ಪಶ್ಚಿಮ ಬಂಗಾಳ: ಮಹಿಳೆಯೊಬ್ಬರ ಹೊಟ್ಟೆಯಿಂದ ವೈದ್ಯರು ಬರೋಬ್ಬರಿ ಒಂದೂವರೆ ಕೆ.ಜಿಯಷ್ಟು ಅಭರಣಗಳನ್ನು ಶಸ್ತ್ರ ಚಿಕಿತ್ಸೆ ಮೂಲಕ ಹೊರತೆಗೆದ ಘಟನೆ ಪ.ಬಂಗಾಳದ ಬಿರ್ಭೂಮ್ ನಲ್ಲಿ ನಡೆದಿದೆ.
ಮಾನಸಿಕ ಅಸ್ವಸ್ಥೆ ಮಹಿಳೆಯೊಬ್ಬರು ಮನೆಯಲ್ಲಿಡಲಾಗಿದ್ದ ಆಭರಣಗಳನ್ನು ನುಂಗು ಖಯಾಲಿ ಬೆಳೆಸಿಕೊಂಡಿದ್ದಾಳೆ. ಮನೆಯಲ್ಲಿ ಸಿಕ್ಕ ಬಳೆಗಳು, ಬ್ರೇಸ್ಲೆಟ್, ಮೂಗುತಿ, ಕಿವಿಯೊಲೆ, ವಾಚ್, ಕಾಲ್ಗೆಜ್ಜೆ ಅಲ್ಲದೆ 5 ಮತ್ತು 10 ರೂಪಾಯಿ ನಾಣ್ಯಗಳನ್ನು ನುಂಗಿದ್ದಾಳೆ. ಯಾರಿಗೂ ಕಾಣದಂತೆ ಈ ಕೃತ್ಯವೆಸಗುತ್ತಿದ್ದರಿಂದ ಈ ವಿಷಯ ಮನೆಮಂದಿಗೆ ತಿಳಿದಿರಲಿಲ್ಲ. ಇನ್ನು ಮನೆಯಲ್ಲಿಟ್ಟಿದ್ದ ಆಭರಣಗಳು ಮಾಯವಾಗುತ್ತಿದ್ದ ಬಗ್ಗೆ ಆಕೆಯನ್ನು ಪ್ರಶ್ನಿಸಿದಾಗಲೆಲ್ಲಾ ಆಕೆ ಅಳುತ್ತಿದ್ದಳಂತೆ. ಹೀಗಾಗಿ ಮನೆಯವರಿಗೂ ಸಂಶಯ ಬಂದು ಈಕೆಯ ಮೇಲೆ ನಿಗಾ ಇಟ್ಟ ಹೊರತಾಗಿಯೂ ತನ್ನ ಖಯಾಲಿ ಮುಂದುವರಿಸಿದ್ದಳು ಎನ್ನಲಾಗಿದೆ.
ಇನ್ನು ಲೋಹದ ವಸ್ತುಗಳು ಹೊಟ್ಟೆ ಸೇರಿದ ಪರಿಣಾಮ ಮಾನಸಿಕ ಅಸ್ವಸ್ಥ ಮಹಿಳೆ ಊಟ ಮಾಡಿದಾಗಲೆಲ್ಲಾ ವಾಂತಿ ಮಾಡಿಕೊಳ್ಳುತ್ತಿದ್ದಾಗ ಕುಟುಂಬಸ್ಥರು ಆಕೆಯನ್ನು ವೈದ್ಯರ ಬಳಿ ಕರೆದೊಯ್ದರು. ಎರಡು ತಿಂಗಳ ಕಾಲ ಆಕೆಗೆ ಏನಾಯಿತು ಅಂತ ಯಾವ ಆಸ್ಪತ್ರೆ ವೈದ್ಯರು ಸಹ ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ಕಡೆಗೆ ರಾಂಪುರ್ಹತ್ ನ ಸರ್ಕಾರಿ ಮಹಾವಿದ್ಯಾಲಯದ ಆಸ್ಪತ್ರೆ ವೈದ್ಯರು ಎಕ್ಸ್ ರೇ ಮೂಲಕ ಮಹಿಳೆ ಆಭರಣಗಳು ಹೊಟ್ಟೆಯಲ್ಲಿದ್ದಿದ್ದನ್ನು ಕಂಡುಹಿಡಿದು ಕೂಡಲೇ ಶಸ್ತ್ರ ಚಿಕಿತ್ಸೆ ನಡೆಸಿ ಅವುಗಳನ್ನೆಲ್ಲಾ ಹೊರತೆಗೆದಿದ್ದಾರೆ. ಆಭರಣಗಳ ಪೈಕಿ ಹೆಚ್ಚಿನವು ತಾಮ್ರ ಮತ್ತು ಹಿತ್ತಾಳೆಯದ್ದಾಗಿತ್ತು. ಇನ್ನು ಕೆಲ ಚಿನ್ನದ ಆಭರಣಗಳನ್ನೂ ಸಹ ಮಹಿಳೆಯ ಹೊಟ್ಟೆಯಿಂದ ಹೊರತೆಗೆಯಲಾಗಿದೆ.