ಮಹಾಭಾರತದಲ್ಲಿ ಬರುವ ಶಂತನು, ಗಂಗೆಯನ್ನ ಮೆಚ್ಚಿ ಮದುವೆಯಾಗಲು ಇಚ್ಛಿಸಿದ, ಆಕೆಗೆ ಪ್ರೇಮ ನಿವೇದನೆಯನ್ನೂ ಮಾಡಿದ. ಆಗ ಗಂಗೆ, ನಾನು ನಿಮ್ಮನ್ನು ಮದುವೆಯಾಗುತ್ತೇನೆ. ಆದರೆ ನಾನೇನೇ ಮಾಡಿದರೂ ನೀನು ಅದನ್ನು ಪ್ರಶ್ನಿಸುವಂತಿಲ್ಲ. ಬದಲಾಗಿ ನಾನೇನೇ ಮಾಡಿದರೂ, ನೀವು ಸುಮ್ಮನಿರಬೇಕು. ಯಾವ ದಿನ ನೀವು ನಾನು ಮಾಡುವ ಕೆಲಸಗಳ ಬಗ್ಗೆ ಪ್ರಶ್ನಿಸುತ್ತೀರೋ, ಆ ದಿನ ನಾನು ನಿಮ್ಮನ್ನು ಬಿಟ್ಟು ಹೋಗುತ್ತೇನೆ ಎಂದು ಹೇಳುತ್ತಾಳೆ. ಅದಕ್ಕೆ ಒಪ್ಪಿದ ಶಂತನು, ಸರಿ ನೀನೇನೇ ಮಾಡಿದರೂ, ನಾನು ಕೇಳುವುದಿಲ್ಲ ಎಂದು ಹೇಳಿ, ವಿವಾಹವಾಗುತ್ತಾನೆ. ವಿವಾಹದ ಬಳಿಕ, ಗಂಗೆ ಯಾವ ಕೆಲಸವನ್ನು ಮಾಡುತ್ತಾಳೆ..? ಆ ಕೆಲಸದ ಬಗ್ಗೆ ಶಂತನು ಕೇಳಿದಾಗ, ಏನಾಗುತ್ತದೆ..? ಇತ್ಯಾದಿ ವಿಷಯಗಳ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ..
ಗಂಗೆ ಮತ್ತು ಶಂತನು ವಿವಾಹವಾಗುತ್ತಾರೆ. ಮತ್ತು ಅರಮನೆಗೆ ಬರುತ್ತಾರೆ. ಇಬ್ಬರ ಜೀವನ ಸುಖಮಯವಾಗುತ್ತದೆ. ಹೀಗೆ ದಿನಗಳೆದಂತೆ, ಗಂಗಾ ಗರ್ಭ ಧರಿಸುತ್ತಾಳೆ. ಶಂತನುವಿನ ಸಂಭ್ರಮಕ್ಕೆ ಪಾರವೇ ಇರುವುದಿಲ್ಲ. ಆದರೆ, ಮಗು ಹುಟ್ಟಿದ ಬಳಿಕ ಗಂಗೆ, ಅದನ್ನು ನೀರಿಗೆ ಎಸೆಯುತ್ತಾಳೆ. ಆಗ ಶಂತನುವಿಗೆ ಬೇಸರವಾಗುತ್ತದೆ. ಆದ್ರೆ ಅದರ ಬಗ್ಗೆ ಕೇಳಲು ಹೋಗುವುದಿಲ್ಲ.
ಗಂಗಾ 7 ಬಾರಿ ಗರ್ಭವತಿಯಾಗುತ್ತಾಳೆ. ಮತ್ತು 7 ಮಕ್ಕಳನ್ನೂ ನದಿಗೆಸೆಯುತ್ತಾಳೆ. ಆದರೆ 8ನೇ ಮಗು ಹುಟ್ಟಿದಾಗ, ಅದನ್ನು ನದಿಗೆ ಎಸೆಯಲು ಹೋದಾಗ, ಶಂತನುವಿಗೆ ಸಿಟ್ಟು ಬರುತ್ತದೆ. ಆಗ ಶಂತನು, ಯಾಕೆ ಹೀಗೆ ಮಾಡುತ್ತಿದ್ದಿಯಾ..? ಹುಟ್ಟಿದ ಏಳೂ ಮಕ್ಕಳನ್ನು ನೀರಿಗೆಸೆದೆ. ಇದೆಂಥಾ ಹಠ ನಿನ್ನದು..? ಅಷ್ಟು ಪುಟ್ಟ ಜೀವವನ್ನು ನೀರಿಗೆಸೆಯಲು ಮನಸ್ಸಾದರೂ ಹೇಗೆ ಬರುತ್ತದೆ ನಿನಗೆ..? ಎಂದು ಪ್ರಶ್ನಿಸಿದ.
ಆಗ ಗಂಗೆ ಈತ ನಿನ್ನ ಎಂಟನೇ ಪುತ್ರ, ದೇವವೃತ. ನಿನ್ನ ಕೊನೆಗಾಲದವರೆಗೂ ಈತ ನಿನ್ನ ಜೊತೆ ಇರುತ್ತಾನೆ. ನಾನು ಈತನನ್ನು ಬೆಳೆಸಿ, ನಂತರ ನಿನ್ನ ಕೈಗೆ ಕೊಡುವೆ. ನಾನು ಈ ಮೊದಲೇ, ನೀನು ಎಂದು ನನ್ನ ಕೆಲಸವನ್ನು ಪ್ರಶ್ನಿಸುತ್ತಿಯೋ, ಅಂದೇ ನಿನ್ನನ್ನು ಬಿಟ್ಟು ಹೋಗುತ್ತೇನೆಂದು ಹೇಳಿದ್ದೆ. ಈಗ ಆ ಸಮಯ ಬಂದಿದೆ. ನಾನು ನೀರಿಗೆಸೆದ 7 ಮಕ್ಕಳು, ಈ ಜನ್ಮದಲ್ಲಿ ಪ್ರಾಯಶ್ಚಿತ ಮಾಡಿಕೊಳ್ಳಲು ಜನಿಸಿದ್ದರು. ಮತ್ತು ನಾವು ಕಳೆದ ಜನ್ಮದಲ್ಲಿ ಮಾಡಿದ ಪಾಪಕ್ಕೆ, ನಮಗೆ ತಗುಲಿದ ಶಾಪಕ್ಕೆ ಈ ರೀತಿ ನಮ್ಮ 7 ಜನ ಮಕ್ಕಳನ್ನು ಕಳೆದುಕೊಳ್ಳಬೇಕಾಯಿತು.
ಕಳೆದ ಜನ್ಮದಲ್ಲಿ ನಾನು ಬ್ರಹ್ಮನ ಮಗಳಾಗಿದ್ದೆ. ನೀವು ಇಕ್ಷ್ವಾಕು ಮನೆತನದ ರಾಜ, ಮಹಾಭೀಷ ಆಗಿದ್ದಿರಿ. ನಾನು ನನ್ನ ತಂದೆ ಬ್ರಹ್ಮರೊಂದಿಗೆ ದೇವಲೋಕಕ್ಕೆ ಬಂದಿದ್ದೇನು. ನೀವು ಕೂಡ ಅಲ್ಲಿ ಬಂದಿದ್ದಿರಿ. ನಿಮ್ಮ ಚೆಲುವು ನೋಡಿ ನಾನು, ನನ್ನ ಚೆಲುವು ನೋಡಿ ನೀವು ಇಬ್ಬರೂ ಮೈಮರೆತಿದ್ದೆವು. ಗಾಳಿಗೆ ನನ್ನ ಬಟ್ಟೆ ತೇಲಿ ಹೋಗಿತ್ತು. ಆದ್ರೆ ಅದರೆಡೆಗೆ ನನಗೆ ಲಕ್ಷ್ಯವಿರಲಿಲ್ಲ. ನೀವು ನನ್ನ ಕಣ್ಮಿನಲ್ಲಿ ಕಣ್ಣಿಟ್ಟು ನೋಡುತ್ತಿದ್ದಿರೇ ವಿನಃ, ನನ್ನ ಮಾನ ಮುಚ್ಚಲು ಏನೂ ಮಾಡಲಿಲ್ಲ.
ಆಗ ಅಲ್ಲೇ ಇದ್ದ ಬ್ರಹ್ಮರಿಗೆ ಕೋಪ ಬಂದು, ಮುಂದಿನ ಜನ್ಮದಲ್ಲಿ ನೀವು ಗಂಡ ಹೆಂಡತಿಯಾಗಿ. ಆದರೆ ನಿನ್ನಿಂದ ನಿನ್ನ ಗಂಡನಿಗೆ ಬರೀ ದುಃಖವೇ, ಸಿಗಬೇಕೇ ಹೊರತು ಸುಖವಲ್ಲ ಎಂದು ಶಾಪ ಹಾಕಿದ್ದರು. ಹೀಗಾಗಿಯೇ ನಾನು ನನ್ನ ಮಕ್ಕಳನ್ನು ನೀರಿಗೆಸೆದು, ನಿಮ್ಮ ಮನಸ್ಸನ್ನು ನೋಯಿಸುತ್ತಿದ್ದೆ. ಇನ್ನು ಮರಣ ಹೊಂದಿದ 7 ಮಕ್ಕಳು, ವಸಿಷ್ಠ ಮುನಿಗಳ ಶಾಪಕ್ಕೆ ಗುರಿಯಾದ ವಸುಗಳು. ಈ ಜನ್ಮದಲ್ಲಿ ಹುಟ್ಟಿ ತಮ್ಮ ಪಾಪಕ್ಕೆ ಪಶ್ಚಾತಾಪ ಮಾಡಿಕೊಂಡಿದ್ದಾರೆ.