ಮುಸ್ಲಿಂ ಹುಡುಗಿಯರನ್ನು ಮದ್ವೆಯಾದ್ರೆ 5 ಲಕ್ಷ ಕೊಡ್ತೇವೆ. ಹೀಗೊಂದು ಅಭಿಯಾನ ಮಾಡಲು ಹಿಂದೂ ಫೈರ್ ಬ್ರ್ಯಾಂಡ್, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮುಂದಾಗಿದ್ದಾರೆ. ಇತ್ತೀಚೆಗೆ ಕೊಪ್ಪಳದಲ್ಲಿ ಗವಿಸಿದ್ದಪ್ಪ ನಾಯಕ್ ಎಂಬ 30 ವರ್ಷದ ಯುವಕನ ಬರ್ಬರ ಹತ್ಯೆಯಾಗಿತ್ತು. ಮುಸ್ಲಿಂ ಯುವತಿಯೊಂದಿಗೆ ಪ್ರೀತಿಸಿತ್ತಿದ್ದ ಎಂಬ ಕಾರಣಕ್ಕೆ, ಸಾದಿಕ್ ಎಂಬಾತನಿಂದ ಕೊಲೆಯಾದ ದೂರು ದಾಖಲಾಗಿದೆ.
ಈ ಹಿನ್ನಲೆ ಮೃತ ಗವಿಸಿದ್ದಪ್ಪನ ಮನೆಗೆ ಭೇಟಿ ನೀಡಿದ ಬಳಿಕ ಬಸನಗೌಡ ಪಾಟೀಲ ಯತ್ನಾಳ್ ಮಾತನಾಡಿದರು. ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಯತ್ನಾಳ್ ಅವರು ಮುಸ್ಲಿಂ ಯುವತಿಯರನ್ನ ಮದುವೆಯಾದರೆ 5 ಲಕ್ಷ ನೀಡುವುದಾಗಿ ಕರೆ ನೀಡಿದ್ದಾರೆ.
ಬಸನಗೌಡ ಪಾಟೀಲ ಯತ್ನಾಳ್ ಅವರು ನೀಡಿರುವ ಈ ಹೇಳಿಕೆ ಈಗ ಸಂಚಲನ ಸೃಷ್ಟಿಸಿದೆ. ಮುಸ್ಲಿಂ ಯುವತಿಯರನ್ನು ಮದುವೆಯಾದರೆ ₹5 ಲಕ್ಷ ರೂಪಾಯಿ ಕೊಡುತ್ತೇವೆ. ಅಭಿಯಾನವನ್ನ ಆರಂಭಿಸುತ್ತೇವೆ ಎಂಬ ಅವರ ಘೋಷಣೆ ಭಾರೀ ಚರ್ಚೆಗೆ ಕಾರಣವಾಗಿದೆ.
ಈ ಬಗ್ಗೆ ನಾವು ಉದ್ರೇಕದಿಂದ ಮಾತನಾಡುತ್ತಿಲ್ಲ. ಆದರೆ ಸಂವಿಧಾನ, ಶಾಂತಿ ಮತ್ತು ಸಹಬಾಳ್ವೆಯ ದೃಷ್ಠಿಯಿಂದ ಯೋಚಿಸಬೇಕು. ಪ್ರತಿಯೊಂದು ಧರ್ಮದಲ್ಲಿಯೂ ನೈತಿಕತೆ, ಪ್ರೇಮ, ಶಾಂತಿ ಮತ್ತು ಸಹಿಷ್ಣುತೆ ಎನ್ನುವ ಮೌಲ್ಯಗಳಿವೆ. ಆದರೆ ಕೆಲವೇ ಕೆಲವರು ಈ ಮೌಲ್ಯಗಳನ್ನು ಮರೆತು, ಧರ್ಮದ ಹೆಸರಿನಲ್ಲಿ ಕೊಲೆ, ದ್ವೇಷ ಹಾಗೂ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ.
ಈ ಘಟನೆಯನ್ನು ಲವ್ ಜಿಹಾದ್ ಎಂದು ಬಣ್ಣಿಸಿ, ಸರ್ಕಾರವು ಹಿಂದುಗಳಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ. ಹಿಂದುಗಳನ್ನು ಕೊಲೆ ಮಾಡುವ ಮನಸ್ಥಿತಿ ಮುಸ್ಲಿಂರಲ್ಲಿದೆ. ರಾಜ್ಯ ಸರ್ಕಾರವು ಅಲ್ಪಸಂಖ್ಯಾತರಿಗೆ ಮಾತ್ರ ರಕ್ಷಣೆ ನೀಡುತ್ತಿದೆ ಎಂದು ಕಿಡಿಕಾರಿದ್ದಾರೆ. ಈ ಸರ್ಕಾರದಲ್ಲಿ ಹಿಂದುಗಳಿಗೆ ರಕ್ಷಣೆ ಇಲ್ಲ ಎಂದು ಯತ್ನಾಳ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಸಾಬರ ಸರ್ಕಾರವಾಗಿದೆ, ಮಚ್ಚು ತೆಗೆದುಕೊಂಡು ಓಡಾಡುವವರಿಗೆ ಬೆಂಬಲವಿದೆ ಎಂದು ಟೀಕಿಸಿದ್ದಾರೆ. ಸರ್ಕಾರವೇ ಈ ಘಟನೆಗೆ ಹೊಣೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.