Sunday, July 20, 2025

Latest Posts

ಪಾಟೀಲ್ರೇ ಜನ್ರಿಂದ ಆಯ್ಕೆಯಾಗಿದ್ದೀರಿ ಸ್ವಲ್ಪ ಜವಾಬ್ದಾರಿ ಇರಲಿ : ಎಂಬಿಪಿ ವಿರುದ್ದ ಪ್ರಕಾಶ್ ರಾಜ್ ಕಿಡಿ

- Advertisement -

ಬೆಂಗಳೂರು : ಕೆಐಎಡಿಬಿ ವತಿಯಿಂದ ರೈತರ ಭೂಸ್ವಾಧೀನ ವಿರೋಧಿಸಿ ಬಹುಭಾಷಾ ನಟ ಪ್ರಕಾಶ್ ರಾಜ್ ಪ್ರತಿಭಟನೆ ನಡೆಸಿದ್ದರು. ಈ ವೇಳೆ ರಾಜ್ಯ ಸರ್ಕಾರದ ನಡೆಯನ್ನು ಟೀಕಿಸಿದ್ದ ನಟನ ವಿರುದ್ಧ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಪ್ರಕಾಶ್ ರಾಜ್ ಬೇರೆ ಕಡೆಗೆ ಹೋಗಿ ಹೋರಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಬಹುಭಾಷಾ ನಟ ಪ್ರಕಾಶ್‌ ರಾಜ್‌ ಕೇವಲ ಕರ್ನಾಟಕದಲ್ಲಿ ಮಾತ್ರ ಯಾಕೆ ಹೋರಾಟ ಮಾಡುತ್ತಾರೆ? ಉತ್ತರ ಪ್ರದೇಶ, ಅಸ್ಸಾಂನಲ್ಲೂ ಹೋರಾಟ ಮಾಡಲಿ. ಅಷ್ಟೇ ಯಾಕೆ ಗುಜರಾತ್‌ನಲ್ಲೂ ಹೋರಾಟ ಮಾಡಲಿ ಎಂದು ತೀಕ್ಷ್ಣವಾಗಿ ಮಾತಿನ ಚಾಟಿ ಬೀಸಿದ್ದರು. ಆದರೆ ಇದೀಗ ಸಚಿವ ಎಂ.ಬಿ. ಪಾಟೀಲ್ ಹೇಳಿಕೆಯ ವಿರುದ್ಧ ಪ್ರಕಾಶ್ ರಾಜ್ ಸಿಡಿದೆದ್ದಿದ್ದು, ಎಂ.ಬಿ. ಪಾಟೀಲ್ರೇ ನೀವು ಪ್ರಕಾಶ್ ರಾಜ್ ತಮಿಳುನಾಡು, ತೆಲಂಗಾಣ ಹಾಗೂ ಗುಜರಾತ್​​ನಲ್ಲಿ ಹೋಗಿ ಹೋರಾಟ ಮಾಡಿ ಅಂತ ಹೇಳಿದ್ದೀರಿ. ಸ್ವಾಮಿ ಇದು ದೇವನಹಳ್ಳಿ ರೈತರ ಸಮಸ್ಯೆ, ಕರ್ನಾಟಕದಲ್ಲಿಯೇ ದೇವನಹಳ್ಳಿಯಲ್ಲೇ ಹೋರಾಟ ಮಾಡಬೇಕು ಎಂದು ತಿರುಗೇಟು ನೀಡಿದ್ದಾರೆ.

ತಮಿಳುನಾಡಿನ ರೈತರು ನೂರು ದಿನ ದಿಲ್ಲೀಲಿ ಹೋಗಿ ಕೂತಾಗ ಅವರ ಜೊತೆ ಹೋಗಿ ಕೂತೋನು ನಾನೇ, ಪಂಜಾಬ್, ಹರಿಯಾಣದ ರೈತರು ಹೋರಾಟ ಮಾಡಿದ್ದಾಗ ಇದ್ದೋನು ನಾನೇ, ನಾವು ಎಲ್ಲ ಕಡೆಯೂ ಮಾತನಾಡ್ತೀವಿ, ಮಣಿಪುರ, ಪ್ಯಾಲೇಸ್ತೀನ್​ದಲ್ಲೂ ಅನ್ಯಾಯವಾದಾಗಲೂ ಮಾತನಾಡ್ತೀವಿ ಎಂದು ತಿವಿದಿದ್ದಾರೆ.

ಇನ್ನೂ ಗುಜರಾತಾ, ಗುಜರಾತಿನ, ಗುಜರಾತಿನ ಮಹಾಪ್ರಭು ಪ್ರಧಾನಿಯನ್ನ ನಿಮಗಿಂತ ಹೆಚ್ಚು ಪ್ರಶ್ನೆ ಮಾಡೋಣು ನಾನೇ. ಯಾಕೆಂದರೆ ನಾವು ಯಾವುದೇ ಪಕ್ಷದವರಲ್ಲ, ಜನರ ಪಕ್ಷದವರು. ಆಯಾ ಹೋರಾಟಗಳನ್ನು ಮಾಡುತ್ತಿರುತ್ತೇವೆ. ನೀವು ಒಂದು ಪಕ್ಷದವರು ಹೀಗಾಗಿ ಜನರಿಗೆ ಎಲ್ಲೇ ಸಮಸ್ಯೆಯಾದರೂ ಮಾತನಾಡೋದು ನಮ್ಮ ಕರ್ತವ್ಯ, ನಮ್ಮ ಹೋರಾಟ. ಅದು ನಿಮಗೆ ಅರ್ಥವಾಗಲ್ಲ ಬಿಡಿ ಎಂದು  ಕಿಡಿ ಕಾರಿದ್ದಾರೆ.

ದೇವನಹಳ್ಳಿ ರೈತರ ಹೋರಾಟದ ವಿಚಾರದಲ್ಲಿ ಮುಖ್ಯಮಂತ್ರಿಗಳು ಸಭೆಯಲ್ಲಿ ಜನಪರ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ದೇವನಹಳ್ಳಿ ರೈತರ ವಿಚಾರವಾಗಿ ಕಾನೂನು ರೀತಿ ಪರಿಹಾರ ಹುಡುಕಿ. ಜನಪರ ನಿಲುವುಗಳನ್ನು ಹೇಗೆ ಪಡೆಯುಲು ಸಾಧ್ಯ ಅದರ ಬಗ್ಗೆ ಯೋಚಿಸಿ, ನಿಮ್ಮ ಕಡೆಯಿಂದ ಆಗದಿದ್ದರೆ ನಮ್ಮ ಬಳಿಯೇ ಬನ್ನಿ , ನಮ್ಮಲ್ಲೂ ತಜ್ಜರು, ನ್ಯಾಯ ಬಲ್ಲವರು ಇದ್ದಾರೆ ಎಂದು ಚರ್ಚೆಗೆ ಆಹ್ವಾನಿಸಿದ್ದಾರೆ.

ಈ ಮಧ್ಯೆ ದೇವನಹಳ್ಳಿಯಲ್ಲಿ ಒಂದಿಷ್ಟು ಕಿಡಿಗೇಡಿಗಳು, ಪುಡಾರಿಗಳು ಹೋಗಿ, ನಿಮಗೆ 3 ಕೋಟಿ ರೂಪಾಯಿ ಕೊಡ್ತೀವಿ. ಸರ್ಕಾರದಿಂದ ಕಾನೂನು ಪ್ರಕಾರ ಲೇಟ್ ಆಗುತ್ತದೆ ಎಂದು ಹೇಳಿ ಒಡೆಯುವ ಪ್ರಯತ್ನ ಮಾಡ್ತಿದ್ದಾರೆ. ಇಡೀ ಏರಿಯಾವನ್ನೇ ರೀ ಬಿಲ್ಡ್ ಮಾಡ್ತೀವಿ ಇನ್ನೊಂದ್ 25 ವರ್ಷ ನೀವು ಮಾರಾಟ ಮಾಡೋಕೆ ಆಗಲ್ಲ ಹೇಳ್ತಿದ್ದಾರೆ. ನಿಮಗೆ ಅವರು ಪರಿಚಯ ಇದ್ರೆ ಈ ರೀತಿ ಮಾಡಬೇಡಿ ಎಂದು ಹೇಳಿ. ಅದಕ್ಕೆಲ್ಲ ಕಾನೂನಿನಲ್ಲಿ ಪರಿಹಾರ ಇದ್ದೆ ಇರುತ್ತದೆ.

ಕೆಐಎಡಿಬಿ ಭೂಸ್ವಾಧೀನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಯೋಚಿಸಿ. ನಮ್ಮ ಬಳಿ ಸುಪ್ರೀಂ ಕೋರ್ಟ್​​ ನಿವೃತ್ತ ನ್ಯಾಯಮೂರ್ತಿ ಗೋಪಾಲ ಗೌಡರಿದ್ದಾರೆ. ಅವರ ಬಳಿ ಸಲಹೆ ಕೇಳೋಣ, ಅವರು ಬಂಗಾಳದಲ್ಲಿ 1 ಸಾವಿರ ಎಕರೆ ಭೂಮಿಯನ್ನು ರೈತರಿಗೆ ನೀಡಬೇಕೆಂದು ಐತಿಹಾಸಿಕ ತೀರ್ಪು ನೀಡಿದ್ದವರು, ಸಂವಿಧಾನ ಗೊತ್ತಿರೋರು. ನಿಮಗೇನಾದರೇ ತಿಳಿಯದಿದ್ರೆ ಕೇಳಿ, ನಾವು ಹೇಳ್ತೀವಿ. ನೋಡಿ ನೀವು ಜನರಿಂದ ಆಯ್ದ ಪ್ರತಿನಿಧಿಯಾಗಿದ್ದೀರಿ. ಸ್ವಲ್ಪ ಜವಾಬ್ದಾರಿಯಿಂದ ಇರೀ,ಓಕೆ ಪಾಟೀಲ್ರೇ ಸಿಗ್ತೀನಿ 17ನೇ ತಾರೀಖು ಎಂದು ವಿಡಿಯೋ ಮೂಲಕ ನಟ ಪ್ರಕಾಶ್ ರಾಜ್ ಸಚಿವ ಎಂ.ಬಿ. ಪಾಟೀಲ್ ಅವರಿಗೆ ಹಾಸ್ಯ ಭರಿತವಾಗಿಯೇ ಮಾತಿನ ಬಿಸಿ ಮುಟ್ಟಿದ್ದಾರೆ.

- Advertisement -

Latest Posts

Don't Miss