ಬೆಂಗಳೂರಿಗರ ಜೀವನಾಡಿ ನಮ್ಮ ಮೆಟ್ರೋ ದರ ಏರಿಕೆಯ ವಿವಾದ ಇನ್ನೂ ತಣ್ಣಗಾಗಿಲ್ಲ. ಸಂಸದ ತೇಜಸ್ವಿ ಸೂರ್ಯ ಮತ್ತು ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ಮಧ್ಯೆ ಘರ್ಷಣೆ ಮುಂದುವರೆದಿದೆ. bmrcl ವಿರುದ್ಧ ತೇಜಸ್ವಿ ಸೂರ್ಯ ಟೀಕೆಗಳನ್ನು ಮುಂದುವರಿಸಿದ್ದಾರೆ. ದರ ಏರಿಕೆಯ ಹಿನ್ನೆಲೆ ಫೇರ್ ಫಿಕ್ಸೇಷನ್ ಕಮಿಟಿ ವರದಿಯನ್ನು ಬಿಡುಗಡೆ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ.
ಮೆಟ್ರೋ ದರ ಏರಿಕೆ ಸಂಬಂಧ ಸ್ಪಷ್ಟನೆಗಾಗಿ ಪಟ್ಟು ಬಿಡದ ಸಂಸದ ತೇಜಸ್ವಿ ಸೂರ್ಯ, ಇಂದು ಶಾಂತಿನಗರದ ಬಿಎಂಆರ್‌ಸಿಎಲ್ ಕಚೇರಿಗೆ ಸಾರ್ವಜನಿಕರ ಜೊತೆಗೂಡಿ ಭೇಟಿ ನೀಡಲಿದ್ದಾರೆ. ಬಿಎಂಆರ್‌ಸಿಎಲ್ ಮ್ಯಾನೇಜಿಂಗ್ ಡೈರೆಕ್ಟರ್ ಅವರನ್ನು ಭೇಟಿಯಾಗಿ, ದರ ಏರಿಕೆಯ ಸ್ಪಷ್ಟೀಕರಣ ಕೇಳಲಿದ್ದಾರೆ. ದರ ಏರಿಕೆ ಜಾರಿಗೆ ನಿರ್ಧರಿಸಿದ್ದ ದಿನದಿಂದಲೂ, ಸ್ಪಷ್ಟನೆ ಕೇಳಿ ಪಟ್ಟು ಹಿಡಿದಿದ್ರು. ಇದು ರಾಜಕೀಯ ಮತ್ತು ಸಾರ್ವಜನಿಕ ಸಾರಿಗೆಯ ವಲಯಗಳಲ್ಲಿ ಚರ್ಚೆಗೆ ಗುರಿಯಾಗಿದೆ.
2025ರ ಫೆಬ್ರವರಿಯಲ್ಲಿ ನಮ್ಮ ಮೆಟ್ರೋ ದರ ಏರಿಕೆ ಮಾಡಲಾಗಿದೆ. 2017ರಿಂದ ದರ ಏರಿಕೆಯಾಗದೆ ಇದ್ದರೂ, ಈಗ 50% ರಿಂದ 105% ಏರಿಕೆಯಾಗಿದೆ. ಸಣ್ಣ ಅಂತರದ ಟಿಕೆಟ್ 10 ರೂ.ನಿಂದ ಆರಂಭವಾಗಿ, ದೊಡ್ಡ ಅಂತರಕ್ಕೆ 90 ರೂ.ವರೆಗೆ ಹೆಚ್ಚಾಗಿದೆ. ಬಿಎಂಆರ್‌ಸಿಎಲ್ ಹೇಳುವಂತೆ, ನಿರ್ವಹಣಾ ವೆಚ್ಚ, ವಿದ್ಯುತ್ ಬಿಲ್ ಮತ್ತು ಆಡಳಿತ ಖರ್ಚುಗಳ ಹೆಚ್ಚಳಕ್ಕೆ ಇದು ಅಗತ್ಯ.
ಆದರೆ ತೇಜಸ್ವಿ ಸೂರ್ಯ ಇದನ್ನು ಅಸಮಾನ ಮತ್ತು ಅನ್ಯಾಯ ಎಂದು ಕರೆದಿದ್ದಾರೆ. ದೆಹಲಿ ಮೆಟ್ರೋದಲ್ಲಿ 12 ಕಿಲೋ ಮೀಟರ್‌ಗೆ 30 ರೂಪಾಯಿ ಇದ್ರೆ, ಇಲ್ಲಿ 60 ರೂಪಾಯಿ ಇದೆ. ಇದು ದ್ವಿಗುಣ. ದೇಶದ ಇತರ ಮೆಟ್ರೋಗಳಲ್ಲಿ 60 ರೂ.ಕ್ಕಿಂತ ಹೆಚ್ಚಿಲ್ಲ ಎಂದು ಲೋಕಸಭೆಯಲ್ಲೂ ದನಿ ಎತ್ತಿದ್ರು.

