Thursday, November 21, 2024

Latest Posts

ಬಡತನದಲ್ಲಿ ಬೆಳೆದ, ಬಡವರ ಕಷ್ಟ ತಿಳಿದಿರುವ ಪಠಾಣ ಅವರನ್ನು ಗೆಲ್ಲಿಸಿ: ಸಿಎಂ ಸಿದ್ದರಾಮಯ್ಯ ಮನವಿ

- Advertisement -

Political News: ಶಿಗ್ಗಾವಿಯಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಸಿಎಂ ಸಿದ್ದರಾಮಯ್ಯ ನಿನ್ನೆಯಿಂದ ಕಾಂಗ್ರೆಸ್ ಅಭ್ಯರ್ಥಿ ಪರ ಕ್ಯಾಂಪೇನ್ ನಡೆಸುತ್ತಿದ್ದಾರೆ.

ಈ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಅವರು ಪ್ಲಾನ್ ಮಾಡಿದ್ದರು. ಅದಕ್ಕೇ ಜೊತೆಯಲ್ಲಿದ್ದೇ ಯಡಿಯೂರಪ್ಪ ಅವರಿಗೆ ಟಾಂಗ್ ಕೊಟ್ಟರು.‌ ಪ್ರಧಾನಿ ನರೇಂದ್ರ ಮೋದಿ ಮಹಾನ್ ಸುಳ್ಳುಗಾರ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದರು. ಮೋದಿ ಮತ್ತೆ ಪ್ರಧಾನಿ ಆದರೆ ದೇಶ ಬಿಟ್ಟು ಹೋಗ್ತೀನಿ ಎಂದು ದೇವೇಗೌಡರು ಹೇಳಿದ್ದರು. ಈಗ ಇಬ್ಬರೂ ಭಾಯಿ ಭಾಯಿ ಆಗಿದ್ದಾರೆ ಎಂದರು.

ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಅಭ್ಯರ್ಥಿಯನ್ನು ಆರಿಸುವ ಮತ್ತೊಂದು ಅವಕಾಶ ಶಿಗ್ಗಾಂವಿ ಕ್ಷೇತ್ರದ ಜನತೆಗೆ ಸಿಕ್ಕಿದೆ. ಇಲ್ಲಿನ‌ ಬಿಜೆಪಿ ಅಭ್ಯರ್ಥಿ ಅತ್ಯಂತ ಶ್ರೀಮಂತ ಕುಟುಂಬದಿಂದ ಬಂದವರು. ಅವರಿಗೆ ಹಳ್ಳಿ ಬದುಕು ಗೊತ್ತಿಲ್ಲ. ಬಡವರ ಬದುಕು ಗೊತ್ತಿಲ್ಲ. ಆದರೆ ಕಾಂಗ್ರೆಸ್ ಅಭ್ಯರ್ಥಿ ಅತ್ಯಂತ ಸಾಮಾನ್ಯ ಕುಟುಂಬದಿಂದ ಬಂದು ಬಡವರ ಕಷ್ಟ, ಸುಖ ಗೊತ್ತಿರುವವರು‌. ಇವರನ್ನು ಗೆಲ್ಲಿಸಿ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿ ಆಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಕುಟುಂಬ ರಾಜಕಾರಣದ ಬಗ್ಗೆ ಭರ್ಜರಿ ಭಾಷಣ ಮಾಡ್ತಾರೆ. ಆದರೆ ಇಲ್ಲಿ ಮಾಜಿ ಮುಖ್ಯಮಂತ್ರಿಯ ಮೊಮ್ಮಗ, ಮಾಜಿ ಮುಖ್ಯಮಂತ್ರಿಯ ಮಗನಿಗೆ ಟಿಕೆಟ್ ನೀಡಿದ್ದಾರೆ. ಇದು ಕುಟುಂಬ ರಾಜಕಾರಣ ಅಲ್ಲವೇ ಮೋದಿಯವರೇ? ನಾನು ನಾಡಿನ ಜನತೆಯ ಪ್ರೀತಿ, ಒತ್ತಾಯಗಳಿಗೆ ಬಗ್ಗುತ್ತೇನೆಯೇ ಹೊರತು, ಬಿಜೆಪಿ ಮತ್ತು ದೇವೇಗೌಡರ ಷಡ್ಯಂತ್ರಗಳಿಗೆ ಬಗ್ಗದೂ ಇಲ್ಲ, ಜಗ್ಗದೂ ಇಲ್ಲ. ಎಲ್ಲಿಯವರೆಗೆ ರಾಜ್ಯದ ಜನರ ಆಶೀರ್ವಾದ ಇರುತ್ತದೋ ಅಲ್ಲಿಯವರೆಗೂ ನಾನು ಬಿಜೆಪಿ ಕುತಂತ್ರಗಳಿಗೆ ಬಗ್ಗುವುದಿಲ್ಲ ಎಂದು ಬಿಜೆಪಿ ವಿರುದ್ಧ ಸಿಎಂ ವಾಗ್ದಾಳಿ ನಡೆಸಿದರು.

40 ವರ್ಷಗಳಿಂದ ನಾನು ಮಂತ್ರಿ, ಮುಖ್ಯಮಂತ್ರಿ ಹೀಗೆ ವಿವಿಧ ಹುದ್ದೆಯಲ್ಲಿ ಸೇವೆ ಮಾಡಿದ್ದೇನೆ. ಸಣ್ಣ ಕಪ್ಪು ಚುಕ್ಕೆ ಕೂಡ ನನ್ನ ಮೇಲಿಲ್ಲ. ಆದರೂ ನನ್ನ ಪತ್ನಿ ಮೇಲೆ ಸುಳ್ಳು ಆರೋಪ ಮಾಡಿ ನನ್ನನ್ನು ತೇಜೋವಧೆ ಮಾಡುತ್ತಿದ್ದಾರೆ. ಕೇವಲ 14 ಸೈಟುಗಳಿಗಾಗಿ ನಾನು ತಪ್ಪು ಮಾಡ್ತೀನಾ? ದುಡ್ಡು ಮಾಡಬೇಕು ಎಂದಿದ್ದರೆ ಬೇಕಾದಷ್ಟು ಮಾಡಬಹುದಿತ್ತು. ಆದರೆ ನನ್ನ ತಪ್ಪುಗಳು ಏನೇನೂ ಇಲ್ಲದ ಕಾರಣದಿಂದ ಸುಳ್ಳು ಆರೋಪ ಹೊರಿಸಿ ಷಡ್ಯಂತ್ರ ಹೆಣೆದು ನನ್ನನ್ನು ಕೆಳಗಿಳಿಸಲು ಯತ್ನಿಸುತ್ತಿದ್ದಾರೆ. ಇದಕ್ಕೆ ನಾಡಿನ ಜನತೆ ಅವಕಾಶ ಕೊಡುವುದಿಲ್ಲ ಎನ್ನುವ ಗ್ಯಾರಂಟಿ ನನಗಿದೆ ಎಂದು ಸಿಎಂ ಹೇಳಿದರು.

ಚೆಕ್‌ನಲ್ಲಿ ಲಂಚ ಪಡೆದ ಬಿ.ವೈ.ವಿಜಯೇಂದ್ರ ಈಗ ನನ್ನ ಬಗ್ಗೆ ಮಾತಾಡುತ್ತಿದ್ದಾರೆ. ವಿಜಯೇಂದ್ರ ಹೇಗೆ ದುಡ್ಡು ಹೊಡೆಯುತ್ತಾ ಕೂತಿದ್ದರು ಎನ್ನುವುದನ್ನು ಅವರದೇ ಪಕ್ಷದ ಯತ್ನಾಳ್, ರಮೇಶ್ ಜಾರಕಿಹೊಳಿ ಅವರೇ ಹೇಳಿದ್ದಾರೆ. ಚೆಕ್ ನಲ್ಲಿ ಲಂಚ ಪಡೆದ ವಿಜಯೇಂದ್ರ ಒಂದು ಕಡೆ, ಲೂಟಿ ರವಿ ಮತ್ತೊಂದು ಕಡೆ ನಮ್ಮ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ. ಇವರ ಯೋಗ್ಯತೆ ನಾಡಿನ ಜನತೆಗೆ ಗೊತ್ತಿದೆ. ಬಿಜೆಪಿಯವರು ಅಧಿಕಾರ ಇದ್ದಾಗ ಕೇವಲ ಭ್ರಷ್ಟಾಚಾರ ಮಾಡಿ, ಹಣ ಲೂಟಿ ಮಾಡಿ ಮನೆಗೆ ಹೋದರು. ಈಗ ಜಾತಿ-ಧರ್ಮದ ಹೆಸರಿನಲ್ಲಿ ಬಡವರನ್ನು ಪರಸ್ಪರ ಎತ್ತಿ ಕಟ್ಟಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ.

ನಾವು ಹಿಂದೆಯೂ ಅಷ್ಟೆ, ಈಗಲೂ ಅಷ್ಟೆ. ನುಡಿದಂತೆ ನಡೆದಿದ್ದೇವೆ. ಜನರಿಗೆ ಕೊಟ್ಟ ಭರವಸೆ ಈಡೇರಿಸಿದ್ದೇವೆ. ನುಡಿದಂತೆ ನಡೆದ ನೈತಿಕತೆ ಆಧಾರದಲ್ಲಿ‌ ಮತ್ತೆ ಜನರ ಬಳಿಗೆ ಬಂದು ಮತ ಕೇಳುತ್ತಿದ್ದೇವೆ. ಬೊಮ್ಮಾಯಿ ಅವರು ಅವರ ಮಗನಿಗೆ ಓಟು ಕೇಳಲು ಯಾವ ನೈತಿಕತೆ ಇದೆ? ಮಾತೆತ್ತಿದರೆ ದಮ್ಮು, ತಾಖತ್ತು ಎನ್ನುವ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ರಾಜ್ಯಕ್ಕಾಗಲಿ, ಕ್ಷೇತ್ರಕ್ಕಾಗಲಿ ಏನು ಕೊಟ್ಟಿದ್ದಾರೆ ಹೇಳಿ? ಎಂದು ಸಿಎಂ ಪ್ರಶ್ನಿಸಿದ್ದಾರೆ.

ನಮ್ಮ ಸರ್ಕಾರ ಐದು ಗ್ಯಾರಂಟಿಗಳ ಮೂಲಕ ಇಡೀ ರಾಜ್ಯದ ಮಹಿಳೆಯರಿಗೆ ಆರ್ಥಿಕ‌ ಶಕ್ತಿ ನೀಡಿದೆ. ಎಲ್ಲಾ ಜಾತಿಯ, ಎಲ್ಲಾ ಧರ್ಮದ ಬಡವರ ಖಾತೆಗಳಿಗೆ ನೇರವಾಗಿ 56 ಸಾವಿರ ಕೋಟಿ ರೂಪಾಯಿಯನ್ನು ಹಾಕಿದ್ದೇವೆ. ಪಠಾಣ್ ಅವರನ್ನು ಗೆಲ್ಲಿಸಿ ಕಳುಹಿಸಿ. ಅಜ್ಜಂಪೀರ್ ಖಾದ್ರಿ ಅವರಿಗೂ ಒಳ್ಳೆಯ ಅವಕಾಶ ಕಲ್ಪಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

- Advertisement -

Latest Posts

Don't Miss