ವಿದ್ಯಾರ್ಥಿಗಳಿಗೆ ‘ಗೆದ್ದಲು-ಜಿರಳೆ’ ಎಂದ ಬಿಜೆಪಿ ನಾಯಕ – ಪ್ರತಿಪಕ್ಷಗಳಿಂದ ಹೆಚ್ಚಿದ ಆಕ್ರೋಶ!

ಪ್ರಜಾಪ್ರಭುತ್ವದಲ್ಲಿ ಸರ್ಕಾರದ ನೀತಿಗಳನ್ನು ಪ್ರಶ್ನಿಸುವುದು ಮತ್ತು ಪ್ರತಿಭಟಿಸುವುದು ಪ್ರತಿಯೊಬ್ಬ ಪ್ರಜೆಯ ಹಕ್ಕು. ಆದರೆ, ತಮ್ಮ ಹಕ್ಕಿಗಾಗಿ ಬೀದಿಗಿಳಿದ ವಿದ್ಯಾರ್ಥಿಗಳನ್ನು ಗೋವಾದ ಬಿಜೆಪಿ ಹಿರಿಯ ನಾಯಕರೊಬ್ಬರು ‘ಗೆದ್ದಲು’ ಮತ್ತು ‘ಜಿರಳೆ’ಗಳಿಗೆ ಹೋಲಿಸಿರುವ ಘಟನೆ ಈಗ ದೇಶಾದ್ಯಂತ ದೊಡ್ಡ ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ.

ಹೌದು, ದೆಹಲಿಯಲ್ಲಿ ವಿದ್ಯಾರ್ಥಿಗಳು ನಡೆಸಿದ ‘ಸಂಸತ್ ಚಲೊ’ ಪ್ರತಿಭಟನೆಯನ್ನು ಟೀಕಿಸುವ ರಭಸದಲ್ಲಿ ಗೋವಾ ಬಿಜೆಪಿ ನಾಯಕ ನರೇಂದ್ರ ಸವಾಯ್ಕರ್ ನೀಡಿರುವ ಹೇಳಿಕೆ ಈಗ ತೀವ್ರ ಖಂಡನೆಗೆ ಗುರಿಯಾಗಿದೆ. ಅಷ್ಟಕ್ಕೂ ಸೋಶಿಯಲ್ ಮೀಡಿಯಾದಲ್ಲಿ ಸವಾಯ್ಕರ್ ಮಾಡಿದ್ದ ಪೋಸ್ಟ್‌ನಲ್ಲಿ ನಿಜಕ್ಕೂ ಅಂಥದ್ದೇನಿತ್ತು ಗೊತ್ತಾ?

ತಮ್ಮ ‘ಎಕ್ಸ್’ ಖಾತೆಯಲ್ಲಿ ಭಾರತದ ನಕ್ಷೆಯ ಚಿತ್ರವೊಂದನ್ನು ಹಂಚಿಕೊಂಡಿದ್ದ ನರೇಂದ್ರ ಸವಾಯ್ಕರ್, ಆ ಭೂಪಟದ ಮೇಲೆಲ್ಲಾ ಗೆದ್ದಲು ಮತ್ತು ಜಿರಳೆಗಳು ತುಂಬಿರುವಂತೆ ಗ್ರಾಫಿಕ್ಸ್ ಚಿತ್ರಿಸಿದ್ದರು. ಅಷ್ಟೇ ಅಲ್ಲ, “ಗೆದ್ದಲುಗಳ ಜತೆ ಜಿರಳೆಗಳು! ದೇಶವನ್ನು ಉಳಿಸಿ!” ಎಂಬ ಶೀರ್ಷಿಕೆಯನ್ನೂ ನೀಡಿರೋದಾಗಿ ಕಂಡು ಬಂದಿದೆ.

ನ್ಯಾಯಕ್ಕಾಗಿ ಹೋರಾಡುತ್ತಿರುವ ದೇಶದ ಯುವಜನತೆಯನ್ನು ಈ ರೀತಿ ಕೀಳಾಗಿ ಚಿತ್ರಿಸಿರುವುದಕ್ಕೆ ಪ್ರತಿಪಕ್ಷಗಳು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಪೋಸ್ಟ್ ಹೊರಬೀಳುತ್ತಿದ್ದಂತೆಯೇ ಗೋವಾದಲ್ಲಿ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಾರ್ಟಿ ನಾಯಕರು ಬಿಜೆಪಿಯ ವಿರುದ್ಧ ಸಮರ ಸಾರಿದರು..

ಗೋವಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸುನಿಲ್ ಕೌತಂಕರ್ ಮಾತನಾಡಿ, “ಮುಂದಿನ 24 ಗಂಟೆಗಳ ಒಳಗಾಗಿ ಬಿಜೆಪಿ ನಾಯಕರು ದೇಶದ ಜನತೆಯ ಬಳಿ ಕ್ಷಮೆಯಾಚಿಸಬೇಕು. ಸರ್ಕಾರದ ಲೋಪಗಳನ್ನು ಪ್ರಶ್ನಿಸುವ ಪ್ರಜೆಗಳನ್ನು ‘ದೇಶದ್ರೋಹಿಗಳು’ ಎಂದು ಬಿಂಬಿಸುವುದು ಬಿಜೆಪಿಯ ಕೆಟ್ಟ ಅಭ್ಯಾಸವಾಗಿದೆ. ನೆನಪಿರಲಿ, ಬಿಜೆಪಿ ಎಂದರೆ ಇಡೀ ದೇಶವಲ್ಲ!” ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಇತ್ತ ಎಎಪಿ ನಾಯಕ ಕ್ರೂಜ್ ಸಿಲ್ವಾ ಕೂಡ, “ಪ್ರಜಾಸತ್ತಾತ್ಮಕವಾಗಿ ಪ್ರತಿಭಟಿಸುತ್ತಿರುವ ವಿದ್ಯಾರ್ಥಿಗಳಿಗೆ ಗೆದ್ದಲು ಎಂದು ಕರೆಯುವುದು ತೀರಾ ನಾಚಿಕೆಗೇಡಿನ ಸಂಗತಿ” ಎಂದು ಕಿಡಿಕಾರಿದ್ದಾರೆ.

ಒಟ್ಟಿನಲ್ಲಿ ಹೇಳೋದಾದರೆ, ವಿದ್ಯಾರ್ಥಿಗಳ ಪ್ರತಿಭಟನೆಯನ್ನು ದೇಶಕ್ಕೆ ಬಿದ್ದ ಹುಳುಗಳು ಎಂದು ಹೋಲಿಸಿರುವುದು ಕೇವಲ ರಾಜಕೀಯ ವಿರೋಧವಲ್ಲ, ಸಾರ್ವಜನಿಕರ ಧ್ವನಿಯನ್ನು ಅಡಗಿಸುವ ಯತ್ನ ಎಂದು ಪ್ರತಿಪಕ್ಷಗಳು ವಾದಿಸುತ್ತಿವೆ. 24 ಗಂಟೆಗಳ ಡೆಡ್‌ಲೈನ್ ಬೆನ್ನಲ್ಲೇ ಈ ವಿವಾದಾತ್ಮಕ ಪೋಸ್ಟ್ ಬಗ್ಗೆ ಬಿಜೆಪಿ ನಾಯಕ ನರೇಂದ್ರ ಸವಾಯ್ಕರ್ ಕ್ಷಮೆ ಕೇಳುತ್ತಾರಾ ಇಲ್ಲವೇ ಎಂಬುದನ್ನ ಕಾದು ನೋಡಬೇಕಿದೆ.

About The Author