Monday, June 16, 2025

Latest Posts

ಭೀಕರ ಕಾಲ್ತುಳಿತ : ಜಾತ್ರೆಯಲ್ಲಿ ಆವರಿಸಿದ ಸೂತಕ..!

- Advertisement -

ಬೆಂಗಳೂರು : ಶನಿವಾರ ಬೆಳಗಿನ ಜಾವ ಉತ್ತರ ಗೋವಾ ರಾಜ್ಯದ ಶಿರ್ಗಾಂವ ಗ್ರಾಮದಲ್ಲಿ ಭೀಕರ ಕಾಲ್ತುಳಿತ ಸಂಭವಿಸಿದೆ. ಐತಿಹಾಸಿಕ ಲೈರೈ ದೇವಿ ವಾರ್ಷಿಕ ಜಾತ್ರಾ ಮಹೋತ್ಸವ ನಡೆದಿತ್ತು. ಶತಮಾನಗಳಷ್ಟು ಹಳೆಯದಾದ ದೇವಸ್ಥಾನದ ಆಚರಣೆಗಳನ್ನು ಕಣ್ತಂಬಿಕೊಳ್ಳಲು ಸಾವಿರಾರು ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಕಾಲ್ತುಳಿತ ಸಂಭವಿಸಿದ ಪರಿಣಾಮ 7ಜನ ಭಕ್ತರು ದುರ್ಮರಣಕ್ಕೀಡಾಗಿದ್ದು, 50ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.

ಚಿಕಿತ್ಸೆಗೆ ಅಧಿಕಾರಿಗಳಿಗೆ ಸೂಚನೆ..

ಇನ್ನೂ ಈ ಘಟನೆ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಗಾಯಾಳುಗಳಿಗೆ ಅಗತ್ಯ ವೈದ್ಯಕೀಯ ಚಿಕತ್ಸೆ ದೊರೆಯುವ ವ್ಯವಸ್ಥೆ ಕಲ್ಪಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇನ್ನೂ ಈ ಕುರಿತು ಮಾತನಾಡಿರುವ ಅವರು, ಈ ಘಟನೆ ತಿಳಿದು ನಾನು ಸ್ಥಳಕ್ಕೆ ಭೇಟಿ ನೀಡಿ ಇಡೀ ಪರಿಸ್ಥಿತಿ ಅವಲೋಕಿಸಿದ್ದೇನೆ. ಈ ದುರ್ಘಟನೆಯಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ, 50ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಈ ಘಟನೆಯಿಂದ ನನಗೆ ತೀವ್ರ ದುಖಃವಾಗಿದೆ. ಹೀಗಾಗಿ ಮುಂದಿನ 3 ದಿನಗಳವರೆಗೆ ನನ್ನ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳನ್ನು ರದ್ದುಗೊಳಿಸುತ್ತೇನೆ ಎಂದು ಭಾವುಕರಾಗಿದ್ದಾರೆ.

ಮುಂದಿನ 3 ದಿನಗಳವರೆಗೆ ರಾಜ್ಯದಲ್ಲಿ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳನ್ನು ರದ್ದು

ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಆರೈಕೆ ನೀಡಲಾಗುತ್ತಿದ್ದು, ಉತ್ತರ ವಲಯದ ಎಸ್‌ಪಿ ಹಾಗೂ ಜಿಲ್ಲಾಧಿಕಾರಿಗಳು ಈ ಘಟನೆಯ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರತಿ ವರ್ಷ 50,000 ಕ್ಕೂ ಹೆಚ್ಚು ಜನರು ಜಾತ್ರೆಯಲ್ಲಿ ಭಾಗವಹಿಸುತ್ತಾರೆ. ಇದು ದುರದೃಷ್ಟಕರ ಘಟನೆ ಎಂದು ಸಾವಂತ್‌ ವಿಷಾದ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರು ತಮಗೆ ಕರೆ ಮಾಡಿ ಘಟನೆಯ ಬಗ್ಗೆ ವಿಚಾರಿಸಿ, ಕೇಂದ್ರದ ಸಹಾಯದ ಭರವಸೆ ನೀಡಿದ್ದಾರೆ. ಗಾಯಾಳುಗಳಿಗೆ ಆರೈಕೆ ನೀಡಲಾಗುತ್ತಿದ್ದು, ಮುಂದಿನ 3 ದಿನಗಳವರೆಗೆ ರಾಜ್ಯದಲ್ಲಿ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ ಎಂದು ಘೋಷಿಸಿದ್ದಾರೆ. ಇನ್ನೂ ಕಾಲ್ತುಳಿತದಲ್ಲಿ ಸಿಲುಕಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸುವ ಮುನ್ನವೇ 6 ಜನರು ಸಾವನ್ನಪ್ಪಿದ್ದರು. ನಾನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋಗಿದ್ದೆ, ಅಲ್ಲಿ ಇಬ್ಬರ ಶವಗಳನ್ನು ಇರಿಸಲಾಗಿದೆ. ನಾನು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ್ದೆ, ಅಲ್ಲಿ 10 ಜನರು ದಾಖಲಾಗಿದ್ದಾರೆ. ಉಳಿದವರು ಗೋವಾ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಒಬ್ಬ ವ್ಯಕ್ತಿಯ ಸ್ಥಿತಿ ಗಂಭೀರವಾಗಿದೆ ಎಂದು ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಮಾಹಿತಿ ನೀಡಿದ್ದಾರೆ.

ಮೋದಿಯಿಂದ ನೆರವಿನ ಭರವಸೆ..

ಗೋವಾದ ಶಿರ್ಗಾಂವ್‌ನಲ್ಲಿ ಕಾಲ್ತುಳಿತದಿಂದ ಸಾವು-ನೋವುಗಳು ಸಂಭವಿಸಿರುವುದಕ್ಕೆ ದುಃಖಿತನಾಗಿದ್ದೇನೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸುತ್ತೇನೆ. ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ. ಸ್ಥಳೀಯ ಆಡಳಿತವು ಸಂತ್ರಸ್ತರಿಗೆ ಸಹಾಯ ಮಾಡುತ್ತಿದೆ. ಕೇಂದ್ರ ಸರ್ಕಾರವು ಅಗತ್ಯ ನೆರವು ನೀಡಲಿದೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ.

30,000 ರಿಂದ 40,000 ಜನರು ಜಮಾಯಿಸಿದ್ದರು..

ನೂರಾರು ವರ್ಗಳಷ್ಟು ಪುರಾತನವಾದ ಲೈರೈ ದೇವಿ ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕದ ಸಾವಿರಾರು ಭಕ್ತರು ಉತ್ಸವಕ್ಕಾಗಿ ದೇವಾಲಯದಲ್ಲಿ ಜಮಾಯಿಸಿದ್ದರು, ತನಿಖೆಯ ನಂತರ ಕಾಲ್ತುಳಿತಕ್ಕೆ ನಿಖರವಾದ ಕಾರಣ ತಿಳಿಯಲಿದೆ. ಈ ಬಾರಿ 30,000 ರಿಂದ 40,000 ಜನರು ಸೇರಿದ್ದರು, ಇದರಲ್ಲಿ ಕೆಲವರು ಇಳಿಜಾರಿನಲ್ಲಿ ನಿಂತಿದ್ದರು. ಕೆಲವು ವ್ಯಕ್ತಿಗಳು ಆಯತಪ್ಪಿ ಇಳಿಜಾರಿನಲ್ಲಿ ಬಿದ್ದರು, ಹೀಗೆ ಒಬ್ಬರ ಮೇಲೋಬ್ಬರು 40 ರಿಂದ 50 ಜನರು ಇಳಿಜಾರಿನಲ್ಲಿ ಬಿದ್ದು, ಕಾಲ್ತುಳಿತಕ್ಕೆ ಕಾರಣವಾಗಿದೆ. ಅದು ಸ್ವಲ್ಪ ಇಕ್ಕಟ್ಟಿನ ಜಾಗವಾಗಿತ್ತು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

Latest Posts

Don't Miss