ಯಾವ ಪುರುಷಾರ್ಥಕ್ಕೆ ಈ ‘ಸಾಧನಾ ಸಮಾವೇಶ’, ಸಿಎಂ ಅವರೇ?: ಆರ್.ಅಶೋಕ್

ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಸಾಧನಾ ಸಮಾವೇಶಕ್ಕಾಗಿ ಸಿದ್ಧತೆ ನಡೆಸಿದ್ದು, ಈ ಬಗ್ಗೆ ಅಶೋಕ್ ಕಿಡಿಕಾರಿದ್ದಾರೆ.

ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಅಶೋಕ್, ಮುಖ್ಯಮಂತ್ರಿಯನ್ನು ಡಮ್ಮಿ ಸಿಎಂ ಎಂದು ವ್ಯಂಗ್ಯವಾಡಿದ್ದಾರೆ. 100 ದಿನಗಳಲ್ಲಿ ಜನರಿಗೆ ತೋರಿಸಲು ಒಂದೇ ಒಂದು ದೊಡ್ಡ ಸಾಧನೆಯೂ ಇಲ್ಲದಿದ್ದಾಗ, ವೈಫಲ್ಯಗಳನ್ನೇ ಸಾಧನೆಗಳೆಂದು ಬಿಂಬಿಸಲು ಸಮಾವೇಶವೇ?

ಇಗೋ ನಿಮ್ಮ 100 ದಿನಗಳ ‘ಸಾಧನೆ’ಗಳ ಅಸಲಿ ಚಿತ್ರಣ ಎಂದಿರುವ ಅಶೋಕ್, ಸಾಲು ಸಾಲಾಗಿ 12 ಪ್ರಶ್ನೆಗಳನ್ನು ಕೇಳಿದ್ದಾರೆ.

1️⃣ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳೆಯರೇ ಇಲ್ಲದ ಸಚಿವ ಸಂಪುಟ ರಚಿಸಿದ ಪುರುಷಾರ್ಥಕ್ಕಾ? 33 ಸಚಿವರು — 0 ಮಹಿಳೆಯರು! ಮಹಿಳೆಯರ ಮತ ಬೇಕು, ಮಹಿಳೆಯರ ಹೆಸರಿನಲ್ಲಿ ಅಧಿಕಾರ ಬೇಕು; ಆದರೆ ಅಧಿಕಾರ ಹಂಚಿಕೆಯಲ್ಲಿ ಮಾತ್ರ ಮಹಿಳೆಯರಿಗೆ ಶೂನ್ಯ ಪ್ರಾತಿನಿಧ್ಯ!

2️⃣ ದಲಿತರ ಹಣದ ದುರ್ಬಳಕೆಯ ಗಂಭೀರ ಆರೋಪದ ನಡುವೆಯೂ ಕಳಂಕಿತರನ್ನು ರಕ್ಷಿಸಿದ ಲಜ್ಜೆಗೇಡಿತನಕ್ಕಾ? ವಾಲ್ಮೀಕಿ ನಿಗಮದ ಹಗರಣದ ಕಳಂಕ ಹೊತ್ತಿರುವ ಭ್ರಷ್ಟರಿಗೆ ಮಂತ್ರಿ ಪದವಿ ಕೊಟ್ಟು ದಲಿತರಿಗೆ ಅವಮಾನ ಮಾಡಿದ್ದಕ್ಕಾ? ಅಥವಾ ದಲಿತರ ಹಣಕ್ಕೆ ನ್ಯಾಯ ಕೊಡದೆ ವಂಚಿಸಿದ ಖುಷಿಗಾ?

3️⃣ ವಿಧಾನಮಂಡಲದ ಚರ್ಚೆಯನ್ನೇ ಕಡೆಗಣಿಸಿ ಪಾರ್ಕ್‌ಗಳ ಮೇಲೆ ಕಣ್ಣು ಹಾಕಿದ ಸಾಧನೆಗಾ? ಸರ್ಕಾರಿ ಉದ್ಯಾನಗಳ 5% ಭೂಮಿಯನ್ನು sale, lease, gift, exchange ಅಥವಾ mortgage ಮಾಡಲು ಅವಕಾಶ ನೀಡುವ ತಿದ್ದುಪಡಿ ತಂದಿರಿ. ಜನರು ವಿರೋಧಿಸಿದಾಗ ಮಾತ್ರ ಬುದ್ಧಿ ಬಂತು; ಕೊನೆಗೆ ಮಸೂದೆಯನ್ನೇ ಹಿಂಪಡೆಯಬೇಕಾಯಿತು! ಮೊದಲು ಹಠ, ನಂತರ ಜನಾಕ್ರೋಶ, ಕೊನೆಗೆ U-turn!? ಈ ಸಮಾವೇಶ ಸರ್ಕಾರದ ಲಜ್ಜೆಗೆಟ್ಟ U-Turn ಗಳನ್ನ ಸಂಭ್ರಮಿಸೋದಕ್ಕ?

4️⃣ ಭೀಕರ ಬರದ ಪರಿಸ್ಥಿತಿಯಲ್ಲೂ ಬರ ಘೋಷಣೆಗೆ ವಿಳಂಬ ಮಾಡಿ ರೈತರ ಬದುಕಿನ ಜೊತೆ ಚೆಲ್ಲಾಟವಾಡಿದ ಸಾಧನೆಗಾ? ಮಳೆ ಕೊರತೆ, ಬೆಳೆ ಹಾನಿ, ರೈತರ ಸಂಕಷ್ಟ , ಎಲ್ಲವೂ ಕಣ್ಣೆದುರಿದ್ದರೂ ಬರ ಘೋಷಣೆ ವಿಳಂಬ ಮತ್ತು ಅಪೂರ್ಣ. ಈ ಸಮಾವೇಶ ಅನ್ನದಾತರನ್ನ ನಿರ್ಲಕ್ಷಿಸಿದ ಸಂಭ್ರಮಕ್ಕಾ?

5️⃣ KPSCಯಲ್ಲಿ ಸರ್ಕಾರಿ ಹುದ್ದೆಗಳನ್ನು 80 ಲಕ್ಷಕ್ಕೆ ಹರಾಜು ಹಾಕಿ ಉದ್ಯೋಗಾಕಾಂಕ್ಷಿ ಯುವಕರ ಭವಿಷ್ಯಕ್ಕೆ ಕೊಳ್ಳಿ ಇಟ್ಟಿದ್ದಕ್ಕಾ? Veterinary Officer ನೇಮಕಾತಿಯ 400 ಹುದ್ದೆಗಳ ಪ್ರಕರಣದಲ್ಲಿ ₹70–80 ಲಕ್ಷದವರೆಗೆ ಲಂಚ ಕೇಳಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಪ್ರಕರಣದಲ್ಲಿ CID ತನಿಖೆಯ ಬಳಿಕ ED 21 ಸ್ಥಳಗಳಲ್ಲಿ ಶೋಧ ನಡೆಸಿದೆ. ಪ್ರತಿಭಾವಂತ ಪ್ರಾಮಾಣಿಕ ಯುವಕರಿಗೆ ಉದ್ಯೋಗ ನೀಡಬೇಕಾದ ಸರ್ಕಾರ, ಹುದ್ದೆಗಳಿಗೆ ‘ರೇಟ್ ಕಾರ್ಡ್’ ಫಿಕ್ಸ್ ಮಾಡಿದ ಸಾಧನೆಗಾ?

6️⃣ ಗೃಹಲಕ್ಷ್ಮಿಯ ಹಣಕ್ಕಾಗಿ ತಾಯಂದಿರನ್ನು ಕಾಯಿಸಿ, ಪರಿಷ್ಕರಣೆ-ವೆರಿಫಿಕೇಶನ್ ಹೆಸರಿನಲ್ಲಿ ಕಿರುಕುಳ ನೀಡುತ್ತಿರುವ ಸಾಧನೆಗಾ? ಒಂದು ಕಡೆ ತಿಂಗಳಿಗೆ ₹2,000 ನೀಡುತ್ತೇವೆ ಎಂದು ಭರವಸೆ ನೀಡಿ, ಈಗ ತಾಯಂದಿರನ್ನ verification, re-verification, correction ಹೆಸರಿನಲ್ಲಿ ಕಚೇರಿ-ಕಚೇರಿ ಅಲೆದಾಡಿಸುವ ಪರಿಸ್ಥಿತಿ ತಂದಿಟ್ಟಿದ್ದೀರಿ. ಇನ್ನೊಂದು ಕಡೆ ಮೂರು ವರ್ಷಗಳಿಂದ ಸತ್ತವರ ಖಾತೆಗಳಿಗೆ, ಒಂದೇ ಹೆಸರಿನವರ ಹತ್ತಾರು ಖಾತೆಗಳಿಗೆ ನೂರಾರು ಕೋಟಿ ಹಣ ಹಾಕಿ ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡಿದ್ದೀರಿ. ಮೇಲಾಗಿ ಇನ್ನೂ 2025ರ ಫೆಬ್ರವರಿ–ಮಾರ್ಚ್‌ನ ಸುಮಾರು ₹5,000 ಕೋಟಿ ಬಾಕಿ ಕುರಿತ ಪ್ರಶ್ನೆಗೂ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕಿದೆ. ಕರ್ನಾಟಕದ ಸ್ವಾಭಿಮಾನಿ ಮಹಿಳೆಯರನ್ನು ಅನುಮಾನಿಸುವ, ಯಾಮಾರಿಸುವ ಖುಷಿಗಾ ಈ ಸಮಾವೇಶ?

7️⃣ ವಯೋವೃದ್ಧರು, ವಿಧವೆಯರು ಮತ್ತು ಅಂಗವಿಕಲರ ಪಿಂಚಣಿಯನ್ನೂ ಕಸಿದುಕೊಂಡ ಸಾಧನೆಗಾ? ದುರ್ಬಲ ವರ್ಗಗಳಿಗೆ ಆಸರೆಯಾಗಬೇಕಾದ ಸಾಮಾಜಿಕ ಭದ್ರತಾ ಪಿಂಚಣಿಗೂ ಬಡ ಫಲಾನುಭವಿಗಳು ಕಚೇರಿಗಳ ಸುತ್ತ ಅಲೆದಾಡುವ ಪರಿಸ್ಥಿತಿ ತಂದಿಟ್ಟಿರುವ ನಿಮ್ಮ ಘನಂದಾರಿ ಆಡಳಿತವನ್ನ ಸಂಭ್ರಮಿಸೋದಕ್ಕಾ?

8️⃣ ‘ಶಕ್ತಿ’ ಯೋಜನೆಯ ಹೊರೆ ಸಾರಿಗೆ ನಿಗಮಗಳ ಬೆನ್ನಿಗೆ ಹಾಕಿ ಅವುಗಳ ಆರ್ಥಿಕ ಸ್ಥಿತಿಯನ್ನು ಹದಗೆಡಿಸಿದ ಸಾಧನೆಗಾ? ಉಚಿತ ಪ್ರಯಾಣದ ರಾಜಕೀಯ ಲಾಭ ಕಾಂಗ್ರೆಸ್‌ಗೆ; ಆದರೆ ಅದರ ಹಣಕಾಸಿನ ಹೊರೆ KSRTC, BMTC ಸೇರಿದಂತೆ ಸಾರಿಗೆ ನಿಗಮಗಳ ಮೇಲೆ. ಘೋಷಣೆ ನಿಮ್ಮದು – ವೋಟು ನಿಮ್ಮದು – ಅಧಿಕಾರ ನಿಮ್ಮದು – ಹೊರೆ ನಿಗಮಗಳದ್ದು – ಅಂತಿಮವಾಗಿ ಹಣ ಪಾವತಿಸಬೇಕಾದದ್ದು ತೆರಿಗೆದಾರು! ಸಾರಿಗೆ ನಿಗಮಗಳನ್ನು ನಿಶ್ಯಕ್ತಗೊಳಿಸಿದ ಸಾಧನೆಗಾ ಈ ಸಮಾವೇಶ?

9️⃣ ಗೃಹಜ್ಯೋತಿ ಹೆಸರಿನಲ್ಲಿ ಉಚಿತ ವಿದ್ಯುತ್ ಕೊಡುವ ಬದಲು verification ಹೆಸರಿನಲ್ಲಿ ಜನರಿಗೆ ‘ವಿದ್ಯುತ್ ಶಾಕ್’ ಕೊಟ್ಟ ಸಾಧನೆಗಾ? ಎಲ್ಲರಿಗೂ 200 ಯುನಿಟ್ ಉಚಿತ ವಿದ್ಯುತ್ ಕೊಡುವುದಾಗಿ ಹೇಳಿ, ಈಗ verification ಹೆಸರಿನಲ್ಲಿ ಜನರನ್ನು ಕಚೇರಿ-ಕಚೇರಿಗೆ ಅಲೆದಾಡಿಸುತ್ತಿರುವ ಖುಷಿಗಾ?

🔟 ‘Brand Bengaluru’ ಮಾಡುತ್ತೇವೆ ಎಂದು ಬೊಗಳೆ ಬಿಟ್ಟು ಇಡೀ ಬೆಂಗಳೂರಿನ ರಸ್ತೆಗಳನ್ನು ಅಗೆದು, ಕಣ್ಣು ಹಾಯಿಸಿದಲ್ಲೆಲ್ಲ ಕಸದ ರಾಶಿ ಕಾಣುವ ಗಾರ್ಬೇಜ್ ಸಿಟಿ ಮಾಡಿ ಇಡೀ ನಗರವನ್ನ ನರಕ ಮಾಡಿದ ಸಾಧನೆಗಾ ಈ ಸಮಾವೇಶ?

1️⃣1️⃣ ‘Township’ ಹೆಸರಿನಲ್ಲಿ ಬಿಡದಿ ಸುತ್ತಮುತ್ತಲಿನ ರೈತರ ಜಮೀನಿನನ್ನು ಕಸಿದುಕೊಳ್ಳುವ ಹುನ್ನಾರ ಹಾಕಿದ ಸಂಭ್ರಮಕ್ಕಾ? ಬಿಡದಿ ಸುತ್ತಮುತ್ತ ಸಾವಿರಾರು ಎಕರೆ ಫಲವತ್ತಾದ ಭೂಮಿಯನ್ನು ರೈತರಿಂದ ಕಸಿದುಕೊಂಡು ರಿಯಲ್ ಎಸ್ಟೇಟ್ ಮಾಫಿಯಾಗೆ ಧಾರೆ ಎರೆದು ಕುರ್ಚಿ ಭದ್ರ ಪಡಿಸಿಕೊಳ್ಳುವ ಮಾಸ್ಟರ್ ಪ್ಲಾನ್ ಮಾಡಿದ್ದಕ್ಕಾ ಈ ಸಮಾವೇಶ?

1️⃣2️⃣ ಸರ್ಕಾರಿ ಶಾಲೆಗಳ ಬಡ ಮಕ್ಕಳ ಭವಿಷ್ಯವನ್ನೇ ನಿರ್ಲಕ್ಷಿಸಿದ ಸಾಧನೆಗಾ? ಶಿಕ್ಷಕರ ಕೊರತೆ, ಪಠ್ಯಪುಸ್ತಕ–ಯೂನಿಫಾರಂ–ಶೂ–ಸಾಕ್ಸ್ ವಿತರಣೆ ವಿಳಂಬ, ಮೂಲಸೌಕರ್ಯದ ಕೊರತೆಯಿಂದ ಕುಸಿಯುತ್ತಿರುವ ಗೋಡೆಗಳು – ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನು ಅಧೋಗತಿಗೆ ತಳ್ಳಿ ಮಕ್ಕಳ ಭವಿಷ್ಯವನ್ನ ಕತ್ತಲೆಗೆ ದೂಡುತ್ತಿರುವ ಸಾಧನೆಗಾ ಈ ಸಮಾವೇಶ?

ಹೇಳಿ, ಡಮ್ಮಿ ಸಿಎಂ ಡಿ.ಕೆ.ಶಿವಕುಮಾರ್ ಅವರೇ – ಇದು ಯಾವ ಸಾಧನೆಗಾಗಿ? ಇದು ಪುರುಷಾರ್ಥಕ್ಕಾಗಿ? ಇದು ಖುಷಿಗಾಗಿ? ಇದು ಸಂಭ್ರಮಕ್ಕಾಗಿ? ಇದು ಹೆಮ್ಮೆಗಾಗಿ? ಎಂದು ಅಶೋಕ್ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

About The Author