ದೇಶದ ಘನತೆಗೆ ಕುಂದುಂಟು ಮಾಡುವ ಯೂತ್ ಕಾಂಗ್ರೆಸ್ಸಿನ ಅಸಭ್ಯ ನಡೆ ಅತ್ಯಂತ ಖಂಡನೀಯ: ಬಿ.ವೈ.ವಿಜಯೇಂದ್ರ

Political News: ದೆಹಲಿಯಲ್ಲಿ ನಡೆಯುತ್ತಿರುವ ಎಐ ಶೃಂಗಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅರೆಬೆತ್ತಲೆ ಪ್ರತಿಭಟನೆ ನಡೆಸಿತ್ತು. ಈ ವಿರುದ್ಧ ಬೆಂಗಳೂರಿನಲ್ಲಿಂದು ಬಿಜೆಪಿ ಯುವಮೋರ್ಚಾದವರು ಕೂಡ ಪ್ರತಿಭಟಿಸಿದ್ದಾರೆ.

ಯುವ ಮೋರ್ಚಾ ರಾಜ್ಯಾಧ್ಯಕ್ಷರು ಹಾಗೂ ಶಾಸಕ ಶ್ರೀ ಧೀರಜ್‌ ಮುನಿರಾಜು, ಶಾಸಕರು, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಶ್ರೀ ಶ್ರೀ ಸಿ.ಕೆ.ರಾಮಮೂರ್ತಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಶ್ರೀ ಎಸ್.ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಶ್ರೀ ಸಪ್ತಗಿರಿ ಗೌಡ, ಯುವ ಮೋರ್ಚಾ ಪದಾಧಿಕಾರಿಗಳು, ಪ್ರಮುಖರು ಮತ್ತು ಕಾರ್ಯಕರ್ತರು ಭಾಗಿಯಾಗಿದ್ದರು.

ಈ ಬಗ್ಗೆ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಶ್ವಮಟ್ಟದಲ್ಲಿ ಭಾರತದ ಪ್ರತಿಷ್ಠೆ ಹೆಚ್ಚುತ್ತಿರುವ ಸಂದರ್ಭದಲ್ಲಿ, AI ಶೃಂಗಸಭೆಯಂತಹ ದೊಡ್ಡ, ಜಾಗತಿಕ ವೇದಿಕೆಯಲ್ಲಿ, ಪ್ರತಿಭಟನೆ ಸೋಗಿನಲ್ಲಿ ಕಾಂಗ್ರೆಸ್ ಪಕ್ಷ ತನ್ನ ಹತಾಶೆ, ಅಸಹನೆಯನ್ನು, ಕೆಟ್ಟ ರೀತಿಯಲ್ಲಿ ಬೀದಿಗೆ ತಂದಿದೆ. ಅಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸುವ ಮೂಲಕ ಜಾಗತಿಕವಾಗಿ ದೇಶದ ಹಿರಿಮೆಗೆ ಮಸಿ ಬಳಿಯುವ ನೀಚ ಮಟ್ಟಕ್ಕೆ ಇಳಿದಿದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ವಿದೇಶಿ ಗಣ್ಯರ ಮುಂದೆ ಅಸಭ್ಯ ಪ್ರದರ್ಶನದ ಮೂಲಕ ದೇಶದ ಘನತೆಗೆ ಕುಂದುಂಟು ಮಾಡುವ ಯೂತ್ ಕಾಂಗ್ರೆಸ್ಸಿನ ಅಸಭ್ಯ ನಡೆ ಅತ್ಯಂತ ಖಂಡನೀಯ. ‘ವಿನಾಶಕಾಲೇ ವಿಪರೀತ ಬುದ್ಧಿ’ ಎನ್ನುವಂತೆ, ಎಲ್ಲ ಕಡೆ ಕುಸಿಯುತ್ತಿರುವ ತನ್ನ ನೆಲೆಯಿಂದ ತಲೆ ಕೆಟ್ಟು, “ದೇಶಕ್ಕಿಂತ ಸ್ವಾರ್ಥವೇ ಲೇಸು” ಎನ್ನುವ ದುಸ್ಥಿತಿ ಕಾಂಗ್ರೆಸ್ಸಿಗೆ ಬಂದಿದೆ. ದೇಶದ ಜನತೆ ಕಾಂಗ್ರೆಸ್ ಪಕ್ಷದ ಈ ಅಸಹ್ಯ ವರ್ತನೆಯನ್ನು ಎಂದಿಗೂ ಕ್ಷಮಿಸರು. ಅಧಿಕಾರ ಲಾಲಸೆ, ಅಸಹನೆಗಳಿಂದ ದೇಶದ ಘನತೆಗೆ ಮಸಿ ಬಳಿಯುವ ಕಾಂಗ್ರೆಸ್ಸಿನ ಇಂತಹ ಅಸಭ್ಯ ಕುತಂತ್ರಗಳಿಗೆ ಧಿಕ್ಕಾರ ಎಂದು ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

About The Author