ರಿಷಬ್ ಶೆಟ್ಟಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಕಾಂತಾರ ಚಾಪ್ಟರ್ 1ರ ಟ್ರೈಲರ್ ಸೆಪ್ಟೆಂಬರ್ 22 ಬಿಡುಗಡೆಯಾಗಿದೆ. ಯೂಟ್ಯುಬ್ ನಲ್ಲಿ ಲಕ್ಷ ಲಕ್ಷ ವೀಕ್ಷಣೆ ಪಡೆದು ಮುನ್ನುಗುತ್ತಿದೆ. ಒಳ್ಳೆ ರೆಸ್ಪಾನ್ಸ್ ಕೂಡ ಬರುತ್ತಿದೆ. ಕಾಂತಾರ ಚಾಪ್ಟರ್ 1 ಇದೇ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ತೆರೆಗೆ ಅಪ್ಪಳಿಸಲಿದೆ. 2022ರ ಸೆಪ್ಟೆಂಬರ್ 30ರಂದು ತೆರೆಗೆ ಬಂದಿದ್ದ ಕಾಂತಾರ ದ ಲೆಜೆಂಡ್ ಚಿತ್ರದ ಪ್ರೀಕ್ವೆಲ್ ಆಗಿರುವ ಕಾಂತಾರ ಚಾಪ್ಟರ್ 1 ಸ್ವತಂತ್ರಪೂರ್ವ ಕಾಲಘಟ್ಟದ ಕಥೆಯನ್ನು ಹೇಳಲಿದೆ.
ಕಾಂತಾರ ಸಿನಿಮಾದ ಯಶಸ್ಸು ಕಾಂತಾರ ಚಾಪ್ಟರ್ 1 ಮೇಲೆ ಬೆಟ್ಟದಷ್ಟು ನಿರೀಕ್ಷೆ ಹುಟ್ಟಿಕೊಳ್ಳುವಂತೆ ಮಾಡಿದ್ದು, ಸಿನಿ ರಸಿಕರು ಕಾಂತಾರ ಹಿಂದಿನ ಕಥೆ ಏನಿರಬಹುದು ಎಂದು ಕಾತರರಾಗಿ ಕಾಯುತ್ತಿದಾದರೆ. ಆದರೆ ಈಗ ವಿವಾದವೊಂದು ಹುಟ್ಟುಕೊಂಡಿದೆ. ಎಲ್ಲ ವರ್ಗದವರೂ, ಎಲ್ಲ ಧರ್ಮದವರೂ ಕಾಯುತ್ತಿರುವ ಕಾಂತಾರ ಚಿತ್ರದ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದು ವೈರಲ್ ಆಗಿದ್ದು, ಇದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
ಕಾಂತಾರ ವೀಕ್ಷಿಸಲು ಬರುವವರು ಮೂರು ನಿಯಮಗಳನ್ನು ಅನುಸರಿಸುತ್ತೇವೆ ಎಂದು ನಿರ್ಧಾರ ಮಾಡಿಕೊಳ್ಳಿ. ಅದೇನೆಂದರೆ ಮದ್ಯಪಾನ ಮಾಡುವುದಿಲ್ಲ, ಧೂಮಪಾನ ಮಾಡುವುದಿಲ್ಲ ಹಾಗೂ ಮಾಂಸಹಾರ ಸೇವಿಸುವುದಿಲ್ಲ ಎಂದು ಸಂಕಲ್ಪ ಮಾಡಿ ಎಂದು ಈ ಪೋಸ್ಟ್ನಲ್ಲಿ ಬರೆಯಲಾಗಿದೆ. ಸದ್ಯ ಈ ರೀತಿಯ ಪ್ರಕಟಣೆ ಇರುವ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ ಹಾಗೂ ನಗೆಪಾಟಲಿಗೆ ಎಡೆ ಮಾಡಿಕೊಟ್ಟಿದೆ. ಇನ್ನು ಚಿತ್ರತಂಡಕ್ಕೂ ಈ ಪೋಸ್ಟ್ಗೂ ಯಾವುದೇ ಸಂಬಂಧವಿಲ್ಲದೇ ಇದ್ದು, ಇಂತಹ ಪೋಸ್ಟ್ ಮಾಡಿ ಸಸ್ಯಾಹಾರ ಹಾಗೂ ಮಾಂಸಹಾರ ಸೇವಿಸುವವರ ನಡುವೆ ಕಿಡಿ ಹೊತ್ತಿಸುವ ಯತ್ನ ನಡೆದಿರುವ ಅನುಮಾನಗಳಿಗೂ ಸಹ ಈ ಪೋಸ್ಟ್ ಎಡೆ ಮಾಡಿಕೊಟ್ಟಿದೆ.
ಅಂತಿಮವಾಗಿ ಭಾರತದಂತಹ ಸ್ವತಂತ್ರ ದೇಶದಲ್ಲಿ ಯಾರು ಏನನ್ನು ಸೇವಿಸಬೇಕು, ಏನು ಮಾಡಬೇಕು, ಏನು ಮಾಡಬಾರದು ಎಂಬುದು ಆ ವ್ಯಕ್ತಿಯ ವೈಯಕ್ತಿಕ ವಿಚಾರವೇ ಹೊರತು ಇನ್ಯಾವುದೇ ವ್ಯಕ್ತಿ ಹೀಗೆ ಇರಿ, ಹಾಗೆ ಇರಿ ಎಂದು ಹೇಳುವ ಹಕ್ಕು ಇಲ್ಲ. ಅದರಲ್ಲೂ ಸಿನಿಮಾದಂತಹ ಮನರಂಜನೆ ವಿಚಾರದಲ್ಲಿ ಇಂತಹ ಅವಿವೇಕದ ವರ್ತನೆ ಒಳಿತಲ್ಲ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ