ಪಂಚರಾಜ್ಯ ಚುನಾವಣೆ ಬಳಿಕ ಕೇಂದ್ರ ಸರ್ಕಾರ ಬೆಲೆಯೇರಿಕೆಯ ಛಾಟಿ ಬೀಸಲು ಪ್ರಾರಂಭಿಸಿದೆ: ಗುಂಡೂರಾವ್

Political News: ಕಮರ್ಷಿಯಲ್ ಸಿಲಿಂಡರ್ ಬೆಲೆ 993 ರೂಪಾಯಿ ಹೆಚ್ಚಾಗಿದ್ದು, ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಊಹಿಸಿದಂತೆಯೇ ಪಂಚರಾಜ್ಯ ಚುನಾವಣೆ ಬಳಿಕ ಕೇಂದ್ರ ಸರ್ಕಾರ ಬೆಲೆಯೇರಿಕೆಯ ಛಾಟಿ ಬೀಸಲು ಪ್ರಾರಂಭಿಸಿದೆ. ಕಮರ್ಷಿಯಲ್ ಸಿಲಿಂಡರ್ ಬೆಲೆಯನ್ನು ಏಕಾಏಕಿ ₹993 ಏರಿಸುವ ಮೂಲಕ ‌ಮರ್ಮಘಾತ ನೀಡಿದೆ. ಚುನಾವಣೆ ಮುಗಿದ ಕೂಡಲೇ ಬೆಲೆಯೇರಿಕೆ ನಿರೀಕ್ಷಿತವಾಗಿತ್ತು. ಆದರೆ ಒಂದೇ ಭಾರಿ ₹993 ಹೆಚ್ಚಳ‌ ಮಾಡಿರುವುದು ಅನಿರೀಕ್ಷಿತದ ಜೊತೆಗೆ ಆಘಾತ ತಂದಿದೆ ಎಂದು ಕೇಂದ್ರದ ವಿರುದ್ಧ ಸಚಿವರು ವಾಗ್ದಾಳಿ ನಡೆಸಿದ್ದಾರೆ.

ವಾಣಿಜ್ಯ LPG ಬೆಲೆ ಏರಿಸಿರುವುದು ಕೇವಲ ಟ್ರೈಲರ್ ಮಾತ್ರ. ಇದು ‘ಮುಂದೈತೆ ಮಾರಿಹಬ್ಬ’ ಎಂಬುದರ ಅಪಾಯದ ಮುನ್ಸೂಚನೆ. ಇನ್ನು ಕೆಲವೇ ದಿನಗಳಲ್ಲಿ ಪೆಟ್ರೋಲ್, ಡೀಸೆಲ್‌ ಹಾಗೂ ಡೊಮೆಸ್ಟಿಕ್ ಸಿಲಿಂಡರ್ ಬೆಲೆ ಭಾರಿ ಪ್ರಮಾಣದಲ್ಲಿ ಹೆಚ್ಚಳ ಮಾಡುವುದು ಖಡಾಖಂಡಿತ‌. ಯಾಕಂದರೆ ಸದ್ಯಕ್ಕೆ ಯಾವುದೇ ಚುನಾವಣೆಯಿಲ್ಲ.

ವಾಣಿಜ್ಯ LPG ಬೆಲೆಯೇರಿಕೆಯಿಂದ ಬೆಂಗಳೂರಿನಲ್ಲಿ ಒಂದು ಸಿಲಿಂಡರ್ ಬೆಲೆ ₹3152 ಕ್ಕೆ ತಲುಪಿದೆ. ಇದರಿಂದ ಹೋಟೆಲ್ ಹಾಗೂ ರೆಸ್ಟೋರೆಂಟ್ ಉದ್ಯಮಗಳಿಗೆ‌ ದೊಡ್ಡ ಹೊಡೆತ ಬೀಳಲಿದೆ. ವಿಪರ್ಯಾಸವೆಂದರೆ ಬೆಲೆಯೇರಿಕೆಯ ಹೊಡೆತ ನೇರವಾಗಿ ಬೀಳುವುದು ಹೋಟೆಲ್ ಗ್ರಾಹಕರ ಮೇಲೆ. ಈ ಹಿಂದೆ ಸಿಲಿಂಡರ್ ಬೆಲೆಗಳು ₹50 ಹಾಗೂ ₹100ರ ಆಸುಪಾಸಿನಲ್ಲಿ ಹೆಚ್ಚಳವಾಗುತಿತ್ತು. ಆದರೆ ಈಗ ಒಂದೇ ಬಾರಿ ₹993 ಹೆಚ್ಚಿಸಲಾಗಿದೆ. ಇದನ್ನು ಹಗಲು ದರೋಡೆ ಅನ್ನದೆ ಇನ್ನೇನು ಹೇಳಬೇಕು.? ಎಂದು ಗುಂಡೂರಾವ್ ಪ್ರಶ್ನಿಸಿದ್ದಾರೆ.

ಬಿಜೆಪಿಯವರು ಹೇಳುತ್ತಿದ್ದ ಅಚ್ಛೆದಿನ್ ಅಂದರೆ ಇದೆ ಎಂದು ಭಾವಿಸಬೇಕಾ.? ಬಿಜೆಪಿಯೇತರ ಸರ್ಕಾರ ಸ್ವಲ್ಪವೇ ಸ್ವಲ್ಪ ಬೆಲೆ ಏರಿಸಿದ್ದರೂ ಹಾದಿ ಬೀದಿಯಲ್ಲಿ ಬಂದು ರಂಪ ಮಾಡುವ ಬಿಜೆಪಿಯವರು ಮೋದಿ ಸರ್ಕಾರದ ಬೆಲೆಯೇರಿಕೆಯ ಬಗ್ಗೆ ಬಾಯಿ ಬಿಡುವುದೇ ಇಲ್ಲ. ಇದೇನು ವಿಷಗುರು ಮೋದಿಯವರ ಮೇಲಿನ ಭಯವೋ.? ಅಥವಾ ಜನ ಹೇಗಾದರೂ ಸಾಯಲಿ ಎಂಬ ಧಾಡಸಿತನವೋ ಅರ್ಥವಾಗುತ್ತಿಲ್ಲ ಎಂದು ಸಚಿವರಾದ ದಿನೇಶ್ ಗುಂಡೂರಾವ್ ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.

About The Author