ಷರ ಆಯ್ಕೆಗೆ ನಾಮಪತ್ರ ಸಲ್ಲಿಸಲು ಪಕ್ಷದ ಕಚೇರಿಗೆ ತೆರಳಿದ್ದ ಅವರಿಗೆ ಪ್ರವೇಶ ನಿರಾಕರಣೆ ಮಾಡಲಾಗಿತ್ತು.

ಇದರಿಂದ ಇನ್ನಷ್ಟು ಕುಪಿತಗೊಂಡಿರುವ ರಾಜಾ ಸಿಂಗ್ ಅವರು ತಮ್ಮ ರಾಜೀನಾಮೆ ಪತ್ರವನ್ನು ಕೇಂದ್ರ ಕಲ್ಲಿದ್ದಲು ಸಚಿವ ಜಿ ಕಿಶನ್ ರೆಡ್ಡಿ ಅವರಿಗೆ ರವಾನಿಸಿದ್ದಾರೆ. ಅಲ್ಲದೆ ತಮ್ಮನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಒತ್ತಾಯಿಸಿ ವಿಧಾನಸಭಾ ಸ್ಪೀಕರ್ ಜಿ ಪ್ರಸಾದ್ ಕುಮಾರ್ ಅವರಿಗೆ ಪತ್ರ ಬರೆಯುವಂತೆ ಸಿಂಗ್ ಕೇಳಿಕೊಂಡಿದ್ದಾರೆ.

ಪ್ರಮುಖವಾಗಿ ಪಕ್ಷದಲ್ಲಿನ ಬೆಂಬಲದ ಕೊರತೆ ಸೇರಿದಂತೆ ಆಂತರಿಕ ಸಮಸ್ಯೆಗಳನ್ನು ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ರಾಮಚಂದರ್ ರಾವ್ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡುವ ನಿರ್ಧಾರವು ಲಕ್ಷಾಂತರ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ಆಘಾತ ಮತ್ತು ನಿರಾಶೆಯನ್ನುಂಟು ಮಾಡಿದೆ. ತೆಲಂಗಾಣದಲ್ಲಿ ಬಿಜೆಪಿ ತನ್ನ ಮೊದಲ ಸರ್ಕಾರವನ್ನು ರಚಿಸುವ ಹೊಸ್ತಿಲಲ್ಲಿ ನಿಂತಿರುವ ಈ ಸಮಯದಲ್ಲಿ, ಇಂತಹ ಆಯ್ಕೆಯು ನಮ್ಮ ನಡೆಯ ಬಗ್ಗೆ ಗಂಭೀರವಾದ ಅನುಮಾನಗಳು ಮೂಡುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮುನ್ನ, ಬಿಜೆಪಿ ರಾಷ್ಟ್ರೀಯ ನಾಯಕರ ಅಣತಿಯಂತೆ ರಾಮಚಂದರ್ ರಾವ್ ಅವರು ಈ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದರು. ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸದಂತೆ ತಡೆದಿರುವುದಕ್ಕೆ ನನಗೆ ದುಖಃವಾಗುತ್ತಿದೆ. ನಾನು ಒಳ್ಳೆಯ ಸಮಯದಲ್ಲಿ ನನ್ನ ನಾಮಪತ್ರ ಸಲ್ಲಿಸಬೇಕೆಂದುಕೊಂಡಿದ್ದೆ, ಇದಕ್ಕಾಗಿ ರಾಜ್ಯದ ಮೂವರು ಪರಿಷತ್ ಸದಸ್ಯರ ಸಹಿಯನ್ನು ಪಡೆದುಕೊಂಡಿದ್ದೆ. ಆದರೆ ನಿಯಮಗಳ ಪ್ರಕಾರ ನನಗೆ ಇನ್ನೂ ಏಳು ಜನರ ಸಹಿಗಳು ಬೇಕಾಗಿದ್ದವು. ಇದಕ್ಕೆ ಪಕ್ಷ ಅವಕಾಶ ನೀಡಲಿಲ್ಲ ಎಂದು ಶಾಸಕ ರಾಜಾ ಸಿಂಗ್ ರಾಜೀನಾಮೆ ಬಳಿಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಇಷ್ಟೇ ಅಲ್ಲದೆ ನನ್ನ ನಾಮಪತ್ರವನ್ನು ಬೆಂಬಲಿಸಿದರೆ ಪಕ್ಷದಿಂದ ಅಮಾನತುಗೊಳಿಸುವುದಾಗಿ ಕೆಲವು ಹಿರಿಯ ನಾಯಕರು ಪಕ್ಷದ ಸದಸ್ಯರಿಗೆ ಬೆದರಿಕೆ ಹಾಕಿದ್ದರು. ನನಗೆ ಹೆಚ್ಚಿನ ಸದಸ್ಯರ ಬೆಂಬಲ ಪಡೆಯಲು ಸಾಧ್ಯವಾಗದ ಕಾರಣ, ನಾನು ನಾಮಪತ್ರ ಸಲ್ಲಿಸಲು ಸಾಧ್ಯವಾಗಲಿಲ್ಲ. ಕಳೆದ 2014ರಿಂದಲೂ ನಾನು ಭಯೋತ್ಪಾದಕರ ಹಿಟ್ ಲಿಸ್ಟ್‌ನಲ್ಲಿ ಉಳಿದಿದ್ದೇನೆ. ಬಿಜೆಪಿಯೊಳಗಿನ ಕೆಲವು ಹಿರಿಯ ನಾಯಕರು ತೆಲಂಗಾಣದಲ್ಲಿ ಪಕ್ಷ ಅಧಿಕಾರಕ್ಕೆ ಬರುವುದನ್ನು ಬಯಸುವುದಿಲ್ಲ.ಇದಕ್ಕಾಗಿಯೇ ನನ್ನಂತಹ ನಿಷ್ಠಾವಂತರನ್ನು ತುಳಿಯುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ನಾನು ನಿಮಗೆ ಮತ್ತು ನಿಮ್ಮ ಪಕ್ಷಕ್ಕೆ ನಮಸ್ಕಾರ ಹೇಳುತ್ತೇನೆ, ನನ್ನ ವಿದಾಯ ತಿಳಿಸುತ್ತೇನೆ. ಇನ್ನು ಮುಂದೆ ಬಿಜೆಪಿಯಲ್ಲಿ ನಾನು ಮುಂದುವರೆಯಲು ಸಾಧ್ಯವಿಲ್ಲ ಎಂದು ಶಾಸಕ ರಾಜಾ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ದಕ್ಷಿಣ ಭಾಗದಲ್ಲಿ ಹಿಂದೂತ್ವದ ಕಹಳೆಯನ್ನು ಮೊಳಗಿಸಿ, ಬಿಜೆಪಿ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುತ್ತಿದ್ದ ಪ್ರಖರ ವಾಗ್ಮಿ ನಾಯಕನೊಬ್ಬನ ವಿದಾಯ ಪಕ್ಷಕ್ಕೆ ಯಾವ ರೀತಿಯಾಗಿ ಹಿನ್ನಡೆಯಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

- Advertisement -

Latest Posts

Don't Miss