Thursday, July 24, 2025

Latest Posts

ಕಾಂಗ್ರೆಸ್‌ ಆಯ್ತು, ಇದೀಗ ಏನಿದು ಯತ್ನಾಳ್‌ ಗ್ಯಾರಂಟಿ?

- Advertisement -

ಕೊಪ್ಪಳ : ರಾಜ್ಯ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಆಯ್ಕೆಯ ವಿಚಾರದಲ್ಲಿ ಬಣ ರಾಜಕೀಯ ಜೋರಾಗಿದೆ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಹುದ್ದೆಯಿಂದ ಕೆಳಗಿಳಿಸಿ ಎಂಬ ಕೂಗುಗಳು ಹೆಚ್ಚಾಗಿವೆ. ಎರಡು ಬಣಗಳಾಗಿರುವ ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವುದು ಕಂಡು ಬರುತ್ತಿದೆ. ರೆಬಲ್‌ ನಾಯಕರು ವಿಜಯೇಂದ್ರ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದಾರೆ.

ಇತ್ತ ಕಡೆ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಕೂಡ ವಿಜಯೇಂದ್ರ ವಿರುದ್ಧ ಬೆಂಕಿಯುಗುಳುತ್ತಿದ್ದಾರೆ. ನೇರವಾಗಿ ಯಡಿಯೂರಪ್ಪ ಕುಟುಂಬದ ಮೇಲೆ ಮುಗಿಬೀಳುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರ ಪ್ರತಿಯೊಂದು ಮಾತಿಗೂ ಕೌಂಟರ್‌ ನೀಡುತ್ತಿದ್ದಾರೆ. ಆದರೆ ಇದೀಗ ಮತ್ತೆ ವಾಗ್ದಾಳಿ ನಡೆಸಿರುವ ಯತ್ನಾಳ್‌, ವಿಜಯೇಂದ್ರ ಅವರನ್ನು ಪದೇ ಪದೇ ತಲೆ ಮೇಲೆ ಕೂರಿಸಿಕೊಂಡರೆ ಹೊಸ ಪಕ್ಷ ಕಟ್ಟುವುದು ಗ್ಯಾರಂಟಿ ಎಂದು ಗುಡುಗಿದ್ದಾರೆ.

ಬಿಜೆಪಿಯ ರಾಜ್ಯಾಧ್ಯಕ್ಷರನ್ನು ಬದಲಾವಣೆ ಮಾಡುವುದು ಪಾರ್ಟಿಗೆ ಬಿಟ್ಟಿದ್ದು. ನಾನು ಪಕ್ಷ ಕಟ್ಟಿದರೆ ಆಗ, ಬಿಜೆಪಿ ಬದಲು ನಮ್ಮ ಪಕ್ಷ ಬಹುಮತ ಬರೋದು ಗ್ಯಾರಂಟಿ, ಹಾಗೆಯೇ ಕರ್ನಾಟಕದ ಉದ್ಧಾರ ಆಗೋದು ಗ್ಯಾರಂಟಿ ಎಂದು ಬಿಜೆಪಿ ಹೈಕಮಾಂಡ್‌ಗೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ : ಅಲ್ಲಿಯೂ ಎಲೆಕ್ಷನ್ ಸ್ಕ್ಯಾಮ್ : ರಾಹುಲ್‌ ಗಾಂಧಿ ಸ್ಫೋಟಕ ಆರೋಪ!

ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಚುನಾವಣೆಗೆ ಹೋದರೆ 30 ಸೀಟ್ ಕೂಡ ಬರುವುದಿಲ್ಲ. ತಂದೆಗೆ ಮಗ ಎಂತವನಿದ್ದರೂ ಪ್ರೀತಿ ಇರುತ್ತದೆ. ಆದರೆ ಅವರನ್ನು ರಾಜ್ಯದ ಜನ ತಿರಸ್ಕಾರ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. ವಂಶ ಪಾರಂಪರ್ಯ ಅಧಿಕಾರ, ಭ್ರಷ್ಟಾಚಾರ ನಡೆಯೋದಿಲ್ಲ ಎಂದು ಸ್ವತಃ ಪ್ರಧಾನಿ ಮೋದಿಯವರೇ ಹೇಳಿದ್ದಾರೆ. ಆ ಪ್ರಕಾರ ಎಲ್ಲರೂ ನಡೆದುಕೊಳ್ಳಬೇಕು. ಇಲ್ಲವಾದರೆ ಪಕ್ಷದಲ್ಲಿ ಎಲ್ಲವೂ ನಡೆಯುತ್ತದೆ ಎಂದು ಡಿಕ್ಲೇರ್ ಮಾಡಲಿ. ಎಲ್ಲ ಬಿಜೆಪಿ ಟಿಕೆಟ್‌ಗಳು ಶಾಸಕರು, ಸಚಿವರು ಹಾಗೂ ಸಂಸದರ ಮಕ್ಕಳಿಗೆ ನೀಡುತ್ತೇವೆ ಎಂದು ಘೋಷಣೆ ಮಾಡಲಿ ಎಂದು ಶಾಸಕ ಯತ್ನಾಳ್ ಬಿಜೆಪಿ ಹೈಕಮಾಂಡ್‌ಗೆ ಚಾಲೇಂಜ್ ಹಾಕಿದ್ದಾರೆ.‌

ಇನ್ನೂ ರಾಜ್ಯದಲ್ಲಿ ಈಗಲೇ ಚುನಾವಣೆ ನಡೆದರೆ ಬಿಜೆಪಿ 130 ಸ್ಥಾನಗಳನ್ನು ಪಡೆಯುತ್ತದೆ ಎಂದು ಬಿ.ವೈ.ವಿಜಯೇಂದ್ರ ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಯತ್ನಾಳ್‌ ಈ ರೀತಿಯಾಗಿ ತಿರುಗೇಟು ನೀಡಿದ್ದಾರೆ. ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಬಳಿಕ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ನೇರವಾಗಿ ವಿಜಯೇಂದ್ರ ನಾಯಕತ್ವವನ್ನು ಕಟುವಾದ ಪದಗಳಲ್ಲಿ ಟೀಕಿಸುತ್ತಿದ್ದರು. ಆದರೆ ಪಕ್ಷದಿಂದ ಅವರನ್ನು ಉಚ್ಚಾಟನೆ ಮಾಡಿದ ನಂತರವೂ ಯತ್ನಾಳ್‌ ಯಡಿಯೂರಪ್ಪ ಕುಟುಂಬವನ್ನೇ ಟಾರ್ಗೆಟ್‌ ಮಾಡಿ ಮಾತಿನ ಬಾಣಗಳನ್ನು ಬಿಡುತ್ತಾ ಬರುತ್ತಿದ್ದಾರೆ.

- Advertisement -

Latest Posts

Don't Miss