ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರೆಂದು ಘೋಷಿಸಿದವರು ಯಡಿಯೂರಪ್ಪ ಅಥವಾ ಬಸವರಾಜ ಬೊಮ್ಮಾಯಿ ಅಲ್ಲ, ನಾನು. ಆದರೂ ಕೆಲವರು ನನ್ನನ್ನು ಯಾಕೆ ದ್ವೇಷಿಸುತ್ತಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಿದರು.
ಬಾಗಲಕೋಟೆ ಜಿಲ್ಲೆಯ ಬಂಡಿಗಣಿ ಮಠದಲ್ಲಿ ಸೋಮವಾರ ನಡೆದ ವಿಶ್ವಶಾಂತಿಯ ಸರ್ವಧರ್ಮ ಮಹಾಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರೆಂದು ಘೋಷಿಸಿ, ಸರ್ಕಾರಿ ಕಚೇರಿಗಳಲ್ಲಿ ಅವರ ಭಾವಚಿತ್ರ ಇರಿಸಲು ನಾನು ಆದೇಶಿಸಿದ್ದೇನೆ ಎಂದರು.
ಈ ವೇಳೆ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿಕೆ ನೀಡುತ್ತಾ, ಇಲ್ಲ ಸರ್, ನಾವು ನಿಮಗೆ ಬಹಳ ಪ್ರೀತಿ ಮಾಡುತ್ತೇವೆ ಎಂದರು.
ಅದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನೀನು ಮಾಡುತ್ತೀಯಪ್ಪಾ, ನೀನು ಯಾವಾಗಲೂ ನನ್ನ ಅಭಿಮಾನಿ. ಆದರೆ ಕೆಲವರು ಯಾಕೆ ದ್ವೇಷಿಸುತ್ತಾರೆ ಎಂಬುದು ನನಗೇ ಗೊತ್ತಾಗುತ್ತಿಲ್ಲ ಎಂದು ಹೇಳಿದರು.
ಮುಖ್ಯಮಂತ್ರಿ ಮುಂದುವರಿದು, ನಾನು ಬಸವಣ್ಣನವರ ಕಟ್ಟಾ ಅನುಯಾಯಿ. 2013ರಲ್ಲಿ ಬಸವ ಜಯಂತಿ ದಿನದಂದು ಪ್ರಮಾಣ ವಚನ ಸ್ವೀಕರಿಸಿದ್ದೇನೆ. ಬಸವಣ್ಣನವರ ಸಮಸಮಾಜ ನಿರ್ಮಾಣವೇ ನನ್ನ ಸರ್ಕಾರದ ಗುರಿ ಎಂದು ಹೇಳಿದರು.
ವರದಿ : ಲಾವಣ್ಯ ಅನಿಗೋಳ