Hubli News: ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಡ್ರಗ್ ಫೆಡ್ಲರ್ ಮೇಲೆ 12 ಡ್ರಗ್ಸ್ ಪ್ರಕರಣ ದಾಖಲು ಮಾಡಿದ್ದು, 64ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಆಯುಕ್ತರಾದ ಎನ್.ಶಶಿಕುಮಾರ್ ಹೇಳಿದರು.
ನಗರದಲ್ಲಿಂದು ಸ್ಪೆಷಲ್ ಡ್ರೈವ್ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಈಗಾಗಲೇ ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಗಾಂಜಾ ವಹಿವಾಟು, ಮಾದಕ ವಸ್ತುಗಳ ಬಳಕೆ ಜೋರಾಗಿರುವ ಹಿನ್ನೆಲೆಯಲ್ಲಿ ಸ್ಪೆಷಲ್ ಡ್ರೈವ್ ಮಾಡಲಾಗುತ್ತಿದೆ ಎಂದರು.
ಒಟ್ಟು 467 ಜನರನ್ನು ವಶಕ್ಕೆ ಪಡೆದು ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಲಾಗಿದೆ. ಹುಬ್ಬಳ್ಳಿಯ ಕಿಮ್ಸ್, ಧಾರವಾಡದ ಎಸ್.ಡಿ.ಎಂ, ಡಿಮಾನ್ಸ್ ಗಳಲ್ಲಿ ತಪಾಸಣೆ ಮಾಡಲಾಗಿದ್ದು, ಕಳೆದ ಭಾನುವಾರ ಒಂದನೇ ಸುತ್ತಿನ ಜಾಗೃತಿ ಕಾರ್ಯಗಾರ ಮಾಡಿದ್ದೇವೆ. ಇಂದು ಮತ್ತೆ ಎರಡನೇ ಸುತ್ತಿನ ಜಾಗೃತಿ ಕಾರ್ಯಗಾರ ಮಾಡಲಾಗಿದ್ದು,467 ಗಾಂಜಾ ವ್ಯಸನಿಗಳಲ್ಲಿ 251 ಜನರ ರಿಸಲ್ಟ್ ಪಾಸಿಟಿವ್ ಬಂದಿದೆ. 216 ಜನರ ವೈದ್ಯಕೀಯ ಪರೀಕ್ಷೆ ರಿಪೋರ್ಟ್ ನೆಗೆಟಿವ್ ಬಂದಿದ್ದು, ವಶಕ್ಕೆ ಪಡೆದವರಲ್ಲಿ 45 ಜನರ ಮೇಲೆ ದೂರು ದಾಖಲು ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ವ್ಯಸನಿಗಳ ಪೋಷಕರಿಗೂ ಪೊಲೀಸರಿಂದ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಮಾದಕ ವಸ್ತುಗಳ ವ್ಯಸನದಿಂದ ಹೊರ ಬರಲು ಸಲಹೆ ನೀಡಲಾಗುತ್ತಿದೆ. ಮಕ್ಕಳ ನಡತೆಯಿಂದ ಬೇಸತ್ತು ಪೋಷಕರು ಕಣ್ಣೀರು ಹಾಕುತ್ತಿದ್ದಾರೆ. ಈ ಬಗ್ಗೆ ಪಾಲಕರು ತಮ್ಮ ಮಕ್ಕಳ ಬಗ್ಗೆ ನಿಗಾವಹಿಸಬೇಕು ಎಂದು ಅವರು ಸೂಚನೆ ನೀಡಿದರು.