ಸರ್ಕಾರಿ ಕೆಲಸದ ಕನಸು ಕಾಣುತ್ತಿರುವವರಿಗೆ ಬಂಪರ್ ಲಾಟರಿ – ಕಲ್ಯಾಣ ಕರ್ನಾಟಕದಲ್ಲೇ 32,000 ಹುದ್ದೆ ಖಾಲಿ!

ರಾಜ್ಯ ಸರ್ಕಾರದ ಅತಿದೊಡ್ಡ ನೇಮಕಾತಿ ಪ್ರಕ್ರಿಯೆಗಳಲ್ಲಿ ಒಂದಾದ 72,186 ಸರ್ಕಾರಿ ಹುದ್ದೆಗಳ ಭರ್ತಿಗೆ ವೇಗ ನೀಡಲು ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಮುಖ್ಯಮಂತ್ರಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮುನೀಶ್ ಮೌದ್ಗಿಲ್ ಈ ಕುರಿತು ಎಲ್ಲಾ ಇಲಾಖೆಗಳು, ಕರ್ನಾಟಕ ಲೋಕಸೇವಾ ಆಯೋಗ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಪತ್ರ ಬರೆದು ಮಿಷನ್ ಮೋಡ್‌ನಲ್ಲಿ ಕಾರ್ಯನಿರ್ವಹಿಸುವಂತೆ ಸೂಚಿಸಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಹಣಕಾಸು ಇಲಾಖೆ ಅನುಮೋದನೆ ನೀಡಿರುವ ಹುದ್ದೆಗಳು ಹಾಗೂ ಕಲ್ಯಾಣ ಕರ್ನಾಟಕದ ಡೀಮ್ಡ್ ಅಪ್ರೂವಲ್ ಸೇರಿ ಒಟ್ಟು 72,186 ಹುದ್ದೆಗಳು ಇನ್ನೂ ಭರ್ತಿಯಾಗಬೇಕಿದ್ದು, ಎಲ್ಲಾ ಇಲಾಖೆಗಳು 10 ದಿನಗಳೊಳಗೆ ಖಾಲಿ ಹುದ್ದೆಗಳ ವಿವರವನ್ನು ಅಪ್‌ಲೋಡ್ ಮಾಡಿ, ನೇಮಕಾತಿ ಪ್ರಸ್ತಾವನೆಗಳನ್ನು ಕೆಇಎ ಹಾಗೂ ಕೆಪಿಎಸ್‌ಸಿಗೆ ಕಳುಹಿಸುವಂತೆ ಸೂಚಿಸಲಾಗಿದೆ.

ನೇಮಕಾತಿಗೆ ಅಗತ್ಯವಿರುವ ಅಧಿಸೂಚನೆಗಳನ್ನು ತಕ್ಷಣ ಹೊರಡಿಸುವುದು, ಸಿ & ಆರ್ ನಿಯಮಗಳ ತಿದ್ದುಪಡಿ ಪೂರ್ಣಗೊಳಿಸುವುದು ಹಾಗೂ ಪ್ರತಿಯೊಂದು ಇಲಾಖೆಯಲ್ಲಿ ನೋಡಲ್ ಅಧಿಕಾರಿಯನ್ನು ನೇಮಿಸಿ ಪ್ರಕ್ರಿಯೆಯನ್ನು ವೇಗಗೊಳಿಸುವಂತೆ ನಿರ್ದೇಶನ ನೀಡಲಾಗಿದೆ. ಕಳೆದ ಮೂರು ವರ್ಷಗಳಿಂದ ಅನುಮೋದನೆ ಪಡೆದ ಹಲವು ಹುದ್ದೆಗಳು ಇನ್ನೂ ಭರ್ತಿಯಾಗದೇ ಉಳಿದಿದ್ದು, ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲೇ 32 ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ ಎಂದು ಸರ್ಕಾರ ತಿಳಿಸಿದೆ.

ಈ ಹಿಂದೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದಂತೆ, ಎರಡು ತಿಂಗಳೊಳಗೆ ನೇಮಕಾತಿ ಅಧಿಸೂಚನೆ, ನಾಲ್ಕು ತಿಂಗಳೊಳಗೆ ಪರೀಕ್ಷೆ ಹಾಗೂ ಆರು ತಿಂಗಳೊಳಗೆ ನೇಮಕಾತಿ ಆದೇಶ ನೀಡುವ ಗುರಿಯೊಂದಿಗೆ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಈ ನೇಮಕಾತಿಯಿಂದ ಸಾವಿರಾರು ಯುವಕರಿಗೆ ಉದ್ಯೋಗಾವಕಾಶ ಸಿಗುವುದರ ಜೊತೆಗೆ ಸರ್ಕಾರಿ ಸೇವೆಗಳ ವಿತರಣೆಯೂ ಮತ್ತಷ್ಟು ಬಲವಾಗಲಿದೆ ಎಂದು ಸರ್ಕಾರ ತಿಳಿಸಿದೆ.

About The Author