Hubli News: ಹುಬ್ಬಳ್ಳಿ: ಕೇಂದ್ರ ಸರ್ಕಾರ ಮುಂದಿನ ಐದು ವರ್ಷಗಳಲ್ಲಿ ದೇಶದ ಮೂಲ ಸೌಕರ್ಯ ಅಭಿವೃದ್ಧಿಗೆ 1೦೦ ಲಕ್ಷ ಕೋಟಿ ರೂ. ಯೋಜನೆ ಹಾಕಿಕೊಂಡಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.
ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ಆಯೋಜಿಸಿರುವ ‘ವೀರಶೈವ ಲಿಂಗಾಯತ ಗ್ಲೋಬಲ್ ಬಿಜಿನೆಸ್ ಕಾನಕ್ಲೇವ್- 2024’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆರ್ಥಿಕವಾಗಿ ಬೆಳೆಯುತ್ತಿರುವ ದೇಶಗಳ ಪಟ್ಟಿಯಲ್ಲಿ ಭಾರತ 5ನೇ ಸ್ಥಾನ ಪಡೆದಿದೆ. ಮುಂಬರುವ ದಿನಗಳಲ್ಲಿ 3ನೇ ಸ್ಥಾನ ತಲುಪಲಿದ್ದು, 2047ರ ಹೊತ್ತಿಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ ಎಂದರು.
ವೀರಶೈವ ಲಿಂಗಾಯತರು ಉದ್ಯೋಗ ಸೃಷ್ಟಿಕರ್ತರು: ವೀರಶೈವ ಲಿಂಗಾಯತರು ಕರ್ನಾಟಕಕ್ಕೆ ಸೀಮಿತವಾಗಿಲ್ಲ. ನಮ್ಮ ರಾಜ್ಯ ಮಾತ್ರವಲ್ಲದೇ ದೇಶ- ವಿದೇಶಗಳಲ್ಲೂ ಉದ್ಯೋಗ ಸೃಷ್ಟಿಸುವವರು ಎಂದು ಸಚಿವ ಜೋಶಿ ಪ್ರತಿಪಾದಿಸಿದರು.
ಜಗತ್ತಿನ ವಿವಿಧ ದೇಶಗಳಲ್ಲಿ ಲಿಂಗಾಯತ ವೀರಶೈವರು ಉತ್ತಮ ಸ್ಥಾನ ಮಾನ, ವ್ಯಾಪಾರ, ಉದ್ದಿಮೆಗಳನ್ನು ಸ್ಥಾಪಿಸಿಕೊಂಡು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ರಾಜ್ಯದಲ್ಲೂ ಉದ್ದಿಮೆಗಳನ್ನು ಸ್ಥಾಪಿಸಿರುವ ಈ ಬಲಿಷ್ಠ ಸಮುದಾಯ ಉದ್ಯೋಗ ಮಾಡುವುದಕ್ಕಿಂತ ಉದ್ಯೋಗ ಕಲ್ಪಿಸುವಲ್ಲಿ, ಸೃಷ್ಟಿವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.
ಬಸವಣ್ಣನ ಕಾಲದಿಂದಲೂ ವೀರಶೈವ ಲಿಂಗಾಯತ ಸಮುದಾಯ ಪ್ರಬಲವಾಗಿದೆ. ಹಲವು ದೇಶಗಳ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಮತದಾನದ ಹಕ್ಕಿರಲಿಲ್ಲ. ಆದರೆ, ಮಹಿಳೆಯರಿಗೆ ಆ ಹಕ್ಕು ಮತ್ತು ಪ್ರಭುತ್ವವನ್ನು ನೀಡಿದ್ದೇ ಬಸವಣ್ಣನವರ ಅನುಭವ ಮಂಟಪ ಎಂದು ಹೇಳಿದರು.
ಸಂಸತ್ ಭವನಕ್ಕೆ ಭಾರತ ಮಂಟಪ ಹೆಸರು: ಬಸವಣ್ಣವನರ ಅನುಭವ ಮಂಟಪದ ಮಾದರಿಯಲ್ಲೇ ನೂತನ ಸಂಸತ್ ಭವನ ನಿರ್ಮಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ “ಭಾರತ ಮಂಟಪ” ಎಂದು ಹೆಸರಿಡಲಾಗಿದೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇಡೀ ಜಗತ್ತೇ ಕೊಂಡಾಡುತ್ತಿದೆ. ಇದೇ ಕಾರಣಕ್ಕೆ ಲಂಡನ್‌ನಲ್ಲಿ ಬಸವಣ್ಣನವರ ಮೂರ್ತಿ ಪ್ರತಿಷ್ಠಾಪಿಸಲಾಗಿದೆ ಎಂದು ಜೋಶಿ ಪ್ರತಿಪಾದಿಸಿದರು.
ಉದ್ಯಮಿಗಳಾಗಲು ಕರೆ: ವೀರಶೈವ ಲಿಂಗಾಯತ ಸಮಾಜವು ಸದಾ ಇತರರಿಗೆ ಕೆಲಸ ಕೊಟ್ಟು ಆಸರೆ ನೀಡುತ್ತ ಬಂದಿದೆ. ಈ ಸಮಾಜದ ಯುವಕರು ಮುಂದೆಯೂ ಉದ್ಯಮಿಗಳಾಗಿ ಮುಂದುವರಿಯಬೇಕೆಂದು ಸಚಿವ ಪ್ರಲ್ಹಾದ ಜೋಶಿ ಸಲಹೆ ನೀಡಿದರು.
ಕಳೆದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತವನ್ನು ಜಗತ್ತು ನೋಡುವ ದೃಷ್ಟಿಕೋನವೇ ಬದಲಾಗಿದೆ ಎಂದು ಹೇಳಿದರು.
ಕೆಎಲ್ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಮಾತನಾಡಿ, ಕೃಷಿ ಹಾಗೂ ವ್ಯಾಪಾರದಲ್ಲಿ ವೀರಶೈವ ಸಮಾಜ ಮೊದಲಿನಿಂದಲೂ ಹತ್ತಾರು ಕೈಗಳಿಗೆ ಕೆಲಸ ಕೊಡುತ್ತ ಬಂದಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಒಗ್ಗಟ್ಟಿನ ಕೊರತೆಯಿಂದಾಗಿ ಅವಕಾಶ ವಂಚಿತವಾಗುತ್ತಿದೆ. ಇದೀಗ ಮತ್ತೆ ಸಂಘಟನೆ ಮಾಡುತ್ತಿರುವುದು ಖುಷಿಯ ವಿಚಾರ ಎಂದು ಹೇಳಿದರು.
ಕೆಎಲ್ಇ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನ ವೇಗಕ್ಕೆ ತಕ್ಕಂತೆ ಪ್ರತಿಯೊಬ್ಬರು ಹೆಜ್ಜೆ ಹಾಕಬೇಕಿದೆ. ಸಾಧನೆಯ ಹಾದಿಯಲ್ಲಿರುವ ಯುವಕರು ಒಂದಿಷ್ಟು ಸಾಧನೆ ಮಾಡಲಿ ಎಂದು ಕರೆ ನೀಡಿದರು.
ಕೆಎಲ್ಇ ತಾಂತ್ರಿಕ ವಿವಿ ಕುಲಪತಿ ಡಾ. ಅಶೋಕ ಶೆಟ್ಟರ್, ಬಿಜಿನೆಸ್ ಕಾನ್ಕ್ಲೇವ್ ಮುಖ್ಯಸಂಚಾಲಕ ಸಂತೋಷ ಕೆಂಚಾಂಬ, ಸಹ ಸಂಚಾಲಕರಾದ ರಮೇಶ ಪಾಟೀಲ, ಚನ್ನು ಹೊಸಮನಿ, ಐಎಲ್ ಐ ಹುಬ್ಬಳ್ಳಿ ವಿಭಾಗದ ಅಧ್ಯಕ್ಷ ರವಿರಾಜ ಕಮ್ಮಾರ, ಜಿ.ಜಿ. ದ್ಯಾವನಗೌಡರ, ಧರ್ಮಪ್ರಸಾದ, ವೀರೇಶ, ಶಿವಪ್ರಸಾದ, ಜಗದೀಶ ನಾಯಕ ಇತರರು ಉಪಸ್ಥಿತರಿದ್ದರು.
ಪ್ರದರ್ಶನ ಮೇಳ:
ಬಿಜಿನೆಸ್ ಕಾನ್ಕ್ಲೇವ್ ಮೂರು ದಿನಗಳವರೆಗೆ ನಡೆಯಲಿದ್ದು, ಇದರ ಅಂಗವಾಗಿ ಬಿವಿಬಿ ಆವರಣದಲ್ಲಿ ಸಮಾಜದ ಉದ್ಯಮಿಗಳು ಉತ್ಪಾದಿಸಿದ ವಸ್ತು ಪ್ರದರ್ಶನ ಏರ್ಪಡಿಸಿದ್ದು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರದರ್ಶನ ಮೇಳದ ಉದ್ಘಾಟನೆ ನೆರವೇರಿಸಿದರು.
ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ಹೊರಹಾಕಿದ ಬಾಲಿವುಡ್ ಸೆಲೆಬ್ರಿಟಿಗಳು..
ತ್ರಿಷಾ ವಿರುದ್ಧ 25 ಲಕ್ಷ ಪಡೆದ ಆರೋಪ ಹಾಕಿದ್ದ ಮುಖಂಡನ ವಿರುದ್ಧ ಕಾನೂನು ಸಮರ..