ಜಾನಪದ ಗಾಯಕಿ ಮೈಥಿಲಿ ಠಾಕೂರ್, ಬಿಹಾರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸ್ತಾರಾ? ಹೀಗೊಂದು ಪ್ರಶ್ನೆ ಸದ್ಯ ಭಾರೀ ಚರ್ಚೆಯಾಗ್ತಿದೆ. ಯಾಕಂದ್ರೆ, ಬಿಜೆಪಿ ಚುನಾವಣಾ ಉಸ್ತುವಾರಿ ವಿನೋದ್ ತಾವ್ಡೆ ಮತ್ತು ಕೇಂದ್ರ ಸಚಿವ ನಿತ್ಯಾನಂದ ರೈ ಅವರನ್ನು, ಮೈಥಿಲಿ ಠಾಕೂರ್ ಭೇಟಿಯಾಗಿದ್ದು, ಊಹಾಪೋಹ ಹುಟ್ಟುಹಾಕಿದೆ.
ಮೈಥಿಲಿ ಠಾಕೂರ್ ಭೇಟಿ ಫೋಟೋಗಳನ್ನು, ವಿನೋದ್ ತಾವ್ಡೆ ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ಬಳಿಕ ವದಂತಿಗಳು ಹುಟ್ಟಿಕೊಂಡಿವೆ. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ್ ರೈ ಮತ್ತು ನಾನು ಬಿಹಾರದ ಜನರಿಗೆ ಮತ್ತು ಬಿಹಾರದ ಅಭಿವೃದ್ಧಿಗಾಗಿ, ಬಿಹಾರದ ಸಾಮಾನ್ಯ ಜನರ ನಿರೀಕ್ಷೆಗಳನ್ನು ಪೂರೈಸಬೇಕೆಂದು ಒತ್ತಾಯಿಸಿದೆವು. ಬಿಹಾರದ ಮಗಳು ಮೈಥಿಲಿ ಠಾಕೂರ್ ಜಿ ಅವರಿಗೆ ಶುಭಾಶಯಗಳು ಎಂದು ಪೋಸ್ಟ್ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೈಥಿಲಿ ಠಾಕೂರ್, ನಾನು ಕೂಡ ಈ ವಿಷಯಗಳನ್ನು ಟಿವಿಯಲ್ಲಿ ನೋಡುತ್ತಿದ್ದೇನೆ. ನಾನು ಇತ್ತೀಚೆಗೆ ಬಿಹಾರಕ್ಕೆ ಭೇಟಿ ನೀಡಿದ್ದೇನೆ. ನಿತ್ಯಾನಂದ ರೈ ಮತ್ತು ವಿನೋದ್ ತಾವ್ಡೆ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು. ಬಿಹಾರದ ಭವಿಷ್ಯದ ಬಗ್ಗೆ ನಾವು ಚರ್ಚೆ ನಡೆಸಿದ್ದೇವೆ. ನನ್ನ ಹಳ್ಳಿಯ ಕ್ಷೇತ್ರದಿಂದ ನಿಲ್ಲಲು ನಾನು ಬಯಸುತ್ತೇನೆ. ಏಕೆಂದರೆ ಅದರೊಂದಿಗೆ ನನಗೆ ಒಂದು ರೀತಿಯ ಬಾಂಧವ್ಯವಿದೆ ಎಂದು ಹೇಳಿದ್ದಾರೆ.
ಇನ್ನು, ಮೈಥಿಲಿ ಠಾಕೂರ್ ಸೋಶಿಯಲ್ ಮೀಡಿಯಾದಲ್ಲಿ ವಿನೋದ್ ತಾವ್ಡೆ ಪೋಸ್ಟ್ ಅನ್ನು ಮರುಹಂಚಿಕೊಂಡಿದ್ದಾರೆ. ಬಿಹಾರಕ್ಕಾಗಿ ದೊಡ್ಡ ಕನಸು ಕಾಣುವ ಜನರು, ಅವರೊಂದಿಗಿನ ಪ್ರತಿ ಸಂಭಾಷಣೆಯು ನನಗೆ ದೃಷ್ಟಿ ಮತ್ತು ಸೇವೆಯ ಶಕ್ತಿಯನ್ನು ನೆನಪಿಸುತ್ತದೆ. ಹೃದಯದಿಂದ ಗೌರವ ಮತ್ತು ಕೃತಜ್ಞತೆಗಳು ಎಂದು ಬರೆದಿದ್ದಾರೆ.
ಅಲಿನಗರ ಕ್ಷೇತ್ರದಿಂದ ಮೈಥಿಲಿ ಠಾಕೂರ್ ಕಣಕ್ಕಿಳಿಸಬಹುದೆಂಬ ಮಾತುಗಳು ಕೇಳಿಬರ್ತಿದೆ. ಜೊತೆಗೆ ಚುನಾವಣಾ ಆಯೋಗವು ಮೈಥಿಲಿ ಠಾಕೂರ್ ಅವರನ್ನು ಬಿಹಾರದ ‘ಸ್ಟೇಟ್ ಐಕಾನ್’ ಆಗಿ ನೇಮಿಸಿದೆ.