Thursday, May 1, 2025

Latest Posts

ಕೊರಳಲ್ಲಿ ತಾಳಿ, ಮುಖದಲ್ಲಿ ಮೂಗುಬೊಟ್ಟು ಕಾಣ್ತಿಲ್ಲ : ಕೈ ಶಾಸಕನಿಂದ ಭ್ರಷ್ಟಾಚಾರದ ಮತ್ತೊಂದು ಮುಖ ಅನಾವರಣ

- Advertisement -

Political News: ರಾಜ್ಯದಲ್ಲಿನ ಭ್ರಷ್ಟಾಚಾರದ ಕುರಿತು ಕಾಂಗ್ರೆಸ್‌ ಸರ್ಕಾರದಲ್ಲಿನ ನಾಯಕರೇ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ, ಕಳೆದ ವಾರವಷ್ಟೇ ಸ್ವತಃ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾಗಿರುವ ಶಾಸಕ ಬಸವರಾಜ ರಾಯೆಡ್ಡಿ ಕರ್ನಾಟಕ ಭ್ರಷ್ಟಾಚಾರದಲ್ಲಿ ನಂಬರ್‌ 1 ಆಗಿದೆ ಎಂದು ಹೇಳಿದ್ದರು. ಈ ಹೇಳಿಕೆ ಇಡೀ ರಾಜಕಾರಣದಲ್ಲೇ ತೀವ್ರ ಚರ್ಚೆಗೆ ಕಾರಣವಾಗಿತ್ತು, ಅಲ್ಲದೆ ಸರ್ಕಾರಕ್ಕೂ ಮುಜಗರ ತಂದಿತ್ತು. ಇದಾದ ಬಳಿಕ ಇದೀಗ ಮತ್ತೊಬ್ಬ ಕಾಂಗ್ರೆಸ್‌ ಶಾಸಕ ಸರ್ಕಾರದಲ್ಲಿನ ಲಂಚಗುಳಿತನವನ್ನು ಬಯಲಿಗೆ ತರುವ ಮೂಲಕ ರಾಜ್ಯ ಸರ್ಕಾರದ ಮೇಲೆ ಭ್ರಷ್ಟಾಚಾರ ಕುರಿತ ಆರೋಪಿಸುವ ಬಿಜೆಪಿಗೆ ಮತ್ತೊಂದು ಹೊಸ ಅಸ್ತ್ರವನ್ನು ನೀಡಿದ್ದಾರೆ.

3 ರಿಂದ 5 ಲಕ್ಷ ರೂಪಾಯಿ ಬೇಡಿಕೆ..

ಇನ್ನೂ ಈ ಕುರಿತು ಮಾಯಕೊಂಡದ ಕಾಂಗ್ರೆಸ್‌ ಶಾಸಕ ಕೆ.ಎಸ್.‌ ಬಸವಂತಪ್ಪ ಸರ್ಕಾರದ ವಿರುದ್ಧ ಬೇಸರ ಹೊರಹಾಕಿದ್ದಾರೆ. ಅಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ದಿನಗೂಲಿ ಪೌರ ಕಾರ್ಮಿಕರ ಸೇವೆ ಕಾಯಂ ಮಾಡುವುದಾಗಿ ಘೋಷಣೆ ಮಾಡಿದೆ. ಆದರೆ, ಅಧಿಕಾರಿಗಳು 3 ರಿಂದ 5 ಲಕ್ಷ ರೂಪಾಯಿಗಳವರೆಗೆ ಕಾರ್ಮಿಕರಿಗೆ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎನ್ನುವ ಮೂಲಕ ಹೊಸ ಬಾಂಬ್‌ ಸಿಡಿಸಿದ್ದಾರೆ.

ಲೋಕಾಯುಕ್ತ ತನಿಖೆಯಾಗಲಿ..

ದಾವಣಗೆರೆಯಲ್ಲಿ ಈ ವಿಚಾರ ಪ್ರಸ್ತಾಪಿಸಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಬರುವ ಮೇ 1ರಂದು ರಾಜ್ಯದಲ್ಲಿನ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ದಿನಗೂಲಿ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರ ಸೇವೆಯನ್ನುಕಾಯಂಗೊಳಿಸುವುದಾಗಿ ಘೋಷಿಸಿದ್ದಾರೆ. ಇನ್ನೂ ಈ ವಿಚಾರ ನಮಗೆ ಖುಷಿ ಕೊಡುವುದು ಒಂದೆಡೆಯಾದರೆ, ಈ ರೀತಿ ಕಾಯಂಗೊಳಿಸುವ ಪ್ರಕ್ರಿಯೆಯಲ್ಲಿ ಲಂಚ ಪಡೆಯಲಾಗುತ್ತಿದೆ. ಇದರ ಹಿಂದೆ ಯಾರಿದ್ದಾರೋ ಗೊತ್ತಿಲ್ಲ, ಅಧಿಕಾರಿಗಳೋ ಅಥವಾ ಬೇರೆ ಯಾವುದಾದರೂ ಒತ್ತಡ ಇದೆಯಾ ಎನ್ನುವುದು ಲೋಕಾಯುಕ್ತ ತನಿಖೆ ನಡೆದಾಗಲೇ ಗೊತ್ತಾಗಲಿದೆ ಎಂದು ಅವರು ಸರ್ಕಾರದ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ತಾಳಿ, ಮೂಗು ಬೊಟ್ಟು ಕಾಣುತ್ತಿಲ್ಲ..!

ಇನ್ನೂ ಪ್ರಮುಖವಾಗಿ ತಮ್ಮ ನೇಮಕಾತಿಯ ಕಾಯಂ ಆಗಿ ಮಾಡಿಕೊಳ್ಳಲು ಹಾಗೂ ಈ ಲಂಚಬಾಕರ ಹಣದಾಹ ತೀರಿಸಲು ಈಗಾಗಲೇ ಪೌರ ಕಾರ್ಮಿಕರು ವಿಧಿಯಿಲ್ಲದೆಯೇ ಶೇಕಡಾ 10ರ ಬಡ್ಡಿ ದರದಲ್ಲಿ ಸಾಲ ಪಡೆಯುತ್ತಿದ್ದಾರೆ. ಮಹಿಳಾ ಪೌರ ಕಾರ್ಮಿಕರ ಕೊರಳಲ್ಲಿನ ತಾಳಿ, ಮೂಗುಬೊಟ್ಟು ಕಾಣುತ್ತಿಲ್ಲ ಇವುಗಳ ಮೇಲೆ ಸಾಲ ಪಡೆಯುತ್ತಿದ್ದಾರೆ. ಈ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರವಾಗಿ ಪರಿಗಣಿಸಬೇಕು. ಈ ರೀತಿಯ ಲಂಚಕ್ಕಾಗಿ ಬೇಡಿಕೆ ಇಡುವ ಅಧಿಕಾರಿಗಳು ಹಾಗೂ ಸಂಘಟನೆಗಳ ಮುಖಂಡರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಸೂಕ್ತ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ. ಅಲ್ಲದೆ ಪೌರ ಕಾರ್ಮಿಕರ ನೇಮಕಾತಿ ಆದೇಶ ಹಾಗೂ ಅವರ ಕಾಯಂ ನೇಮಕ ಪ್ರಕ್ರಿಯೆಯು ಪಾರದರ್ಶಕವಾಗಿರಬೇಕು. ಈ ನಿಟ್ಟಿನಲ್ಲಿ ಖುದ್ದು ಸಿಎಂ ಸಿದ್ದರಾಮಯ್ಯ ಗಮನ ಹರಿಸಬೇಕೆಂದು ಶಾಸಕ ಬಸವಂತಪ್ಪ ಆಗ್ರಹಿಸಿದ್ದಾರೆ.

ಒಟ್ನಲ್ಲಿ.. ರಾಜ್ಯದಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ದಿನಕ್ಕೊಂದರಂತೆ ಹಗರಣಗಳ, ಭ್ರಷ್ಟಾಚಾರದ ಆರೋಪಗಳು ಕೇಳಿ ಬರುತ್ತಿವೆ. ಇವೆಲ್ಲದರ ನಡುವೆ ನಮ್ಮೆಲ್ಲರ ಆರೋಗ್ಯದ ಜೊತೆಗೆ ಪರಿಸರದ ಆರೋಗ್ಯವನ್ನು ಶುಚಿಯಾಗಿಡುವ ಪೌರ ಕಾರ್ಮಿಕರು ಕೂಡ ನಿಜವಾದ ಹೀರೋಗಳೇ ಆಗಿದ್ದಾರೆ. ಯಾಕೆಂದರೆ ನಾವು ಯಾವುದನ್ನು ಗಲೀಜು ಎನ್ನುತ್ತೇವೋ, ಯಾವುದನ್ನು ಕಂಡು ಮೂಗು ಮುಚ್ಚಿಕೊಳ್ಳುತ್ತೇವೋ, ಅದನ್ನು ಶ್ರದ್ದೆಯಿಂದ ಶುಚಿಗೊಳಿಸುವ ಕೆಲಸ ಮಾಡುವವರು ಇವರು ನಿಜವಾದ ಕರ್ತವ್ಯ ನಿಷ್ಠರು.

ಅಲ್ಲದೆ ನಾವು ಹೀಗೆ ಮಾಡಿ ಅಸ್ವಚ್ಚತೆಯ ಬಗ್ಗೆ ನಿರ್ಲಕ್ಷ್ಯ ವಹಿಸಿ ನಮಗೆ ನಾವೇ ಅನಾರೋಗ್ಯ ತಂದು ಕೊಳ್ಳುತ್ತೇವೆ. ಆದರೆ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ನಾಗರಿಕರ ಆರೋಗ್ಯದ ದೃಷ್ಟಿಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ಸಂಬಳವೇ ಅತಿ ಕಡಿಮೆಯಾಗಿರುತ್ತದೆ.

ಇದನೆಲ್ಲ ತಿಳಿದು ಕೂಡ ಈ ಭ್ರಷ್ಟ ಅಧಿಕಾರಿಗಳು ಅವರ ಪಟಾಲಂ ಈ ರೀತಿಯ ಭ್ರಷ್ಟ ವ್ಯವಸ್ಥೆ ನಿರ್ಮಿಸಿ ಪೌರ ಕಾರ್ಮಿಕರ ಜೀವ ಹಿಂಡುವ ಕೆಲಸಕ್ಕೆ ಮುಂದಾಗುತ್ತಿರುವುದು ಖಂಡನಾರ್ಹ..!. ಅಲ್ಲದೆ ಈ ಹಣಬಾಕರಿಗೆ ಮಹಿಳೆಯರ ಮೇಲೆಯೂ ಕರುಣೆ ಬರಬಾರದೆ.? ಅವರ ಬಳಿಯಿಂದಲೂ ಲಕ್ಷಾಂತರ ರೂಪಾಯಿಗಳನ್ನು ಲೂಟಿ ಮಾಡಲು ಮುಂದಾಗಿದ್ದಾರೆ ಎಂದರೆ ಈ ವ್ಯವಸ್ಥೆಯ ಬಗ್ಗೆ ನಾವೇ ತಲೆತಗ್ಗಿಸಬೇಕಾದ ಸನ್ನಿವೇಶವನ್ನು ಈ ಲಂಚಬಾಕರು ನಿರ್ಮಿಸುತ್ತಿರುವುದು ನಿಜಕ್ಕೂ ಶೋಚನೀಯ..!

ಅದೇನೆ ಇರಲಿ.. ಹಲವಾರು ವರ್ಷಗಳಿಂದ ಗಲ್ಲಿ ಗಲ್ಲಿಗಳ, ನಗರ ಹಾಗೂ ಪಟ್ಟಣಗಳಲ್ಲಿನ ಸ್ವಚ್ಚತೆ ಉಳಿಯಬೇಕಾದರೆ ಈ ಪೌರ ಕಾರ್ಮಿಕರ ಸೇವೆಯನ್ನು ಮರೆಯುವಂತಿಲ್ಲ. ಶಾಸಕ ಬಸವಂತಪ್ಪ ಅವರು ಎತ್ತಿರುವ ವಿಚಾರವನ್ನು ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುತ್ತಾ, ಶೋಷಣೆಯನ್ನು ವಿರೋಧಿಸುವ ಸಿದ್ದರಾಮಯ್ಯ ಅವರು ಅತ್ಯಂತ ಕಠಿಣವಾಗಿ ಪರಿಗಣಿಸುವ ಮೂಲಕ ಪೌರ ಕಾರ್ಮಿಕರನ್ನು ಈ ಲಂಚ ಬಾಕರಿಂದ ರಕ್ಷಿಸಿ ಅವರ ಬದುಕಿನಲ್ಲಿ ಸಂತಸದ ಕ್ಷಣಕ್ಕೆ ಕಾರಣರಾಗಲಿ ಎನ್ನುವುದೇ ನಮ್ಮ ಆಶಯ..

- Advertisement -

Latest Posts

Don't Miss