“ರಾನಿ” ಗಾಗಿ ಆಕಾಶದಿಂದ ಹಾರಿದ ನಾಯಕ ಕಿರಣ್ ರಾಜ್ .
ಜನಪ್ರಿಯ ಧಾರಾವಾಹಿ, ” ಬಡ್ಡೀಸ್” ಸಿನಿಮಾ ಹಾಗೂ ತಮ್ಮ ಸಾಮಾಜಿಕ ಕಾರ್ಯಗಳಿಂದ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿರುವ ಕಿರಣ್ ರಾಜ್ “ಕನ್ನಡತಿ” ಧಾರಾವಾಹಿ ನಂತರ ಏನು ಮಾಡುತ್ತಾರೆ? ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಈಗ ಅದಕ್ಕೆ ಉತ್ತರ ದೊರಕಿದೆ. ಗುರುತೇಜ್ ಶೆಟ್ಟಿ ನಿರ್ದೇಶಿಸುತ್ತಿರುವ ನೂತನ ಚಿತ್ರದಲ್ಲಿ ಕಿರಣ್ ರಾಜ್ ನಾಯಕರಾಗಿ ನಟಿಸುತ್ತಿದ್ದಾರೆ.
ಸಾಮಾನ್ಯವಾಗಿ ನಾಯಕ ಸಿನಿಮಾದಲ್ಲಿ ಬರುವ ಸಾಹಸ ಸನ್ನಿವೇಶಗಳಲ್ಲಿ ಸ್ವಲ್ಪ ರಿಸ್ಕ್ ತೆಗೆದುಕೊಳ್ಳುವುದು ನೋಡಿದ್ದೇವೆ. ಆದರೆ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಲು ನಾಯಕ ಕಿರಣ್ ರಾಜ್, ಭಾರೀ ಸಾಹಸ ಮಾಡಿದ್ದಾರೆ. ಇಲ್ಲಿಂದ ದೂರದ ದುಬೈಗೆ ಹೋಗಿ ಅಲ್ಲಿ ವಿಮಾನದಿಂದ ಹದಿಮೂರು ಸಾವಿರ ಅಡಿ ಮೇಲಿಂದ ಜಿಗಿದು(ಸ್ಕೈ ಡ್ರೈವ್) ತಮ್ಮ ನೂತನ ಚಿತ್ರದ ಶೀರ್ಷಿಕೆ ಅನಾವರಣ ಮಾಡಿದ್ದಾರೆ. ಅವರ ಮುಂದಿನ ಚಿತ್ರದ ಹೆಸರು “ರಾನಿ”. ಈ ಬಗ್ಗೆ ಕಿರಣ್ ರಾಜ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ.
ನನಗೆ ಸಿನಿಮಾ ಎಂದರೆ ಕನಸು. ಹಾಗಾಗಿ ಚಿತ್ರ ಆರಂಭದಿಂದಲೂ ಸ್ವಲ್ಪ ವಿಶೇಷ ಇರಬೇಕು ಎಂದು ಬಯಸುತ್ತೇನೆ. ಸಾಮಾನ್ಯವಾಗಿ ಗಣ್ಯರ ಸಮ್ಮುಖದಲ್ಲಿ ಶೀರ್ಷಿಕೆ ಅನಾವರಣವಾಗುತ್ತದೆ. ಆದರೆ ನಾನು ಸ್ವಲ್ಪ ಭಿನ್ನವಾಗಿರಲಿ ಎಂದು ಯೋಚಿಸಿ, ಸ್ಕೈಡ್ರೈವ್ ಮೂಲಕ ಈ ಚಿತ್ರದ ಶೀರ್ಷಿಕೆ ಅನಾವರಣ ಮಾಡಿದೆ. “ರಾನಿ” ಈ ಚಿತ್ರದ ಹೆಸರು. ನನ್ನ ಈ ಸಾಹಸಕ್ಕೆ ಮನೆಯವರಿಂದ, ಸ್ನೇಹಿತರಿಂದ ವಿರೋಧ ವ್ಯಕ್ತವಾಯಿತು. ಆದರು ನಾನು ಅಲ್ಲಿನ ಪರಿಣಿತರಿಂದ ತರಭೇತಿ ಪಡೆದು ಈ ಸಾಹಸಕ್ಕೆ ಮುಂದಾದೆ. ಇದು ಆಕ್ಷನ್ ಓರಿಯಂಟೆಡ್ ಚಿತ್ರವಾಗಿರುವುದರಿಂದ ಚಿತ್ರದಲ್ಲೂ ಮೈನವಿರೇಳಿಸುವ ಸಾಹಸ ದೃಶ್ಯಗಳಿರುತ್ತದೆ ಎಂದರು ನಾಯಕ ಕಿರಣ್ ರಾಜ್.
ಕಿರಣ್ ರಾಜ್ ಅವರ ಈ ಸಾಹಸ ನನಗೂ ಸ್ವಲ್ಪ ದಿಗಿಲು ಹುಟ್ಟಿಸಿತ್ತು. ಆವರು ದುಬೈನಲ್ಲಿ ಅಗಸದಿಂದ ಹಾರುತ್ತಿದ್ದರೆ, ನಾನು ಇಲ್ಲಿ ದೇವರ ಬಳಿ ಪ್ರಾರ್ಥಿಸುತ್ತಿದೆ. ಅವರು ಪೂರ್ತಿ ವಿಡಿಯೋ ಕಳುಹಿಸಿದ ಮೇಲೆ ನೆಮ್ಮದಿಯ ನಿಟ್ಟುಸಿರು ಬಿಟ್ಟೆ. ಕಿರಣ್ ರಾಜ್ ಈ ಸಿನಿಮಾಗಾಗಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. “ಬಡ್ಡೀಸ್” ನಂತರ ನಮ್ಮಿಬ್ಬರ ಕಾಂಬಿನೇಶನ್ ನಲ್ಲಿ ಈ ಚಿತ್ರ ಬರುತ್ತಿದೆ. ಮುಂದಿನ ಕೆಲವೆ ದಿನಗಳಲ್ಲಿ ಚಿತ್ರದ ಬಗ್ಗೆ ಹೆಚ್ಚು ಮಾಹಿತಿ ನೀಡುತ್ತೇನೆ ಎಂದರು ನಿರ್ದೇಶಕ ಗುರುತೇಜ್ ಶೆಟ್ಟಿ.
ಡಾ||ರಾಜಕುಮಾರ್, ವಿಷ್ಣುವರ್ಧನ್ ಅವರ ಚಿತ್ರಗಳನ್ನು ನೋಡಿ ಬೆಳೆದವರು ನಾವು. ಮೂಲತಃ ಉದ್ಯಮಿಗಳು. ಚಿತ್ರ ಮಾಡುವ ಆಸೆಯಿತ್ತು. ಗುರುತೇಜ್ ಶೆಟ್ಟಿ ಅವರು ಹೇಳಿದ ಕಥೆ ಇಷ್ಟವಾಯಿತು. ನಿರ್ಮಾಣಕ್ಕೆ ಮುಂದಾದೆವು ಎಂದರು ನಿರ್ಮಾಪಕರಾದ ಚಂದ್ರಕಾಂತ್ ಪೂಜಾರಿ ಹಾಗೂ ಉಮೇಶ್ ಹೆಗಡೆ.