ವಿಶ್ವ ಮಾನ್ಯತೆ ಪಡೆದ ಬೆಳಕಿನ ಹಬ್ಬ ‘ದೀಪಾವಳಿ’

ಭಾರತದ ಬೆಳಕಿನ ಹಬ್ಬ ದೀಪಾವಳಿಗೆ ಜಾಗತಿಕ ಮನ್ನಣೆ ದೊರೆತಿದೆ. ದೀಪಾವಳಿಯನ್ನು ಯುನೆಸ್ಕೋದ ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಗೆ ಅಧಿಕೃತವಾಗಿ ಸೇರಿಸಲಾಗಿದೆ. ಡಿಸೆಂಬರ್ 10 ರಂದು ದೆಹಲಿಯ ಕೆಂಪು ಕೋಟೆಯಲ್ಲಿನಡೆದ ಯುನೆಸ್ಕೋದ ಅಂತರರಾಷ್ಟ್ರೀಯ ಸಮಿತಿಯ ಸಭೆಯಲ್ಲಿ ಈ ಘೋಷಣೆ ಮಾಡಲಾಯಿತು. ಭಾರತ ಮೊದಲ ಬಾರಿಗೆ ಈ ಸಮಿತಿಯ ಸಭೆಯನ್ನು ಆಯೋಜಿಸಿದ್ದು, ದೀಪಾವಳಿಯ ಸೇರ್ಪಡೆಯು ದೇಶದ ಸಾಂಸ್ಕೃತಿಕ ಪರಂಪರೆಗೆ ಜಾಗತಿಕ ಮನ್ನಣೆ ನೀಡಿದೆ.

ರಾಮಾಯಣದ ಕಾಲದಿಂದ ದೇಶಾದ್ಯಂತ ಅತ್ಯಂತ ವೈಭವದಿಂದ ಆಚರಿಸಲ್ಪಡುವ ದೀಪಾವಳಿಯನ್ನು ಇದೀಗ ಯುನೆಸ್ಕೋ ಪರಂಪರೆಯ ಪಟ್ಟಿಗೆ ಸೇರಿಸಲಾಗಿದೆ. ನವದೆಹಲಿಯ ಕೆಂಪು ಕೋಟೆಯಲ್ಲಿ ನಡೆಯುತ್ತಿರುವ ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗಾಗಿ ನಡೆಯುತ್ತಿರುವ ಅಂತರಸರ್ಕಾರಿ ಸಮಿತಿಯ 20ನೇ ಅಧಿವೇಶನದಲ್ಲಿ ಗುರುವಾರ ಈ ಘೋಷಣೆ ಮಾಡಲಾಗಿದೆ. ಡಿಸೆಂಬರ್ 8 ರಿಂದ 13 ರವರೆಗೆ ಕೆಂಪು ಕೋಟೆಯಲ್ಲಿ ಸಮಿತಿಯ 20 ನೇ ಅಧಿವೇಶನ ನಡೆಯುತ್ತಿದೆ.

ಈ ಘೋಷಣೆಯನ್ನು ಸ್ವಾಗತಿಸಿ ಪ್ರಧಾನಿ ನರೇಂದ್ರ ಮೋದಿ ಅವರು X ನಲ್ಲಿ ಪೋಸ್ಟ್ ಮಾಡಿ, ಭಾರತ ಮತ್ತು ಪ್ರಪಂಚದಾದ್ಯಂತದ ಜನರು ಈ ಮನ್ನಣೆಯಿಂದ ರೋಮಾಂಚನಗೊಂಡಿದ್ದಾರೆ ಎಂದು ಹೇಳಿದ್ದಾರೆ. ಭಾರತ ಮತ್ತು ಪ್ರಪಂಚದಾದ್ಯಂತದ ಇರುವ ಭಾರತೀಯರಿಗೆ ಇದು ರೋಮಾಂಚನಪಡಿಸುವ ಸುದ್ದಿ. ನಮಗೆ, ದೀಪಾವಳಿ ನಮ್ಮ ಸಂಸ್ಕೃತಿ ಮತ್ತು ನೀತಿಯೊಂದಿಗೆ ಬಹಳ ನಿಕಟ ಸಂಬಂಧ ಹೊಂದಿದೆ.

ಇದು ನಮ್ಮ ನಾಗರಿಕತೆಯ ಆತ್ಮ. ಇದು ಜ್ಞಾನೋದಯ ಮತ್ತು ಸದಾಚಾರವನ್ನು ನಿರೂಪಿಸುತ್ತದೆ. ಯುನೆಸ್ಕೋ ಅಮೂರ್ತ ಪರಂಪರೆಯ ಪಟ್ಟಿಗೆ ದೀಪಾವಳಿ ಹಬ್ಬ ಸೇರ್ಪಡೆಯು ಹಬ್ಬದ ಜಾಗತಿಕ ಜನಪ್ರಿಯತೆಗೆ ಮತ್ತಷ್ಟು ಕೊಡುಗೆ ನೀಡುತ್ತದೆ. ಪ್ರಭು ಶ್ರೀ ರಾಮನ ಆದರ್ಶಗಳು ನಮಗೆ ಶಾಶ್ವತವಾಗಿ ಮಾರ್ಗದರ್ಶನ ನೀಡಲಿ ಎಂದು ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಪ್ರಧಾನಿ ಬರೆದುಕೊಂಡಿದ್ದಾರೆ.

ವರದಿ : ಲಾವಣ್ಯ ಅನಿಗೋಳ

About The Author