News: ಈ ಬಾರಿ ಮೈಸೂರು ದಸರಾವನ್ನು ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರು ಉದ್ಘಾಟಿಸಲಿದ್ದಾರೆಂದು ನಿರ್ಧಾರವಾಗಿದೆ. ಆದರೆ ಈ ನಿರ್ಧಾರವನ್ನು ಬಿಜೆಪಿ ನಾಯಕರು ಸೇರಿ ಹಲವರು ಆಕ್ಷೇಪಿಸಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್, ಪ್ರತಾಪ್ ಸಿಂಹ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಸಾಮಾಜಿಕ ಹೋರಾಟಗಾರ ಚಕ್ರವರ್ತಿ ಸೂಲಿಬೆಲೆ ಕೂಡ ಈ ಪ್ರಸ್ತಾಪವನ್ನು ಆಕ್ಷೇಪಿಸಿದ್ದಾರೆ.
ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ವೀಡಿಯೋ ಅಪ್ಲೋಡ್ ಮಾಡಿರುವ ಸೂಲಿಬೆಲೆ, ಕನ್ನಡ ಭುವನೇಶ್ವರಿಯನ್ನು ಸಹಿಸಲಾಗದವರು ಚಾಮುಂಡಿ ತಾಯಿಯ ವೈಭವಕ್ಕೆ ತಲೆಬಾಗಲು ಒಪ್ಪಿದ್ದಾದರೂ ಏಕೆ? ಎಂದು ಪ್ರಶ್ನಿಸಿದ್ದಾರೆ.
ಈ ವೀಡಿಯೋದಲ್ಲಿ ಮಾತನಾಡಿರುವ ಬಾನು ಮುಷ್ತಾಕ್ ಅವರು, ಕನ್ನಡ ಬಗ್ಗೆ ನನ್ನ ಅನಿಸಿಕೆ ಹೇಳ್ತೀನಿ. ಅದು ನಿಮಗೆ ಇಷ್ಟವಾಗತ್ತೋ, ಕಷ್ಟವಾಗತ್ತೋ ತಿಳಿದಿಲ್ಲ. ಕನ್ನಡ ಭಾಷೆಯನ್ನು ಬಾನು ಮುಷ್ತಾಕ್ ಮತ್ತು ಆಕೆಯ ಮನೆಯವರು ಮಾತನಾಡಲಿಕ್ಕೆ, ನೀವು ಅವಕಾಶವೇ ನೀಡಲಿಲ್ಲ. ಕನ್ನಡವನ್ನು ಕನ್ನಡ ಭುವನೇಶ್ವರಿಯಾಗಿ ಮಾಡಿದಿರಿ.
ಕನ್ನಡ ಬಾವುಟವನ್ನು ಕೆಂಪು ಹಳದಿ ಮಾಡಿ, ಅದನ್ನು ಅರಿಶಿನ-ಕುಂಕುಮವೆಂದು ಪರಿಗಣಿಸಿ, ಕನ್ನಡ ದೇವಿಯನ್ನು ಅರಿಶಿನ-ಕುಂಕುಮದಿಂದ ಲೇಪಿಸಿ, ಮಂದಾಸನದ ಮೇಲೆ ಕೂರಿಸಿದಿರಿ. ನಾನೆಲ್ಲಿ ನಿಲ್ಲಬೇಕು..? ನಾನೇನನ್ನು ನೋಡ್ಬೇಕು..? ನಾನು ಹೇಗೆ ಇನ್ವಾಲ್ವ್ ಆಗಬೇಕು..? ನಮ್ಮನ್ನು ಆಚೆ ಹಾಕುವುದು ಯಾವತ್ತಿನಿಂದಲೋ ಆಯ್ತು. ಇವತ್ತು ಪೂರ್ಣವಾಗಿದೆ ಎಂದು ಬಾನು ಮುಷ್ತಾಕ್ ಹೇಳಿದ್ದರು.
ಈ ವಿಷಯಕ್ಕೆ ನೀವು ದಯಮಾಡಿ ಆಲೋಚನೆ ಮಾಡಿ. ಏಕೆಂದರೆ, ನೀವುಗಳು ಕನ್ನಡ ಭಾಷೆಯ ಮೇಲೆ ದೌರ್ಜನ್ಯ ಮಾಡುತ್ತಿದ್ದೀರಿ. ಕನ್ನಡದ ರಥವನ್ನು ಎಳೆದು, ಕನ್ನಡವನ್ನು ಭುವನೇಶ್ವರಿ ತಾಯಿಯನ್ನಾಗಿ ಮಾಡಿ, ಕನ್ನಡದ ಪರಿಷೆಯನ್ನಾಗಿ ಮಾಡಿ ನೀವು ಏನು ಮಾಡಿದ್ದೀರಿ..? ಉತ್ತರಿಸಿ ಎಂದು ಬಾನು ಮುಷ್ತಾಕ್ ಪ್ರಶ್ನಿಸಿದ್ದರು.
ಹೀಗಾಗಿ ಬಾನು ಮುಷ್ತಾಕ್ ಭುವನೇಶ್ವರಿಯನ್ನೇ ಸ್ವೀಕರಿಸಲಿಲ್ಲ, ಇನ್ನು ಚಾಮುಂಡೇಶ್ವರಿಯನ್ನು ಸ್ವೀಕರಿಸುತ್ತಾರಾ..? ಅದು ಹೇಗೆ ಅವರು ಉದ್ಘಾಟನೆ ಮಾಡಲು ಸರಿ ಎಂದರು ಎಂದು ಚಕ್ರವರ್ತಿ ಸೂಲಿಬೆಲೆ ಪ್ರಶ್ನಿಸಿದ್ದಾರೆ.