ರಾಮನಾಮ ಜಪಕ್ಕಿಂತ ಉನ್ನತವಾದ ಜಪ ಇನ್ನೊಂದಿಲ್ಲವೆಂದು ಸಾಕ್ಷಾತ್ ಶಿವನೇ ಪಾರ್ವತಿಗೆ ಹೇಳಿದ್ದನಂತೆ. ಜೀವಭಯ, ಮಾಟ ಮಂತ್ರದ ಭಯ, ಶತ್ರುಬಾಧೆ ಏನೇ ಇದ್ದರೂ ಪ್ರತಿದಿನ 108 ಬಾರಿ ರಾಮನಾಮ ಜಪ ಮಾಡಿದರೆ, ಎಲ್ಲ ಭಯ ಹೋಗುತ್ತದೆ. ಧೈರ್ಯ ಮೈಗೂಡುತ್ತದೆ ಎಂಬ ನಂಬಿಕೆ ಇದೆ. ಇನ್ನು ರಾಮನಾಮ ಜಪದ ಜೊತೆ ಕೆಲವರು ರಾಮಕೋಟಿಯನ್ನ ಬರೆಯುತ್ತಾರೆ. ಹಾಗಾದ್ರೆ ರಾಮಕೋಟಿಯನ್ನೇಕೆ ಬರಿಯಬೇಕು..? ಬರೆದು ದೇವಸ್ಥಾನಕ್ಕೆ ಏಕೆ ಕೊಡಬೇಕು..? ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಒಂದು ಪುಸ್ತಕದಲ್ಲಿ ಶ್ರೀರಾಮ ಜಯರಾಮ ಜಯ ಜಯರಾಮ ಎಂಬ ಜಪವನ್ನ 1ಕೋಟಿ ಬಾರಿ ಬರೆಯಲಾಗುತ್ತದೆ. ಇದನ್ನೇ ರಾಮಕೋಟಿ ಎನ್ನಲಾಗುತ್ತದೆ. ಹೀಗೆ ರಾಮಕೋಟಿಯನ್ನು ಬರೆದು, ಮನೆಯಲ್ಲಿ ಚಿಕ್ಕ ಪೂಜೆ ಸಲ್ಲಿಸಿ, ಅದನ್ನ ದೇವಸ್ಥಾನಕ್ಕೆ ಕೊಡಲಾಗುತ್ತದೆ. ಆ ದೇವಸ್ಥಾನದಲ್ಲಿ ನಡೆಯುವ ಹೋಮದಲ್ಲಿ, ಈ ಪುಸ್ತಕವನ್ನ ಹಾಕಲಾಗುತ್ತದೆ.
ಹೀಗೆ ರಾಮಕೋಟಿ ಬರೆಯುವುದರಿಂದ ರಾಮನ ಕೃಪೆ ನಮ್ಮ ಮೇಲಿರುತ್ತದೆ ಎಂಬ ನಂಬಿಕೆ ಇದೆ. ಹಾಗಾದ್ರೆ ರಾಮಕೋಟಿ ಬರೆಯುವಾಗ ಯಾವ ನಿಯಮ ಅನುಸರಿಸಬೇಕು ಅಂತಾ ನೋಡುವುದಾದರೆ, ಉತ್ತಮ ಮುಹೂರ್ತವನ್ನ ನೋಡಿ, ಪುಸ್ತಕವನ್ನ ಖರೀದಿಸಿ, ಹಸಿರು ಶಾಯಿಯ ಪೆನ್ನು ಸಹ ಖರೀದಿಸಿ. ದೇವರ ಮುಂದಿಟ್ಟು ನಮಸ್ಕರಿಸಿ, ರಾಮನಾಮ ಬರೆಯಲು ಶುರು ಮಾಡಬೇಕು.
ರಾಮಕೋಟಿ ಬರೆಯುವಾಗ ಹರಟೆ ಹೊಡಿಯುವುದು, ಮೊಬೈಲ್‌ನಲ್ಲಿ ಮಾತನಾಡುತ್ತ, ಟಿವಿ ನೋಡುತ್ತ ರಾಮನಾಮ ಬರೆದರೆ ಪ್ರಯೋಜನವಿಲ್ಲ. ನೆಲದ ಮೇಲೆ ಕುಳಿತು. ಯಾರೊಂದಿಗೂ ಮಾತನಾಡದೇ, ರಾಮಕೋಟಿ ಬರೆಯಬೇಕು. ಇನ್ನು ಸೂತಕದ ಸಮಯದಲ್ಲಿ, ಮಾಂಸಾಹಾರ ಸೇವಿಸಿದ ಸಮಯದಲ್ಲಿ, ಹೆಣ್ಣು ಮಕ್ಕಳು ಮುಟ್ಟಾದ ಸಮಯದಲ್ಲಿ ರಾಮಕೋಟಿ ಬರೆಯುವುದು, ರಾಮಕೋಟಿ ಬರೆದ ಪುಸ್ತಕವನ್ನು ಮುಟ್ಟುವುದು ನಿಷಿದ್ಧ. ಹಾಗಾಗಿ ರಾಮಕೋಟಿ ಬರೆದ ಪುಸ್ತಕವನ್ನ ದೇವರಕೋಣೆಯಲ್ಲೇ ಇರಿಸುವುದು ಉತ್ತಮ.
ಕೋಟಿ ಬಾರಿ ರಾಮನಾಮ ಬರೆದ ಬಳಿಕ ದೇವರ ಮುಂದಿಟ್ಟು, ಚಿಕ್ಕದಾಗಿ ಪೂಜೆ ಮಾಡಿ, ಬೆಲ್ಲವನ್ನ ನೈವೇದ್ಯ ಮಾಡಿ, ಯಾವ ದೇವಸ್ಥಾನದಲ್ಲಿ ರಾಮಕೋಟಿ ಪುಸ್ತಕವನ್ನು ಹೋಮಕ್ಕೆ ಹಾಕಲಾಗುತ್ತದೆಯೋ ಆ ದೇವಸ್ಥಾನಕ್ಕೆ ಪುಸ್ತಕ ನೀಡಿ. ವಿಷ್ಣುವಿಗೆ, ವೆಂಕಟೇಶ್ವರನಿಗೆ ಸಂಬಂಧಿಸಿದ ದೇವಸ್ಥಾನದಲ್ಲಿ ರಾಮಕೋಟಿ ಪುಸ್ತಕ ತೆಗೆದುಕೊಳ್ಳಲಾಗುತ್ತದೆ. ಅಂಥ ದೇವಸ್ಥಾನಗಳಲ್ಲಿ ನೀವು ಬರೆದ ರಾಮಕೋಟಿ ಪುಸ್ತಕ ಕೊಡಿ.