ಸರ್ಕಾರ v/s ಸಾರಿಗೆ ನೌಕರರ ಜಟಾಪಟಿಗೆ ಬಸ್ ಓಡಾಟ ಬಂದ್ ಆಗತ್ತಾ?

ರಾಜ್ಯ ಸರ್ಕಾರ ಮತ್ತು ಸಾರಿಗೆ ನೌಕರರ ನಡುವಿನ ಜಟಾಪಟಿ ಮತ್ತೊಮ್ಮೆ ತೀವ್ರಗೊಂಡಿದೆ. ಸಾಲು ಸಾಲು ಸಂಧಾನ ಸಭೆಗಳು ಯಾವುದೇ ಫಲ ನೀಡದ ಹಿನ್ನೆಲೆಯಲ್ಲಿ, ಸಾರಿಗೆ ನೌಕರರು ಮತ್ತೆ ಹೋರಾಟದ ಹಾದಿ ಹಿಡಿದಿದ್ದಾರೆ. ಸರ್ಕಾರದ ಮೇಲೆ ಒತ್ತಡ ಹೆಚ್ಚಿಸುವ ಉದ್ದೇಶದಿಂದ ಜನವರಿ 29ರಂದು ‘ಬೆಂಗಳೂರು ಚಲೋ’ ನಡೆಸಲು ದಿನಾಂಕ ನಿಗದಿಪಡಿಸಿದ್ದಾರೆ.

ಸಾರಿಗೆ ನೌಕರರ ಒಕ್ಕೂಟದ ನೇತೃತ್ವದಲ್ಲಿ ಜನವರಿ 29ರಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಬೆಂಗಳೂರಿನಲ್ಲಿ ‘ಬೆಂಗಳೂರು ಚಲೋ’ ಚಳವಳಿ ನಡೆಯಲಿದೆ. ಫ್ರೀಡಂ ಪಾರ್ಕ್‌ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ನೌಕರರು ನಿರ್ಧರಿಸಿದ್ದಾರೆ.

ಹಾಗಾದ್ರೆ ಬಸ್‌ ಓಡಾಟ ಇರುತ್ತಾ? ಅಂತ ಕೇಳಿದ್ರೆ H.V. ಅನಂತಸುಬ್ಬರಾವ್ ನೇತೃತ್ವದಲ್ಲಿ ಈ ಹೋರಾಟಕ್ಕೆ ಕರೆ ನೀಡಲಾಗಿದ್ದು, KSRTC ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ನೌಕರರು ಭಾಗವಹಿಸುವ ಸಾಧ್ಯತೆ ಇದೆ. ಆದರೆ ಬಸ್‌ ಸೇವೆ ಬಂದ್ ಮಾಡುವ ಬಗ್ಗೆ ಯಾವುದೇ ಅಧಿಕೃತ ನಿರ್ಧಾರ ಕೈಗೊಳ್ಳಲಾಗಿಲ್ಲ. ಹೀಗಾಗಿ ಎಂದಿನಂತೆ ಸಾರಿಗೆ ಸೇವೆ ಮುಂದುವರಿಯಲಿದೆ ಎನ್ನಲಾಗಿದೆ. ಆದರೂ, ‘ಬೆಂಗಳೂರು ಚಲೋ’ ಹಿನ್ನೆಲೆ ಜನವರಿ 29ರಂದು ನಗರದ ಕೆಲವು ಭಾಗಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆ ಇದೆ.

ಕಾರ್ಮಿಕ ಸಂಘಟನೆಗಳ ಮಾಹಿತಿ ಪ್ರಕಾರ, ಸಾರಿಗೆ ನೌಕರರಿಗೆ ಕಳೆದ 38 ತಿಂಗಳಿಂದ ವೇತನ ಬಾಕಿಯಾಗಿದೆ. ಅಲ್ಲದೆ, 2024ರ ಜನವರಿ 1ರಿಂದ ಜಾರಿಯಾಗಬೇಕಿದ್ದ ವೇತನ ಪರಿಷ್ಕರಣೆ ಇನ್ನೂ ಅನುಷ್ಠಾನಗೊಂಡಿಲ್ಲ. ಇದರಿಂದ ರಾಜ್ಯಾದ್ಯಂತ ಸಾರ್ವಜನಿಕ ಸಾರಿಗೆ ಸೇವೆ ಒದಗಿಸುವ ನೌಕರರು ತೀವ್ರ ಆರ್ಥಿಕ ಒತ್ತಡಕ್ಕೆ ಒಳಗಾಗಿದ್ದಾರೆ ಎಂದು ಯೂನಿಯನ್ ನಾಯಕರು ಆರೋಪಿಸಿದ್ದಾರೆ.

ಜನವರಿ 29ರಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಫ್ರೀಡಂ ಪಾರ್ಕ್‌ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಸಾರಿಗೆ ನೌಕರರ ಒಕ್ಕೂಟಗಳು ತಿಳಿಸಿವೆ. ಸಮಿತಿ ಸದಸ್ಯರಾದ H.V ಅನಂತಸುಬ್ಬರಾವ್, B ಜಯದೇವ ಅರಸು, H.D. ರೇವಪ್ಪ, ಜಗದೀಶ್ H.R ಮತ್ತು ರಾಜೇಂದ್ರ ಗೌಡ G.Kಅವರು ಹೆಚ್ಚಿನ ಸಂಖ್ಯೆಯಲ್ಲಿ ನೌಕರರು ಭಾಗವಹಿಸುವಂತೆ ಕರೆ ನೀಡಿದ್ದಾರೆ.

ವರದಿ : ಲಾವಣ್ಯ ಅನಿಗೋಳ

About The Author