Spiritual: ದುರ್ಗಾದೇವಿ ಯಾರು ಎಂದರೆ, ಬ್ರಹ್ಮ-ವಿಷ್ಣು-ಮಹೇಶ್ವರರ ಅಂಶವೇ ದುರ್ಗೆ. ಈಕೆಯ ಜನ್ಮಕ್ಕೆ ಕಾರಣ ಮಹಿಷಾಸುರ. ಮಹಿಷಾಸುರನ ಅಂತ್ಯಕ್ಕಾಗಿ ತ್ರಿಮೂರ್ತಿಗಳಿಂದ ಜನಿಸಿದವಳೇ ಈ ಸಿಂಹ ವಾಹಿನಿ. ನೀವು ದುರ್ಗಾದೇವಿಯ ಫೋಟೋ, ಮೂರ್ತಿ ನೋಡಿದಾಗ ನಿಮಗೆ ಆಕೆಯ ಕೈಯಲ್ಲಿ ತರಹ ತರಹದ ಆಯುಧ ಕಾಣುತ್ತದೆ. ಹಾಗಾದ್ರೆ ಆ ಆಯುಧಗಳನ್ನು ಆಕೆಗೆ ನೀಡಿದವರ್ಯಾರು..? ಅಂತಾ ತಿಳಿಯೋಣ ಬನ್ನಿ..
ಮಹಿಷಾಸುರ ತನ್ನ ತಂದೆ ವಿದ್ಯುನ್ಮಾಲಿಯನ್ನು ಮಹಾವಿಷ್ಣು ಸಂಹರಿಸಿದ್ದ. ಈ ಕಾರಣಕ್ಕೆ ಮಹಿಷಾಸುರ ಸಕಲ ಶಕ್ತಿ ಪಡೆಯಬೇಕು ಎಂದು ಬ್ರಹ್ಮನನ್ನು ಕುರಿತು ತಪಸ್ಸನ್ನಾಚರಿಸಿದ. ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾದ ಬ್ರಹ್ಮ ಏನು ವರ ಬೇಕೆಂದು ಕೇಳಿದಾಗ, ತನಗೆ ಯಾವ ಪುರುಷನಿಂದಲೂ ಜೀವಹಾನಿಯಾಗಬಾರದೆಂದು ಕೇಳಿದ.
ಏಕೆಂದರೆ, ಆತನ ಪ್ರಕಾರ, ಸ್ತ್ರೀ ಎಂದರೆ ತುಚ್ಛ ಎಂಬ ಭಾವನೆ ಇತ್ತು. ಹಾಗಾಗಿ ಆತ ಪುರುಷನಿಂದ ತನಗೆ ಸಮಸ್ಯೆ ಆಗಬಾರದು ಎಂದು ಕೇಳಿದ. ಹಾಗಾಗಿಯೇ ಆತನ ಸಂಹಾರಕ್ಕಾಗಿ ಬ್ರಹ್ಮ-ವಿಷ್ಣು-ಮಹೇಶ್ವರರು ಸೇರಿ ತಮ್ಮ ಅಂಶವನ್ನು ಕೂಡಿಸಿದಾಗ, ದುರ್ಗಾದೇವಿಯ ಜನನವಾಯಿತು.
ಆಗ ದುರ್ಗಾದೇವಿ ಶಕ್ತಿಶಾಲಿ ಮಹೀಷನನ್ನು ವಧಿಸಲು ಆಕೆಗೆ ಸಕಲಾಯುಧಗಳ ಅವಶ್ಯಕತೆ ಇತ್ತು. ಹಾಗಾಗಿ ಶಿವ ತನ್ನ ತ್ರಿಶೂಲವನ್ನು ದುರ್ಗೆಗೆ ನೀಡಿದ. ವಿಷ್ಣು ತನ್ನ ಸುದರ್ಶನ ಚಕ್ರ ನೀಡಿದ. ಇಂದ್ರ ತನ್ನ ವಜ್ರಾಯುಧ ನೀಡಿದ. ವರುಣ ತನ್ನ ಬಳಿ ಇದ್ದ ಪಾಶ ನೀಡಿದ.
ಯಮರಾಜ ದುರ್ಗೆಗೆ ತನ್ನ ಕಾಲದಂಡ ನೀಡಿದ. ಅಗ್ನಿ ತನ್ನ ಅಗ್ನಿ ಶಕ್ತಿ ಭಾಲಾ ನೀಡಿದ. ಗಣೇಶ ತನ್ನ ಖಡ್ಗ ನೀಡಿದ. ಸೂರ್ಯದೇವ ತನ್ನ ಕಿರಣ ಜ್ಯೋತಿ ನೀಡಿದ. ಚಂದ್ರದೇವ ಚಂದ್ರಕ್ರಪಾಣ ನೀಡಿದ. ವಾಯುದೇವ ತನ್ನ ವೇಗಾಸ್ತ್ರ ನೀಡಿದ. ಹೀಗೆ ದಶ ಅಸ್ತ್ರ ಅಂದ್ರೆ ಹತ್ತು ದೇವತೆಗಳಿಂದ, 10 ಅಸ್ತ್ರಗಳನ್ನು ಪಡೆದ ದುರ್ಗೆ ಮಹಿಷಾಸುರನ ಸಂಹಾರಕ್ಕೆ ಅಣಿಯಾಗುತ್ತಾಳೆ.
9 ದಿನಗಳ ಕಾಲ 9 ರೂಪ ಧಾರಣೆ ಮಾಡಿ, ಮಹಿಷಾಸುರನನ್ನು ವಧಿಸುತ್ತಾಳೆ. ಅದೇ 9 ದಿನಗಳನ್ನು ನಾವು ನವರಾತ್ರಿಯನ್ನಾಗಿ ಆಚರಿಸುತ್ತೇವೆ. 10ನೇ ದಿನಕ್ಕೆ ಶಾಂತಸ್ವರೂಪಿಣಿಯಾದ ತಾಯಿ, ಲೋಕ ಕಲ್ಯಾಣಕ್ಕಾಗಿ ಭೂಲೋಕದಲ್ಲಿ ನಾನಾ ಅವತಾರದಲ್ಲಿ, ಪುಣ್ಯ ಸ್ಥಳಗಳಲ್ಲಿ ನೆಲೆನಿಲ್ಲುತ್ತಾಳೆ. ಈ ದಿನವನ್ನು ನಾವು ವಿಜಯದಶಮಿ ಎಂದು ಆಚರಿಸುತ್ತೇವೆ.




