ಉಪ್ಪು ತಿಂದಿದ್ದೀರಿ, ನೀರು ಕುಡಿಯಲು ತಯಾರಾಗಿರಿ: ಸಿ.ಟಿ.ರವಿಗೆ ಗೃಹಸಚಿವ ಪ್ರಿಯಾಂಕ್ ಖರ್ಗೆ ಹೀಗೆ ಹೇಳಿದ್ದೇಕೆ..?

Political News: ಬಿಜೆಪಿ ನಾಯಕ ಸಿ.ಟಿ.ರವಿ ನೀಟ್ ಪರೀಕ್ಷೆ ಪ್ರತಿಭಟನೆ ವೇಳೆ ನೀಡಿದ ಮುಲ್ಲಾ ಹೇಳಿಕೆ ಬಗ್ಗೆ ಹಲವು ಪ್ರತಿಕ್ರಿಯೆಗಳನ್ನು ನೀಡಿದ್ದು, ಗೃಹಸಚಿವ ಪ್ರಿಯಾಂಕ್ ಖರ್ಗೆ, ಈ ಹೇಳಿಕೆಗಳನ್ನು ಸುಳ್ಳು ಹೇಳಿಕೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಅವರು, ತಮ್ಮ ದ್ವೇಷದ ಹೇಳಿಕೆಯನ್ನು ಸಮರ್ಥಿಸಲು ಒಂದು ಸುಳ್ಳಿಗೆ ಮತ್ತೊಂದು ಸುಳ್ಳನ್ನು ಪೋಣಿಸುತ್ತಾ ಸುಳ್ಳಿನ ಹಾರವನ್ನೇ ಹಾಕಿಕೊಳ್ಳುವ ಸಿ.ಟಿ ರವಿಯಂತಹವರು ರಾಜಕೀಯ ವ್ಯವಸ್ಥೆಗೆ ಅಂಟಿರುವ ಕಳಂಕ. ಸಿ.ಟಿ ರವಿ ಸೇರಿದಂತೆ ಬಿಜೆಪಿಗರ ಎದೆ ಸೀಳಿದರೆ ನಾಲ್ಕಕ್ಷರಗಳೂ ಸಿಗುವುದಿಲ್ಲ, ಜೊತೆಗೆ ನೈತಿಕತೆ, ಲಜ್ಜೆ, ಸತ್ಯ, ಬದ್ಧತೆ, ಆತ್ಮಸಾಕ್ಷಿಗಳೂ ಕಾಣುವುದಿಲ್ಲ ಎಂದು ಪ್ರಿಯಾಂಕ್ ಖರ್ಗೆ, ರವಿ ವಿರುದ್ಧ ಕಿಡಿಕಾರಿದ್ದಾರೆ.

NEET ವಿದ್ಯಾರ್ಥಿಗಳ ಹೋರಾಟದ ವಿಷಯದಲ್ಲೂ ಧರ್ಮಗಳನ್ನು ಎಳೆದುತಂದ ಸಿ.ಟಿ ರವಿಯವರು ತಮ್ಮ ದ್ವೇಷದ ಹೇಳಿಕೆಯನ್ನು ಸಮರ್ಥಿಸಲು NEET ಹೋರಾಟಕ್ಕೆ ಸಂಬಂಧವೇ ಇಲ್ಲದ ವಿಡಿಯೋ ಒಂದನ್ನ ತೋರಿಸಿ ದಿಕ್ಕು ತಪ್ಪಿಸುವ ವಿಫಲ ಯತ್ನ ಮಾಡಿದ್ದಾರೆ.

ಸಿ.ಟಿ.ರವಿ ಅವರೇ, ಸತ್ಯ ಹೇಳಲು ಹಿಂಜರಿಕೆ ಬೇಕಿಲ್ಲ, ಆದರೆ ಸುಳ್ಳು ಹೇಳಲು ಹಿಂಜರಿಕೆ, ನೈತಿಕ ಭಯ, ಸಾಮಾಜಿಕ ಭಯ ಇರಬೇಕಾಗುತ್ತದೆ, ಅಂತಹದ್ದು ಯಾವುದೂ ತಮಗೆ ಇಲ್ಲ ಎನ್ನುವುದನ್ನು ನಿರೂಪಿಸುತ್ತಲೇ ಇದ್ದೀರಿ.. ಈ ಹಿಂದೆ ಸದನದಲ್ಲಿ ತಾವು ಆಡಿದ ಮಾತಿನಿಂದಲೇ ನಿಮ್ಮ ಗುಣ ಏನೆಂದು ರಾಜ್ಯಕ್ಕೆ ತಿಳಿದಿದೆ, ಅಂದು ತಾವು ಆಡಿದ್ದ ಮಾತಿನ ತನಿಖೆಗೆ ಇಂದಿಗೂ ಧ್ವನಿ ಸ್ಯಾಂಪಲ್ ಕೊಡದಿರುವುದು ತಮ್ಮ ಪಲಾಯನವಾದ ಮತ್ತು ಅನೈತಿಕತೆಯನ್ನು ತೋರಿಸುತ್ತದೆ. “ಕಾನೂನಿಗೆ ಸವಾಲು ಹಾಕುತ್ತೇನೆ” ಎಂಬ ನಿಮ್ಮ ದ್ರಾಷ್ಟ್ಯ ನಡೆಯುವುದಿಲ್ಲ, ಉಪ್ಪು ತಿಂದಿದ್ದೀರಿ, ನೀರು ಕುಡಿಯಲು ತಯಾರಾಗಿರಿ ಎಂದು ಗೃಹಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದ್ದಾರೆ.

About The Author