ಸೆಪ್ಟೆಂಬರ್ ಕ್ರಾಂತಿ, ಶಾಸಕರ ಸಿಟ್ಟು ಕಾಂಗ್ರೆಸ್‌ನಲ್ಲಿ ಸಂಚಲನವನ್ನೇ ಸೃಷ್ಟಿಸಿದೆ. ಬಿ.ಆರ್ ಪಾಟೀಲ್ ಅವರ ನೇರ ನುಡಿ ಒಂದು ಕಡೆಯಾದ್ರೆ, ಸಚಿವ ಕೆ.ಎನ್ ರಾಜಣ್ಣ ಅವರ ಬದಲಾವಣೆಯ ಸುಳಿವು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಆಂತರಿಕ ಅಸಮಾಧಾನದ ಒಳ ಬೇಗುದಿ ಹೆಚ್ಚಾಗುತ್ತಿದ್ದಂತೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರೇ ಬೆಂಗಳೂರಿಗೆ ಬಂದಿದ್ದಾರೆ.
ಬದಲಾವಣೆಯ ಸುಳಿವಿನ ಮಧ್ಯೆ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನಗಳು ನಡೆಯುತ್ತಿದೆ. ಕಾಂಗ್ರೆಸ್ ನಾಯಕರ ಈ ಸರ್ಕಸ್ ಮಧ್ಯೆ ಮೈಸೂರಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಸಿಎಂ ಸಿದ್ದರಾಮಯ್ಯನವರು ಇದ್ದಕ್ಕಿದ್ದಂತೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಕೈ ಹಿಡಿದು ಮೇಲೆಕ್ಕೆ ಎತ್ತುವ ಮೂಲಕ ಹೊಸ ಸಂದೇಶ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಒಗ್ಗಟ್ಟು, ಬಿಕ್ಕಟ್ಟು ಹೊಸದೇನಲ್ಲ. ಆಗಸ್ಟ್ 3, 2022ರಂದು ದಾವಣಗೆರೆಯಲ್ಲಿ ಇದೇ ರೀತಿಯ ದೃಶ್ಯ ಕಂಡು ಬಂದಿತ್ತು. ಸಿದ್ದರಾಮಯ್ಯನವರ 75ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿಗಳು ಸಿದ್ದರಾಮೋತ್ಸವ ಮಾಡಿದ್ದರು. ಅಂದು ಲಕ್ಷಾಂತರ ಸಿದ್ದು ಅಭಿಮಾನಿಗಳ ಮುಂದೆ ಡಿ.ಕೆ ಶಿವಕುಮಾರ್ ಕೈ ಹಿಡಿದು ಒಗ್ಗಟ್ಟು ಪ್ರದರ್ಶಿಸಿದರು.
ಸರಿಯಾಗಿ 3 ವರ್ಷಗಳ ಬಳಿಕ ಮತ್ತೆ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಅವರು ಮತ್ತೊಮ್ಮೆ ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಮೈಸೂರಲ್ಲಿ ಸುದ್ದಿಗೋಷ್ಠಿಯ ಮಧ್ಯೆ ಸಿದ್ದರಾಮಯ್ಯನವರೇ ಡಿ.ಕೆ ಶಿವಕುಮಾರ್ ಕೈ ಹಿಡಿದು ಮೇಲಕ್ಕೆ ಎತ್ತೋ ಮೂಲಕ ರಾಜಕೀಯ ಎದುರಾಳಿಗಳ ದಿಕ್ಕು ತಪ್ಪಿಸೋ ಯತ್ನ ಮಾಡಿದ್ದಾರೆ.
ಮೈಸೂರಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯನವರು, ನೋಡಪ್ಪ ಈ ಸರ್ಕಾರ 5 ವರ್ಷ ಬಂಡೆ ರೀತಿ ಭದ್ರವಾಗಿರುತ್ತೆ. ನಾವಿಬ್ಬರು ಚೆನ್ನಾಗಿಯೇ ಇದೀವಲ್ವಾ ಎಂದರು. ಅಷ್ಟೇ ಅಲ್ಲ ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ನೋಡಪ್ಪ ಯಾರು ಹೇಳಿದ್ರು ನಾವು ಕೇಳೋದಿಲ್ಲ ಎಂದು ಹೇಳಿದ್ದಾರೆ. ಜೋಡೆತ್ತುಗಳು ಮತ್ತೆ ಒಂದಾಗಿರಬಹುದು. ಆದರೆ ಸೆಪ್ಟೆಂಬರ್ ಕ್ರಾಂತಿಯ ಮಧ್ಯೆ ಈ ದಿಢೀರ್ ಬೆಳವಣಿಗೆ ಸಂಚಲನ ಸೃಷ್ಟಿಸಿದೆ.