Sunday, November 16, 2025

Latest Posts

CM ಉಪಸ್ಥಿತಿಯಲ್ಲಿ 13 ಮಂದಿ ಅಸ್ವಸ್ಥ ; ಅಸಲಿ ಕಾರಣ ಬಿಚ್ಚಿಟ್ಟ ವರಿಷ್ಠಾಧಿಕಾರಿ

- Advertisement -

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಅಶೋಕ ಜನಮನ-2025 ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ವೇಳೆ ನೂಕುನುಗ್ಗಲು ಉಂಟಾಗಿ ಹಲವರು ಅಸ್ವಸ್ಥರಾಗಿದ ಘಟನೆ ನಡೆದಿದೆ. ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ಅರುಣ್ ಮಾಹಿತಿ ನೀಡಿದ್ದು, ಘಟನೆಯಲ್ಲಿ ಒಟ್ಟು 13 ಮಂದಿ ಅಸ್ವಸ್ಥರಾಗಿದ್ದರು. ಆದರೆ ಎಲ್ಲರೂ ಈಗ ಪೂರ್ಣ ಚೇತರಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಆಹಾರ ಮತ್ತು ಉಡುಗೊರೆ ವಿತರಣೆ ವಿಳಂಬವಾದ ಹಿನ್ನೆಲೆ, ಕೆಲವು ಮಹಿಳೆಯರು ಹೈಪೊಗ್ಲೈಸಿಮಿಯಾ ಅಥವಾ ನಿರ್ಜಲೀಕರಣದಿಂದ ಅಸ್ವಸ್ಥರಾಗಿದ್ದರು. ಕೆಲವರಿಗೆ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಕೆಲವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಎಲ್ಲರೂ ಚೇತರಿಸಿಕೊಂಡು ಮನೆಗೆ ತೆರಳಿದ್ದಾರೆ. ಘಟನೆಯಲ್ಲಿ ಯಾರಿಗೂ ಗಂಭೀರವಾದ ಹಾನಿಯಾಗಿಲ್ಲ ಎಂದು ಡಾ. ಅರುಣ್ ಸ್ಪಷ್ಟಪಡಿಸಿದ್ದಾರೆ.

ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಅಶೋಕ್ ರೈ ಅವರ ಟ್ರಸ್ಟ್ ವತಿಯಿಂದ ಜನರಿಗೆ ತಟ್ಟೆ ಮತ್ತು ವಸ್ತ್ರ ಹಂಚಿಕೆಯಾಗಿತ್ತು. ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದ್ದರು. ಆದರೆ ಕ್ರೀಡಾಂಗಣದ ಸಾಮರ್ಥ್ಯಕ್ಕಿಂತ ಹೆಚ್ಚು ಜನರು ಆಗಮಿಸಿದ್ದರಿಂದ ಸ್ಥಳದಲ್ಲಿ ನೂಕುನುಗ್ಗಲು ಉಂಟಾಗಿ ಉಸಿರಾಡಲು ಸಹ ತೊಂದರೆ ಉಂಟಾದರೆಂದು ವರದಿಯಾಗಿದೆ. ಮಳೆ ಹಿನ್ನೆಲೆ ಮೈದಾನ ಕೆಸರುಮಯವಾಗಿದ್ದು, ಸರಿಯಾದ ವ್ಯವಸ್ಥೆಯಿಲ್ಲ ಎಂಬ ಅಸಮಾಧಾನವೂ ವ್ಯಕ್ತವಾಯಿತು.

ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಆಯೋಜಕರಿಗೆ ಪೂರ್ವದಲ್ಲಿ ಪತ್ರ ಬರೆದು ಹೆಚ್ಚಿನ ಆಸನ ವ್ಯವಸ್ಥೆ ಮಾಡುವಂತೆ ಸೂಚಿಸಿತ್ತು. ಆರಂಭದಲ್ಲಿ ಅಲ್ಪ ಸಂಖ್ಯೆಯ ಕುರ್ಚಿಗಳಷ್ಟೇ ಇರಿಸಿದ ಆಯೋಜಕರು ನಂತರ ಪೊಲೀಸ್ ಇಲಾಖೆಯ ಸಲಹೆ ಮೇರೆಗೆ ಹೆಚ್ಚುವರಿ ಆಸನ ವ್ಯವಸ್ಥೆ ಮಾಡಿದ್ದರು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss