₹2 ಲಕ್ಷಕ್ಕೆ ಬಲಿಯಾದ ಗೃಹಿಣಿ! ಸಂಗೀತಾ ಸಾವಿನ ‘ಬಿಗ್ ಟ್ವಿಸ್ಟ್’!

ಗಂಡನ ಕಿರುಕುಳದಿಂದ ಬೇಸತ್ತು ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಶಂಕರಮಠ ಗಲ್ಲಿಯಲ್ಲಿ ನಡೆದಿದೆ. ಸಂಗೀತಾ ಗಾಡಿವಡ್ಡರ (35) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಅವರು ಮನೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸುಮಾರು 15 ವರ್ಷಗಳ ಹಿಂದೆ ವೆಂಕಟೇಶ್ ಗಾಡಿವಡ್ಡರೊಂದಿಗೆ ಸಂಗೀತಾ ವಿವಾಹವಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ದಂಪತಿಗಳ ನಡುವೆ ನಿರಂತರ ಕಲಹ ನಡೆಯುತ್ತಿದ್ದುದಾಗಿ ತಿಳಿದುಬಂದಿದೆ.

ಮಾಹಿತಿಯ ಪ್ರಕಾರ, ಏಪ್ರಿಲ್ 29ರ ರಾತ್ರಿ ನಡೆದ ಘಟನೆ ಬಳಿಕ ಸಂಗೀತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಮೃತಳ ಕುಟುಂಬಸ್ಥರು ಇದನ್ನು ಆತ್ಮಹತ್ಯೆ ಅಲ್ಲ, ಕೊಲೆ ಎಂದು ಆರೋಪಿಸಿದ್ದಾರೆ. ವರದಕ್ಷಿಣೆ ಕಿರುಕುಳದ ಆರೋಪ ಮಾಡಿರುವ ಸಂಗೀತಾ ತಾಯಿ, ಮನೆ ನಿರ್ಮಾಣಕ್ಕಾಗಿ ₹2 ಲಕ್ಷ ಹಣ ತರಲು ಪತಿ ಒತ್ತಾಯಿಸುತ್ತಿದ್ದನು ಎಂದು ದೂರಿದ್ದಾರೆ. ಹಣ ನೀಡದ ಹಿನ್ನೆಲೆಯಲ್ಲಿ ಮಗಳಿಗೆ ಹಲ್ಲೆ ನಡೆಸಿ ನಂತರ ನೇಣು ಹಾಕಿ ಕೊಲೆ ಮಾಡಲಾಗಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಪ್ರಕರಣದ ನಿಖರ ಕಾರಣ ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ.

About The Author