Saturday, November 15, 2025

Latest Posts

‘ಹಾಸನಾಂಬೆ’ ದರ್ಶನಕ್ಕೆ ಇನ್ನೊಂದೆ ದಿನ ಬಾಕಿ – ಭಕ್ತರ ಭರ್ತಿಯಿಂದ ದಾಖಲೆ ಬ್ರೇಕ್!

- Advertisement -

ಹಾಸನಾಂಬೆಯ ಉತ್ಸವ ಅಕ್ಟೋಬರ್ 22 ನಾಳೆ ಕೊನೆಗೊಳ್ಳಲಿದೆ. ಕಳೆದ 12 ದಿನಗಳಿಂದ ದೇಶದ ಮೂಲೆ ಮೂಲೆಗಳಿಂದ ಹರಿದು ಬಂದ ಭಕ್ತ ಸಾಗರ ಹಾಸನಾಂಬೆಯ ಆಶೀರ್ವಾದ ಪಡೆಯುತ್ತಿದ್ದಾರೆ. 23 ಲಕ್ಷಕ್ಕೂ ಅಧಿಕ ಭಕ್ತರು ದರ್ಶನ ಪಡೆದುಕೊಂಡಿದ್ದಾರೆ. ಟಿಕೆಟ್​ ಹಾಗೂ ಲಡ್ಡು ಪ್ರಸಾದ ಮಾರಾಟದಿಂದ ಬರೋಬ್ಬರಿ 17 ಕೋಟಿ ರೂ ಹೆಚ್ಚು ಆದಾಯ ಹರಿದು ಬಂದಿದೆ. ಆ ಮೂಲಕ ಹಾಸನಾಂಬೆ ದರ್ಶನೋತ್ಸವದ ಈವರೆಗಿನ ಎಲ್ಲಾ ದಾಖಲೆಗಳನ್ನು ಮೀರಿಸಿದೆ.

ಅಕ್ಟೋಬರ್ 9 ರಂದು ದೇಗುಲದ ಬಾಗಿಲು ತೆರೆಯಲ್ಪಟ್ಟಿದ್ದು, 10 ರಿಂದ ಭಕ್ತರಿಗೆ ದರ್ಶನಾವಕಾಶ ನೀಡಲಾಯಿತು. ಮೊದಲ ನಾಲ್ಕು ದಿನಗಳಲ್ಲಿ ದಿನವೂ ಒಟ್ಟಾರೆ ಒಂದು ಲಕ್ಷಕ್ಕೂ ಅಧಿಕ ಭಕ್ತರು ಭಕ್ತಿಧಾಮಕ್ಕೆ ಭೇಟಿ ನೀಡಿದ್ದಾರೆ. 17ನೇ ಅಕ್ಟೋಬರ್ ಏಕಾದಶಿ ಒಂದೇ ದಿನ ನಾಲ್ಕು ಲಕ್ಷಕ್ಕೂ ಹೆಚ್ಚು ಜನ ದರ್ಶನ ಪಡೆದರು. ನಂತರದ ದಿನಗಳಲ್ಲಿ 2 ರಿಂದ 2.5 ಲಕ್ಷ ಭಕ್ತರು ದರ್ಶನ ಪಡೆದಿದ್ದಾರೆ.

ಕೇವಲ ಭಕ್ತರು ಮಾತ್ರವಲ್ಲ ದೇಶದ ವಿವಿಧ ಭಾಗಗಳಿಂದ ಹಾಗೂ ಗಣ್ಯರು, ರಾಜಕೀಯ ನಾಯಕರು, ಸಿನಿಮಾ ತಾರೆಯರು, ಮಠಾಧೀಶರು ಸೇರಿದಂತೆ ಹಲವರು ಹಾಸನಾಂಬೆಯ ದರ್ಶನ ಪಡೆದಿದ್ದಾರೆ. ನಿನ್ನೆ ವಿಪಕ್ಷ ನಾಯಕ ಆರ್ ಅಶೋಕ್, ಶಾಸಕರುಗಳಾದ ಜಿಟಿ ದೇವೇಗೌಡ, ಭಾಗೀರತಿ, ಸಿಎನ್ ಬಾಲಕೃಷ್ಣ, ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಸೇರಿ ಹಲವು ಗಣ್ಯರು ದೇವಿ ದರ್ಶನ ಪಡೆದರು. ಸಾರಾಗೋವಿಂದ, ನಟ ವಿಜಯ ರಾಘವೇಂದ್ರ ಸೇರಿ ಹಲವು ಗಣ್ಯರು ಶಕ್ತಿ ದೇವತೆಗೆ ನಮಿಸಿದ್ದಾರೆ.

12ನೇ ದಿವನಾದ ಇಂದು ಕೂಡ ಮಂಗಳವಾರ ಆಗಿರುವುದರಿಂದ ಅಪಾರ ಸಂಖ್ಯೆಯ ಭಕ್ತರು ಹಾಸನಾಂಬೆ ದರ್ಶನಕ್ಕಾಗಿ ಕಾಯುತ್ತಿದ್ದಾರೆ. ದರ್ಶನದ ಸಂಭ್ರಮ ಈ ವರ್ಷ ಹೆಚ್ಚಾಗಿದ್ದು, ನಾಳೆ ಸಂಜೆಯ ವೇಳೆಗೆ ಸಾರ್ವಜನಿಕರ ದರ್ಶನಕ್ಕೆ ತೆರೆಬೀಳಲಿದೆ. ಹಾಸನ ಜಿಲ್ಲೆ ಅಧಿಕಾರಿಗಳು ಭಕ್ತರಿಗೆ ಸೂಕ್ತ ವ್ಯವಸ್ಥೆ ಮಾಡಲು ಸಿದ್ಧರಾಗಿದ್ದಾರೆ. ಇಂದು ಬೆಳಿಗ್ಗೆ 5 ಗಂಟೆಯಿಂದ ಹಾಸನಾಂಬೆ ದರ್ಶನ ಆರಂಭವಾಗಿದ್ದು ಮಧ್ಯಾಹ್ನ 2 ಗಂಟೆವರೆಗೆ ನಿರಂತವಾಗಿ ದರ್ಶನ ನಡೆಯಲಿದೆ.

2 ಗಂಟೆಯಿಂದ 3-30ರವರೆಗೆ ನೈವೇದ್ಯಕ್ಕಾಗಿ ದೇಗುಲ ಮುಚ್ಚಿರಲಿದ್ದು, ನಂತರ ರಾತ್ರಿವರೆಗೂ ಹಾಸನಾಂಬೆ ದರ್ಶನ ಭಾಗ್ಯ ಸಿಗಲಿದೆ. ಒಟ್ಟಾರೆ, ವರ್ಷಕ್ಕೆ ಒಂದೇ ಬಾರಿ ಸಿಗುವ ಈ ಪುಣ್ಯಕ್ಷೇತ್ರದ ಹಾಸನಾಂಬೆಯ ದರ್ಶನವು ನಾಳೆ ಅಂತ್ಯಗೊಳ್ಳಲಿದೆ. ಲಕ್ಷಾಂತರ ಭಕ್ತರು ಮಹಾಮಯಿ ದೇವಿಯ ಆಶೀರ್ವಾದ ಪಡೆದು ತಮ್ಮ ಕಷ್ಟಗಳ ನಿವಾರಣೆಗೆ ಹಾಗೂ ಇಷ್ಟಾರ್ಥಗಳ ಸಾಧನೆಗಾಗಿ ದೇವಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss