ತೆಲುಗು ಬಿಗ್ ಬಾಸ್ ಪ್ರಾರಂಭವಾಗಿ ಕೆಲವೇ ದಿನಗಳಾಗಿದ್ದರೂ, ಮನೆಯೊಳಗೆ ಈಗಾಗಲೇ ಗುಂಪುಗಳು ನಿರ್ಮಾಣವಾಗಿವೆ. ಆರಂಭಿಕ ದಿನಗಳಲ್ಲೇ ಕೆಲವು ಸ್ಪರ್ಧಿಗಳು ತಮ್ಮ ಗಟ್ಟಿಯಾದ ಸ್ವಭಾವದಿಂದ ಗಮನ ಸೆಳೆದಿದ್ದು, ಅವರಲ್ಲಿ ಕನ್ನಡದ ನಟಿ ಸಂಜನಾ ಗಲ್ರಾನಿ ಪ್ರಮುಖರು.
ಸುಮಾರು 12 ವರ್ಷಗಳ ಹಿಂದೆ ಕನ್ನಡದ ಮೊದಲ ಬಿಗ್ ಬಾಸ್ ಶೋದಲ್ಲಿ ಭಾಗವಹಿಸಿದ್ದ ಸಂಜನಾ, ಇದೀಗ ತೆಲುಗು ಬಿಗ್ ಬಾಸ್ ಸೀಸನ್ 9ರ ಸ್ಪರ್ಧಿಯಾಗಿ ಮನೆಗೆ ಪ್ರವೇಶಿಸಿದ್ದಾರೆ. ಆದರೆ ಮೊದಲ ವಾರದಲ್ಲೇ ಮನೆಯಲ್ಲಿ ವಿರೋಧವನ್ನು ಎದುರಿಸುತ್ತಿರುವುದರ ಜೊತೆಗೆ ಸಾಕಷ್ಟು ಫುಟೇಜ್‌ನ್ನೂ ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ.
ಮನೆಗೆ ಒಟ್ಟು 13 ಮಂದಿ ಸ್ಪರ್ಧಿಗಳು ಪ್ರವೇಶಿಸಿರುವುದರಲ್ಲಿ, ಸಂಜನಾ ಗಲ್ರಾನಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಎರಡನೇ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ, ಅವರಿಗೆ ವಾರಕ್ಕೆ 2.75 ಲಕ್ಷ ರೂ. ಸಂಭಾವನೆ ನೀಡಲಾಗುತ್ತಿದ್ದು, ಅಂದರೆ ದಿನಕ್ಕೆ ಸುಮಾರು 39,285 ರೂ. ಲೆಕ್ಕ ಬರುತ್ತದೆ.
ಮೊದಲ ವಾರ ಸಂಜನಾ ತೋರಿದ ಆಟ ನೋಡಿದರೆ, ಅವರಿಗೆ ನೀಡಿದ ಸಂಭಾವನೆ ವ್ಯರ್ಥವಾಗಿಲ್ಲ ಎಂಬ ಅಭಿಪ್ರಾಯ ಮೂಡಿದೆ. ಸಾಕಷ್ಟು ಡ್ರಾಮಾ ಸೃಷ್ಟಿಸಿ, ಎಲ್ಲರ ಗಮನ ಸೆಳೆದಿದ್ದಾರೆ. ಅವರ ಆಟದ ಶೈಲಿ ನೋಡಿದರೆ ಕನಿಷ್ಠ ಒಂದು ತಿಂಗಳಾದರೂ ಮನೆಯಲ್ಲಿ ಉಳಿಯುವ ಸಾಧ್ಯತೆ ಇದೆ ಎನ್ನಬಹುದು. ಹಾಗಿದ್ದರೂ, ಈ ವಾರಕ್ಕೆ ಸಂಜನಾ ನಾಮಿನೇಶನ್‌ಗೆ ಒಳಗಾಗಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ




